ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಾಹ್ಮಣ–ಬನಿಯಾಗಳು ನನ್ನ ಕಿಸೆಯಲ್ಲಿದ್ದಾರೆ: ಬಿಜೆಪಿ ನಾಯಕ ಮುರಳೀಧರ ರಾವ್‌

Last Updated 9 ನವೆಂಬರ್ 2021, 5:48 IST
ಅಕ್ಷರ ಗಾತ್ರ

ಭೋಪಾಲ್‌: ‘ಬ್ರಾಹ್ಮಣ ಮತ್ತು ಬನಿಯಾ ಸಮುದಾಯಗಳು ನನ್ನ ಜೇಬಿನಲ್ಲಿವೆ’ ಎಂಬ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ ಮುರಳೀಧರ ರಾವ್‌ ಅವರ ಹೇಳಿಕೆಯು ಸೋಮವಾರ ವಿವಾದ ಸೃಷ್ಟಿಸಿದೆ.

ಮಧ್ಯಪ್ರದೇಶದ ಉಸ್ತುವಾರಿ ರಾವ್ ಅವರ ಹೇಳಿಕೆಯನ್ನು ಕಾಂಗ್ರೆಸ್‌ ಖಂಡಿಸಿದೆ. ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದೆ. ಅದರೆ, ವಿರೋಧ ಪಕ್ಷಗಳು ತಮ್ಮ ಹೇಳಿಕೆಯನ್ನು ತಿರುಚಿವೆ ಎಂದು ರಾವ್‌ ಹೇಳಿದ್ದಾರೆ.

ಭೋಪಾಲ್‌ನಲ್ಲಿರುವ ರಾಜ್ಯ ಬಿಜೆಪಿಯ ಪ್ರಧಾನ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪರಿಶಿಷ್ಟ ಪಂಗಡಗಳು ಮತ್ತು ಪರಿಶಿಷ್ಟ ಜಾತಿಗಳತ್ತ ಬಿಜೆಪಿ ಪಕ್ಷ ಮತ್ತು ಸರ್ಕಾರಗಳು ವಿಶೇಷವಾಗಿ ಗಮನಹರಿಸಲಿವೆ. ಆದರೆ, ಅವರನ್ನು ವೋಟ್‌ ಬ್ಯಾಂಕ್‌ ಮಾಡಿಕೊಳ್ಳುವ ಉದ್ದೇಶದಿಂದ ಅಲ್ಲ. ಅವರ ಶಿಕ್ಷಣ' ಉದ್ಯೋಗ, ಅಭಿವೃದ್ಧಿಗಾಗಿ,’ ಎಂದು ಅವರು ತಿಳಿಸಿದರು.

‘ಬಿಜೆಪಿಯು ಬ್ರಾಹ್ಮಣ–ಬನಿಯಾಗಳ ಪಕ್ಷವೆಂಬ ಮಾತು ವ್ಯಾಪಕವಾಗಿದೆ. ಹೀಗಿರುವಾಗ ನೀವು ‘ಸಬ್‌ ಕಾ ಸಾತ್‌ ಸಬ್‌ ಕಾ ವಿಕಾಸ್‌’ ಬಗ್ಗೆ ಮಾತನಾಡುತ್ತಿದ್ದೀರಿ ಎಂದು ಮಾಧ್ಯಮಗಳು ರಾವ್‌ ಅವರನ್ನು ಪ್ರಶ್ನೆ ಮಾಡಿದವು.

ಮಾಧ್ಯಮಗಳ ಈ ಪ್ರಶ್ನೆಗೆ ಉತ್ತರಿಸುವಾಗ ತಮ್ಮ ಕುರ್ತಾದ ಜೇಬುಗಳನ್ನು ತೋರಿಸುತ್ತಾ ಹೇಳಿದ ರಾವ್‌, ‘ಬ್ರಾಹ್ಮಣರು ಮತ್ತು ಬನಿಯಾಗಳು ನನ್ನ ಜೇಬಿನಲ್ಲಿದ್ದಾರೆ. ನಮ್ಮ ಹೆಚ್ಚಿನ ಕಾರ್ಯಕರ್ತರು ಮತ್ತು ವೋಟ್ ಬ್ಯಾಂಕ್ ಈ ವರ್ಗದವರೇ ಆಗಿರುವುದರಿಂದ ನೀವು (ಮಾಧ್ಯಮದವರು) ನಮ್ಮನ್ನು ಬ್ರಾಹ್ಮಣ ಮತ್ತು ಬನಿಯಾಗಳ ಪಕ್ಷ ಎಂದು ಕರೆಯುತ್ತಿದ್ದೀರಿ. ಆದರೆ, ಸಮಾಜದ ಎಲ್ಲಾ ವರ್ಗಗಳ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ಬಿಜೆಪಿ ಕೆಲಸ ಮಾಡುತ್ತಿದೆ,’ ಎಂದು ರಾವ್ ಹೇಳಿದರು.

‘ಪಕ್ಷವೊಂದರಲ್ಲಿ ಸಮಾಜದ ನಿರ್ದಿಷ್ಟ ವರ್ಗದ ಜನಸಮುದಾಯವೊಂದು ಹೆಚ್ಚಿನ ಪ್ರಮಾಣದಲ್ಲಿ ಇದ್ದಾಗ, ಆ ಪಕ್ಷವನ್ನು ಆದೇ ಸಮುದಾಯಕ್ಕೆ ಸೀಮಿತಗೊಳಿಸಿ ಜನ ಮಾತನಾಡುತ್ತಾರೆ. ಕೆಲವೊಂದು ಸಮುದಾಯದ ಪ್ರಾತಿನಿಧ್ಯ ನಮ್ಮಲ್ಲಿ ಇಲ್ಲದಿರುವುದರ ಹಿನ್ನೆಲೆಯಲ್ಲಿ ನಾವು ಎಸ್‌ಸಿ/ಎಸ್‌ಟಿ ಸಮುದಾಯದವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ. ನಾವು ಎಲ್ಲರನ್ನು ತಲುಪುತ್ತೇವೆ ಮತ್ತು ಬಿಜೆಪಿಯನ್ನು ಪ್ರತಿ ವರ್ಗದ ಪಕ್ಷವನ್ನಾಗಿ ಮಾಡುತ್ತಿದ್ದೇವೆ,’ ಎಂದು ಅವರು ಹೇಳಿದರು.

‘ಬ್ರಾಹ್ಮಣ ಮತ್ತು ಬನಿಯಾಗಳೂ ಸೇರಿದಂತೆ ಯಾವುದೇ ಸಮುದಾಯವನ್ನು ನಾವು ನಮ್ಮಿಂದ ಬಿಟ್ಟುಕೊಡುತ್ತಿಲ್ಲ. ಆದರೆ ನಿಜವಾದ ಅರ್ಥದಲ್ಲಿ ರಾಷ್ಟ್ರೀಯ ಪಕ್ಷವಾಗುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ನಾವು, ನಮ್ಮೊಂದಿಗಿಲ್ಲದ ಇತರರನ್ನೂ ಸೇರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ,’ ಎಂದು ತಿಳಿಸಿದರು.

ರಾವ್‌ ಹೇಳಿಕೆಯ ಆರು ಸೆಕೆಂಡುಗಳ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದು, ವಿರೋಧ ಪಕ್ಷಗಳು ಬಿಜೆಪಿ ವಿರುದ್ಧ ಮುಗಿಬಿದ್ದಿವೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

‘ಬ್ರಾಹ್ಮಣ–ಬನಿಯಾಗಳ ಮೇಲೆ ಬಿಜೆಪಿ ತನ್ನ ಹಕ್ಕನ್ನು ಪ್ರತಿಪಾದಿಸುತ್ತಿವೆ. ಬಿಜೆಪಿಯನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಈ ವರ್ಗಗಳಿಗೆ ಯಾವ ರೀತಿಯ ಗೌರವವನ್ನು ನೀಡಲಾಗಿದೆ. ಬಿಜೆಪಿಯು ಕೂಡಲೇ ಈ ಸಮುದಾಯದ ಕ್ಷಮೆ ಕೋರಬೇಕು,’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT