ಗಡಿಯ ಮುಂಚೂಣಿ ರಕ್ಷಣಾ ನೆಲೆ ಸಿಬ್ಬಂದಿಗೆ ಉಕ್ಕಿನಿಂದ ನಿರ್ಮಿತ ತಂಗುದಾಣ ಶೀಘ್ರ

ನವದೆಹಲಿ: ಗಡಿ ನಿಯಂತ್ರಣ ರೇಖೆಗೆ (ಎಲ್ಒಸಿ) ಹೊಂದಿಕೊಂಡು ಎತ್ತರದ, ಸೂಕ್ಷ್ಮ ಪ್ರದೇಶದಲ್ಲಿ ನಿಯೋಜಿಸಲಾದ ಗಡಿ ಭದ್ರತಾ ಪಡೆ ಸಿಬ್ಬಂದಿಯು, ಜೀವನ ಗುಣಮಟ್ಟ ಉತ್ತಮಪಡಿಸುವ ನಿಟ್ಟಿನಲ್ಲಿ ಉಕ್ಕಿನಿಂದ ನಿರ್ಮಿಸಿದ ತಂಗುದಾಣ ಪಡೆಯಲಿದ್ದಾರೆ.
ಈ ತುಕಡಿಗಳನ್ನು ಮುಂಚೂಣಿ ರಕ್ಷಣಾ ನೆಲೆ (ಎಫ್‌ಡಿಎಲ್) ಎಂದು ಗುರುತಿಸಲಿದ್ದು, ಬಿಎಸ್ಎಫ್ ಸಿಬ್ಬಂದಿ ಸ್ವತಂತ್ರವಾಗಿ ಅಥವಾ ಸೇನೆ ಜೊತೆಗೂಡಿ ಕಾರ್ಯನಿರ್ವಹಿಸಲಿದ್ದಾರೆ. ಗಡಿನಿಯಂತ್ರಣ ರೇಖೆಯ ವ್ಯಾಪ್ತಿ ಒಟ್ಟು 772 ಕಿ.ಮೀ ಆಗಿದ್ದು, ಈ ಪೈಕಿ ಸುಮಾರು 430 ಕಿ.ಮೀ ಉದ್ದದ ಅಂತರವು ಜಮ್ಮು ಮತ್ತು ಕಾಶ್ಮಿರದ ವ್ಯಾಪ್ತಿಯಲ್ಲಿದೆ.
8 ಸಾವಿರದಿಂದ 16 ಸಾವಿರ ಅಡಿ ಎತ್ತರದಲ್ಲಿ ಈ ಸಿಬ್ಬಂದಿಯು ಪ್ರಸ್ತುತ, ಕಬ್ಬಿಣದ ಹಾಳೆಗಳನ್ನು (ಸಿಜಿಐ) ಬಳಸಿ ರೂಪಿಸಿದ ತಂಗುದಾಣದಲ್ಲಿ ಪಡಿತರ, ಶಸ್ತ್ರಾಸ್ತ್ರಗಳ ಜೊತೆಗೆ ನೆಲೆಸಿದ್ದಾರೆ. ಹವಾಮಾನ ಬದಲಾವಣೆಯ ಪರಿಣಾಮಗಳಿಗೆ ಗುರಿಯಾಗುತ್ತಾರೆ.
ಗಡಿ ನಿಯಂತ್ರಣ ರೇಖೆ ದಾಟಿ ದೇಶದ ಒಳನುಸುಳುವ ಭಯೋತ್ಪಾದಕರ ಯತ್ನ ವಿಫಲಗೊಳಿಸುವಲ್ಲಿ ಮುಂಚೂಣಿ ರಕ್ಷಣಾ ನೆಲೆಗಳಲ್ಲಿ (ಎಫ್‌ಡಿಎಲ್) ನಿಯೋಜಿತರಾದ ಸಿಬ್ಬಂದಿಯ ಪಾತ್ರ ಮಹತ್ವದ್ದಾಗಿದೆ.
ಬಿಎಸ್‌ಎಫ್‌ನ ಅಧಿಕಾರಿ ಮೂಲಗಳ ಪ್ರಕಾರ, ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಇರುವ ಇಂತಹ ಸುಮಾರು 115 ಎಫ್‌ಡಿಎಲ್‌ಗಳ ತಂಗುದಾಣಗಳನ್ನು ಉಕ್ಕಿನಿಂದ ನಿರ್ಮಿಸಿದ ವಿಶಾಲ ತಂಗುದಾಣಗಳಾಗಿ ₹ 35 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಗುರಿ ಇದೆ.
ಉಕ್ಕಿನ ಹಾಳೆಗಳನ್ನು ಬಳಸಿ ನಿರ್ಮಿಸಲಾದ ಶೌಚಾಲಯ, ಅಡುಗೆಕೋಣೆ, ವಿರಾಮಕೋಣೆಯ ಮಾದರಿಗಳನ್ನು ಈ ಎಫ್‌ಡಿಎಲ್‌ಗಳಲ್ಲಿ ಅಳವಡಿಸಲಾಗುತ್ತದೆ. ಮೊದಲ ಹಂತದ ಜಾರಿ ನಂತರ ಇನ್ನು ಹೆಚ್ಚಿನ ಎಫ್‌ಡಿಎಲ್‌ಗಳಿಗೆ ಈ ಸೌಲಭ್ಯ ವಿಸ್ತರಿಸಲಾಗುತ್ತದೆ.
ಬಿಎಸ್‌ಎಫ್ ಮಹಾನಿರ್ದೇಶಕ (ಡಿ.ಜಿ) ಪಂಕಜ್ ಕುಮಾರ್ ಸಿಂಗ್ ಅವರು ಒಟ್ಟಾರೆ ಕಾರ್ಯನಿರ್ವಹಣೆ ಪರಶೀಲನೆಗಾಗಿ ಇತ್ತೀಚೆಗೆ ಕಾಶ್ಮೀರಕ್ಕೆ ಭೇಟಿ ನೀಡಿದ್ದ ಅವಧಿಯಲ್ಲಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಸಿಬ್ಬಂದಿ ಜೊತೆಗೆ ಚರ್ಚಿಸಿದ ಬಳಿಕ ಜೀವನ ಗುಣಮಟ್ಟ ಸುಧಾರಣೆಗಾಗಿ ಎಫ್‌ಡಿಎಲ್‌ಗಳ ಪರಿವರ್ತನೆಗೆ ಕ್ರಿಯಾಯೋಜನೆ ರೂಪಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಪ್ರಧಾನ ನಿರ್ದೇಶಕರು ಈ ಬಗ್ಗೆ ಮರುಬಳಕೆ ಇಂಧನ ಸಚಿವಾಲಯದ ಅಧಿಕಾರಿಗಳನ್ನು ಭೇಟಿಯಾಗಿ, ಈ ಎಫ್‌ಡಿಎಲ್‌ಗಳಿಗೆ ಸೋಲಾರ್ ಆಧಾರಿತ ವಿದ್ಯುತ್ ಯೋಜನೆ ಮಂಜೂರಾತಿ ಕೋರಿದ್ದು, ಇದಕ್ಕೆ ಔಪಚಾರಿಕ ಸಮ್ಮತಿ ದೊರೆತಿದೆ. ಈ ತಂಗುದಾಣಗಳಲ್ಲಿ ಸದ್ಯ ಅಡುಗೆ, ಇನ್ನಿತರ ಉದ್ದೇಶಗಳಿಗೆ ಸೀಮೆಎಣ್ಣೆ ಮತ್ತು ಡೀಸೆಲ್ ಅವಲಂಬಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.