ಭಾನುವಾರ, ಸೆಪ್ಟೆಂಬರ್ 26, 2021
24 °C

ಕೋಲ್ಕತ್ತ: ಬಿಜೆಪಿ ಸಂಸದ ಅರ್ಜುನ್‌ ಸಿಂಗ್‌ ಮನೆಯ ಸಮೀಪ ಬಾಂಬ್‌ ಎಸೆತ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬಿಜೆಪಿ ಸಂಸದ ಅರ್ಜುನ್‌ ಸಿಂಗ್‌

ಕೋಲ್ಕತ್ತ: ಬಿಜೆಪಿ ಸಂಸದ ಅರ್ಜುನ್‌ ಸಿಂಗ್‌ ಅವರ ಮನೆಯ ಸಮೀಪದಲ್ಲಿ ಇಂದು ಬೆಳಗ್ಗೆ ಮೂರು ಕಚ್ಚಾ ಬಾಂಬ್‌ಗಳನ್ನು ಎಸೆಯಲಾಗಿದೆ.

ಕೋಲ್ಕತ್ತದಿಂದ ಸುಮಾರು 100 ಕಿ.ಮೀ. ದೂರದ ಜಗತ್‌ದಲ್‌ನಲ್ಲಿರುವ ಅರ್ಜುನ್‌ ಸಿಂಗ್‌ ಅವರ ಮನೆಯ ಗೇಟ್‌ಗೆ ಬಾಂಬ್‌ಗಳು ಅಪ್ಪಳಿಸಿದ್ದು, ಕಬ್ಬಿಣದ ಗೇಟ್‌ಗೆ ಹಾನಿಯಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೆಳಗ್ಗೆ 6:30ಕ್ಕೆ ಬಾಂಬ್‌ಗಳು ಸ್ಫೋಟಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಸಂಸದ ಅರ್ಜುನ್‌ ಸಿಂಗ್‌ ಪ್ರಸ್ತುತ ದೆಹಲಿಯಲ್ಲಿದ್ದು, ಘಟನೆಯ ಕುರಿತು ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಬಿಜೆಪಿ ಮುಖಂಡ ದಿಲೀಪ್‌ ಘೋಷ್‌, ಹಂತಕರು ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ಗೆ ಸೇರಿದವರು ಆಗಿರಬಹುದು ಎಂದು ಆರೋಪಿಸಿದ್ದಾರೆ.

ಸೂಕ್ತ ಕ್ರಮಕೈಗೊಳ್ಳುವಂತೆ ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್‌ ಧನಕರ್‌ ಅವರು ಬಂಗಾಳದ ಪೊಲೀಸರಿಗೆ ಆಗ್ರಹಿಸಿದ್ದಾರೆ. 'ಪಶ್ಚಿಮ ಬಂಗಾಳದಲ್ಲಿ ಉದ್ದೇಶಪೂರ್ವಕ ಹಿಂಸಾಚಾರಗಳು ಕಡಿಮೆಯಾಗುವ ಯಾವುದೇ ಲಕ್ಷಣಗಳೂ ಕಾಣುತ್ತಿಲ್ಲ. ಸಂಸದ ಅರ್ಜುನ್‌ ಸಿಂಗ್‌ ಅವರ ಮನೆಯ ಹೊರಗೆ ಇಂದು ಬೆಳಿಗ್ಗೆ ಬಾಂಬ್‌ ಸ್ಫೋಟ ಆಗಿರುವುದು ಕಾನೂನು ಮತ್ತು ಸುವ್ಯವಸ್ಥೆಯ ಕುರಿತು ಚಿಂತೆಗೀಡು ಮಾಡಿದೆ. ಬಂಗಾಳದ ಪೊಲೀಸರಿಂದ ಸೂಕ್ತ ಕ್ರಮವನ್ನು ನಿರೀಕ್ಷಿಸುತ್ತೇನೆ' ಎಂದಿದ್ದಾರೆ.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಟ್ಯಾಗ್‌ ಮಾಡಿ, ಅವರ ಭದ್ರತೆಯ ಕುರಿತು ಈ ಹಿಂದೆಯೂ ಪ್ರಸ್ತಾಪಿಸಲಾಗಿತ್ತು ಎಂದು ಟ್ವೀಟಿಸಿದ್ದಾರೆ.

ಬಂಗಾಳ ಬಿಜೆಪಿಯಲ್ಲಿನ ಆಂತರಿಕ ವೈಷಮ್ಯದಿಂದಾಗಿ ಬಾಂಬ್‌ ಸ್ಫೋಟ ನಡೆದಿರುವುದಾಗಿ ತೃಣಮೂಲ ಕಾಂಗ್ರೆಸ್‌ ಪ್ರತಿಕ್ರಿಯಿಸಿರುವುದಾಗಿ ವರದಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು