ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿಗೆ ಭದ್ರತಾ ಲೋಪ: ಮುಂದಿನ ವಿಚಾರಣೆಯವರೆಗೆ ತನಿಖೆ ನಿಲ್ಲಿಸಲು ಸೂಚನೆ

ಪ್ರಧಾನಿ ಸಂಚಾರದ ವಿವರಗಳನ್ನು ರಕ್ಷಿಸಿ ಇಡಲು ಪಂಜಾಬ್‌ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್‌ ಸೂಚನೆ
Last Updated 7 ಜನವರಿ 2022, 20:10 IST
ಅಕ್ಷರ ಗಾತ್ರ

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಅವರು ಇದೇ 5ರಂದು ಪಂಜಾಬ್‌ಗೆ ನೀಡಿದ್ದ ಭೇಟಿಯ ಸಂದರ್ಭದ ಸಂಚಾರದ ವಿವರ ಮತ್ತು ಅಲ್ಲಾಗಿರುವ ಭದ್ರತಾ ಲೋಪಗಳ ಬಗ್ಗೆ ಈಗ ಸಂಗ್ರಹಿಸಿರುವ ವಿವರಗಳನ್ನು ತಕ್ಷಣವೇ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್‌ಗೆ ಸಲ್ಲಿಸಿ’ ಎಂದು ಪಂಜಾಬ್‌ ಪೊಲೀಸ್‌ ಇಲಾಖೆ, ಕೇಂದ್ರದ ತನಿಖಾ ಸಂಸ್ಥೆಗಳಿಗೆಸುಪ್ರೀಂ ಕೋರ್ಟ್‌ ಶುಕ್ರವಾರ ಸೂಚಿಸಿದೆ.

ಮೋದಿ ಅವರ ಪಂಜಾಬ್ ಭೇಟಿಯ ವೇಳೆ ಆದ ಭದ್ರತಾ ಲೋಪದ ವಿರುದ್ಧ ಸ್ವತಂತ್ರ ತನಿಖೆ ನಡೆಸಬೇಕು. ಈ ಬಗ್ಗೆ ತನಿಖೆ ನಡೆಸಲು ಪಂಜಾಬ್ ಸರ್ಕಾರವು ರಚಿಸಿರುವ ಸಮಿತಿಯನ್ನು ವಜಾ ಮಾಡಬೇಕು ಎಂದು ‘ಲಾಯರ್ಸ್ ವಾಯ್ಸ್’ ಎಂಬ ಸಂಸ್ಥೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಈ ಸೂಚನೆ ನೀಡಿದೆ.

ಪಂಜಾಬ್‌ ಸರ್ಕಾರ ಮತ್ತು ಕೇಂದ್ರ ಸರ್ಕಾರವುಈ ಘಟನೆ ಕುರಿತು ತನಿಖೆ ನಡೆಸಲು ರಚಿಸಿರುವ ಸಮಿತಿಗಳು ತಮ್ಮ ತನಿಖೆಯನ್ನು, ಅರ್ಜಿಯ ಮುಂದಿನ ವಿಚಾರಣೆಯವರೆಗೆ ನಿಲ್ಲಿಸುವಂತೆಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ನೇತೃತ್ವದ ಪೀಠವು ಆದೇಶಿಸಿದೆ.

‘ಪ್ರಧಾನಿ ಸಂಚಾರದ ವಿವರ ಮತ್ತು ಘಟನೆಗೆ ಸಂಬಂಧಿಸಿದಂತೆ ಈವರೆಗೆ ಕಲೆಹಾಕಿರುವ ವಿವರಗಳನ್ನು ತಕ್ಷಣವೇ ಸಂಗ್ರಹಿಸಿ, ಭದ್ರಪಡಿಸಿ’ ಎಂದುಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್‌ಗೆ ಪೀಠವು ಸೂಚನೆ ನೀಡಿದೆ.

‘ಇದು ಅಪರೂಪದಲ್ಲೇ ಅಪರೂಪದ ಘಟನೆ. ಜಾಗತಿಕ ಸಮುದಾಯದ ಎದುರು ಅಪಮಾನಕ್ಕೆ ತುತ್ತಾಗುವಂತಹ ಘಟನೆ. ಇದು ಗಡಿಯಾಚೆಗಿನ ಭಯೋತ್ಪಾದನೆಯಾಗಿರುವ ಸಾಧ್ಯತೆಯೂ ಇದೆ. ನಿಷೇಧಿತ ಉಗ್ರ ಸಂಘಟನೆ ‘ಸಿಖ್ ಫಾರ್ ಜಸ್ಟೀಸ್‌’ ಇಂತಹದ್ದೇ ಚಟುವಟಿಕೆಗೆ ಕರೆ ನೀಡಿರುವ ವಿಡಿಯೊ ಬುಧವಾರದಿಂದ ವೈರಲ್‌ ಆಗಿದೆ. ಹೀಗಾಗಿ ಈ ಬಗ್ಗೆ ಸ್ವತಂತ್ರ ತನಿಖೆ ಅಗತ್ಯವಿದೆ’ ಎಂದುಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರತಿಪಾದಿಸಿದರು.

ಸಾಕ್ಷ್ಯ ಸಂಗ್ರಹ: ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಕೇಂದ್ರ ಸರ್ಕಾರವು ರಚಿಸಿರುವ ಉನ್ನತ ಸಮಿತಿಯು ಶುಕ್ರವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ವಿವರಗಳನ್ನು ಕಲೆಹಾಕಿದೆ. ಆದರೆ ಈಗ ಸಮಿತಿಯು ಸಂಗ್ರಹಿಸಿರುವ ವಿವರಗಳನ್ನು ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ರಿಜಿಸ್ಟ್ರಾರ್ ಜನರಲ್‌ಗೆ ಸಲ್ಲಿಸಬೇಕಾಗುತ್ತದೆ.

ವರದಿ ಸಲ್ಲಿಕೆ: ಘಟನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಸಿದ್ಧಪಡಿಸಿರುವ ವರದಿಯನ್ನು ಪಂಜಾಬ್‌ ಮುಖ್ಯಕಾರ್ಯದರ್ಶಿಯು ಕೇಂದ್ರ ಸರ್ಕಾರಕ್ಕೆಶುಕ್ರವಾರ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT