ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬುಲ್ಲಿ ಬಾಯಿ’ ಆ್ಯಪ್‌ ಪ್ರಕರಣ: ಉತ್ತರಾಖಂಡದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಬಂಧನ

ಬಂಧಿತರ ಸಂಖ್ಯೆ ಮೂರಕ್ಕೆ ಏರಿಕೆ * ಇನ್ನೂ ಹಲವರು ಭಾಗಿ ಶಂಕೆ
Last Updated 5 ಜನವರಿ 2022, 12:38 IST
ಅಕ್ಷರ ಗಾತ್ರ

ಮುಂಬೈ: 100ಕ್ಕೂ ಹೆಚ್ಚು ಪ್ರಭಾವಿ ಮುಸ್ಲಿಂ ಮಹಿಳೆಯರ ಭಾವಚಿತ್ರಗಳನ್ನು ‘ಬುಲ್ಲಿ ಬಾಯಿ’ ಹೆಸರಿನ ಆ್ಯಪ್‌ಗೆ ಅಪ್‌ಲೋಡ್‌ ಮಾಡಿ ಇವರನ್ನು ಹರಾಜಿಗಿಡಲಾಗಿದೆ ಎಂಬ ಒಕ್ಕಣೆಯೊಂದಿಗೆ ಅವಹೇಳನ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ಪೊಲೀಸರು ಉತ್ತರಾಖಂಡದಲ್ಲಿ ಮತ್ತೊಬ್ಬ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಬುಧವಾರ ಹೇಳಿದ್ದಾರೆ.

ಮಯಂಕ್ ರಾವಲ್ (21) ಬಂಧಿತ ವಿದ್ಯಾರ್ಥಿ. ಇದರೊಂದಿಗೆ ‘ಬುಲ್ಲಿ ಬಾಯಿ’ ಆ್ಯಪ್‌ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರ ಸಂಖ್ಯೆ ಮೂರಕ್ಕೇರಿದಂತಾಗಿದೆ.

ಉತ್ತರಾಖಂಡದಲ್ಲಿ ಶ್ವೇತಾ ಸಿಂಗ್‌ (19) ಹಾಗೂ ಬೆಂಗಳೂರಿನಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿ ವಿಶಾಲ್ ಕುಮಾರ್‌ (21) ಎಂಬುವವರನ್ನು ಸೈಬರ್‌ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

‘ಈ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಸಾಧ್ಯತೆಗಳಿವೆ. ಅಲ್ಲದೇ, ಪಿತೂರಿ ಭಾಗವಾಗಿ ಈ ಆ್ಯಪ್‌ ಅನ್ನು ಬಳಕೆ ಮಾಡಲಾಗಿದೆ ಎಂಬ ಆಯಾಮದಲ್ಲಿಯೂ ತನಿಖೆ ನಡೆಸಲಾಗುತ್ತಿದೆ’ ಎಂದು ಮುಂಬೈ ಪೊಲೀಸ್‌ ಕಮಿಷನರ್ ಹೇಮಂತ್ ನಾಗರಾಳೆ ಹೇಳಿದ್ದಾರೆ.

‘ತನಿಖೆ ಸೂಕ್ಷ್ಮ ಸ್ವರೂಪದ್ದಾಗಿರುವ ಕಾರಣ, ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸುವುದಿಲ್ಲ. ತನಿಖೆಯು ಆನ್‌ಲೈನ್‌ ಮೂಲಕವೂ ನಡೆಯುತ್ತಿದೆ. ಹೀಗಾಗಿ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿದರೆ ಅದು ತನಿಖೆಗೆ ಅಡ್ಡಿಯುಂಟು ಮಾಡುವ ಅಪಾಯವೂ ಇದೆ’ ಎಂದು ಅವರು ಹೇಳಿದ್ದಾರೆ.

‘ಪ್ರಕರಣ ಕುರಿತು ಮಹಾರಾಷ್ಟ್ರದ ಹೊರಗಡೆ ಕೆಲವರು ಬೇರೆಯದೇ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ‘ಕೆಲವು ಅಧಿಕಾರಿಗಳು ನೀಡಿರುವ ಹೇಳಿಕೆಗಳು ಅನಗತ್ಯವಾಗಿದ್ದವು. ಅವರಿಗೆ ಪ್ರಕರಣದ ಕುರಿತು ಅರಿವಿಲ್ಲ’ ಎಂದರು.

‘ಬೇರೆ ರಾಜ್ಯಗಳಿಗೆ ಸಂಬಂಧಿಸಿದ ಪ್ರಕರಣಗಳ ಬಗ್ಗೆ ಸಾಮಾನ್ಯವಾಗಿ ನಾವು ಮಾತನಾಡುವುದಿಲ್ಲ. ತಮ್ಮ ಬಳಿ ಪ್ರಕರಣ ಕುರಿತು ಸಮರ್ಪಕ ಮಾಹಿತಿ ಇಲ್ಲದಿದ್ದರೆ, ಯಾವುದೇ ಹೇಳಿಕೆ ನೀಡಲು ಹೋಗಬಾರದು’ ಎಂದೂ ಹೇಳಿದರು.

ದೂರು–ನಿರ್ಬಂಧ: ಪತ್ರಕರ್ತೆಯೊಬ್ಬರು ನೀಡಿರುವ ದೂರಿನ ಆಧಾರದಲ್ಲಿ ದೆಹಲಿ ಪೊಲೀಸರು ಈಚೆಗೆ ಪ್ರಕರಣ ಸಂಬಂಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದರು. ಮುಂಬೈನ ಸೈಬರ್‌ ಕ್ರೈಂ ಪೊಲೀಸರು ತನಿಖೆ ನಡೆಸುತ್ತಿದ್ದು, ಈ ಆ್ಯಪ್‌ ಅನ್ನು ನಿರ್ಬಂಧಿಸಲಾಗಿದೆ.

‘ಬುಲ್ಲಿ ಬಾಯಿ’ ಕೂಡ ‘ಸುಲ್ಲಿ ಡೀಲ್ಸ್’ ನಂತೆ ಗಿಟ್‌ಹಬ್‌ ವೇದಿಕೆಯ ಆ್ಯಪ್‌ ಆಗಿದ್ದು, ಇವುಗಳಲ್ಲಿ ಸಾಮ್ಯತೆ ಇದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ದೆಹಲಿ ಪೊಲೀಸರ ಸೈಬರ್‌ ಕ್ರೈಂ ವಿಭಾಗವು ಟ್ವಿಟರ್‌ ಸಂಸ್ಥೆಯನ್ನು ಸಂಪರ್ಕಿಸಿದ್ದು, ಈ ಆ್ಯಪ್‌ ಬಗ್ಗೆ ಮೊದಲು ಪೋಸ್ಟ್ ಮಾಡಿದ ವ್ಯಕ್ತಿಯ ಟ್ವಿಟರ್‌ ಖಾತೆಯನ್ನು ನಿರ್ಬಂಧಿಸಲಾಗಿದೆ.

ಆರೋಪಿಗಳ ಬಂಧನಕ್ಕೆ ನೆರವಾದ ಕ್ಷಿಪ್ರ ಕಾರ್ಯಾಚರಣೆ

ದೇಶದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ, ಅಷ್ಟೇ ಸೂಕ್ಷ್ಮವೂ ಆಗಿರುವ ‘ಬುಲ್ಲಿ ಬಾಯಿ’ ಆ್ಯಪ್‌ ಪ್ರಕರಣ ಕುರಿತು ಪೊಲೀಸರಿಗೆ ಅಲ್ಪ ಮಾಹಿತಿ ಇತ್ತು. ಆದರೆ, ಸಿಕ್ಕ ಸುಳಿವಿನ ಜಾಡು ಹಿಡಿದು, ಕ್ಷಿಪ್ರ ಕಾರ್ಯಾಚರಣೆ ಮಾಡಿದ ಪೊಲೀಸರು ಕೆಲವೇ ದಿನಗಳ ಅಂತರದಲ್ಲಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಆ್ಯಪ್ ಬಳಸಿ ತಮ್ಮ ಅವಹೇಳನವಾಗುತ್ತಿರುವ ಕುರಿತು ಸಂತ್ರಸ್ತ ಮಹಿಳೆಯರು ಹಾಗೂ ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ಮುಂಬೈ ಪೊಲೀಸ್‌ನ ಕ್ರೈಂ ಘಟಕಕ್ಕೆ ದೂರು ನೀಡಿ, ದುಷ್ಕರ್ಮಿಗಳನ್ನು ಬಂಧಿಸುವಂತೆ ಒತ್ತಾಯಿಸಿದರು.

‘ಸೈಬರ್‌ ಕ್ರೈಂ ಘಟಕದ ಡಿಸಿಪಿ ರಶ್ಮಿ ಕರಂಡೀಕರ್ ಅವರಿಗೆ ತನಿಖೆಯ ಜವಾಬ್ದಾರಿ ನೀಡಲಾಯಿತು. ಘಟಕದ ಪೂರ್ವ, ಕೇಂದ್ರ ಹಾಗೂ ಪಶ್ಚಿಮ ಠಾಣೆಗಳ ಪೊಲೀಸರನ್ನು ಒಳಗೊಂಡ ತಂಡಗಳನ್ನೂ ರಚಿಸಿದರು. ಮೈಕೊರೆವ ಚಳಿ, ಕೋವಿಡ್‌ ಪಿಡುಗಿನಿಂದಾಗಿ ಕಠಿಣ ನಿರ್ಬಂಧಗಳ ನಡುವೆಯೂ ಪೊಲೀಸರು ಕಾರ್ಯಾಚರಣೆ ನಡೆಸಿ, ದುಷ್ಕರ್ಮಿಗಳನ್ನು ಬಂಧಿಸಿದರು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೊಲೀಸರ ಒಂದು ತಂಡ ಉತ್ತರಾಖಂಡ, ಮತ್ತೊಂದು ತಂಡ ಬೆಂಗಳೂರಿಗೆ ತೆರಳಿತು. ಬೆಂಗಳೂರಿನಲ್ಲಿ ಒಬ್ಬ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಬಂಧಿಸಿದರೆ, ಉತ್ತರಾಖಂಡದಲ್ಲಿ ಯುವತಿ ಸೇರಿ ಇಬ್ಬರನ್ನು ಬಂಧಿಸಲಾಯಿತು.

ಈ ತನಿಖಾ ಕಾರ್ಯಕ್ಕೆ ಮಾಹಿತಿ ತಂತ್ರಜ್ಞಾನ ವಿಭಾಗದ ತಜ್ಞರ ನೆರವೂ ಇತ್ತು. ಆ್ಯಪ್‌ ಮೂಲಕ ಮಹಿಳೆಯರ ಚಿತ್ರಗಳನ್ನು ಅಪ್‌ಲೋಡ್‌ ಮಾಡಲಾದ ಕಂಪ್ಯೂಟರ್‌ಗಳ ಐಪಿ ವಿಳಾಸ ಹಾಗೂ ಅದರ ನೆರವಿನಿಂದ ದುಷ್ಕರ್ಮಿಗಳಿದ್ದ ಸ್ಥಳಗಳನ್ನು ಪತ್ತೆ ಹಚ್ಚಿದ ಪೊಲೀಸರು, ಕೊನೆಗೂ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾದರು ಎಂದು ಅಧಿಕಾರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT