ಭಾನುವಾರ, ಜನವರಿ 23, 2022
24 °C

ಬುಲ್ಲಿ ಬಾಯಿ ಪ್ರಕರಣದ ಆರೋಪಿ ಸದಾ ಲ್ಯಾಪ್‌ಟಾಪ್‌ಗೆ ಅಂಟಿಕೊಂಡಿರುತ್ತಿದ್ದ...!

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಗುವಾಹಟಿ: ‘ನೀರಜ್‌ 10ನೇ ತರಗತಿ ಪರೀಕ್ಷೆಯಲ್ಲಿ ಶೇ 82ರಷ್ಟು ಅಂಕ ಗಳಿಸಿದ್ದ. ಈ ಸಾಧನೆ ಗುರುತಿಸಿ, ರಾಜ್ಯ ಸರ್ಕಾರ ಆತನಿಗೆ ಲ್ಯಾಪ್‌ಟಾಪ್‌ ನೀಡಿತ್ತು. ಸದಾ ಆತ ಲ್ಯಾಪ್‌ಟಾಪ್‌ಗೇ ಅಂಟಿಕೊಂಡಿರುತ್ತಿದ್ದ...’

– ‘ಬುಲ್ಲಿ ಬಾಯಿ’ ಆ್ಯಪ್‌ ಪ್ರಕರಣದ ಮುಖ್ಯ ಸಂಚುಕೋರ, ದೆಹಲಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ನೀರಜ್‌ ಬಿಷ್ಣೋಯಿ ಕುರಿತು ಆತನ ತಂದೆ ದಶರಥ್ ಬಿಷ್ಣೋಯಿ ಹೇಳಿದ ಮಾತುಗಳಿವು.

‘ಭೋಪಾಲ್‌ನ ವಿಐಟಿಯಲ್ಲಿ ಪ್ರವೇಶ ಪಡೆದ ನೀರಜ್‌, ಕೋವಿಡ್‌ ಹೆಚ್ಚಳದಿಂದಾಗಿ ಇಲ್ಲಿಯೇ ಇದ್ದು ಆನ್‌ಲೈನ್‌ ತರಗತಿಗಳಿಗೆ ಹಾಜರಾಗುತ್ತಿದ್ದ. ಓದಿನಲ್ಲಿಯೇ ಸದಾ ಮುಳುಗಿರುತ್ತಿದ್ದ’ ಎಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರಿಗೆ ತಿಳಿಸಿದರು.

‘ಏನು ನಡೆಯುತ್ತಿದೆ ಎಂಬುದು ತಿಳಿಯುತ್ತಿಲ್ಲ. ಆದರೆ, ಆತನ ವಿರುದ್ಧ ಏನು ಆರೋಪ ಹೊರಿಸಲಾಗಿದೆಯೋ ಆ ಕೃತ್ಯವನ್ನು ಆತ ಮಾಡಿಲ್ಲ ಎಂದು ನನ್ನ ಮನಸ್ಸು ಹೇಳುತ್ತಿದೆ’ ಎಂದೂ ದಶರಥ್ ಹೇಳಿದರು.

ದಶರಥ್ ಅವರು ಜೋರ್ಹಾಟ್‌ನಲ್ಲಿ ಅಂಗಡಿ ಇಟ್ಟುಕೊಂಡಿದ್ದಾರೆ. ಮೂಲತಃ ರಾಜಸ್ಥಾನದವರಾದ ದಶರಥ್ ಅವರು ಕೆಲ ವರ್ಷಗಳ ಹಿಂದೆ ಅಸ್ಸಾಂನಲ್ಲಿ ಬಂದು ನೆಲೆಸಿದ್ದಾರೆ. ಜೋರ್ಹಾಟ್‌ನ ದಿಗಂಬರ್‌ ಚೌಕ್ ಎಂಬ ಪ್ರದೇಶದಲ್ಲಿ ಕುಟುಂಬ ವಾಸಿಸುತ್ತಿದೆ. ಅವರಿಗೆ  ಮೂವರು ಮಕ್ಕಳಿದ್ದು, ನೀರಜ್ ಕಿರಿಯವ.

‘ನೀರಜ್‌ ಬಳಸುತ್ತಿದ್ದ ಲ್ಯಾಪ್‌ಟಾಪ್‌ಗೆ ಸಂಬಂಧಿಸಿದ ಐಪಿ ವಿಳಾಸವನ್ನು ದೆಹಲಿ ಪೊಲೀಸರು ನಮ್ಮೊಂದಿಗೆ ಹಂಚಿಕೊಂಡು, ಆತನ ಬಂಧನಕ್ಕೆ ಸಹಕರಿಸುವಂತೆ ಕೋರಿದರು. ದೆಹಲಿ ಪೊಲೀಸರು ನೀಡಿದ ಮಾಹಿತಿ ಆಧಾರದ ಮೇಲೆ ಬುಧವಾರ ರಾತ್ರಿ ನೀರಜ್‌ನನ್ನು ಬಂಧಿಸಲಾಯಿತು’ ಎಂದು ಜೋರ್ಹಾಟ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಂಕುರ್‌ ಜೈನ್ ತಿಳಿಸಿದರು.

ಕಾಲೇಜಿನಿಂದ ಆರೋಪಿ, ಮುಖ್ಯ ಸಂಚುಕೋರ ನೀರಜ್ ಅಮಾನತು

ಭೋಪಾಲ್: ‘ಬುಲ್ಲಿ ಬಾಯಿ’ ಆ್ಯಪ್ ಪ್ರಕರಣದ ಆರೋಪಿ, ಮುಖ್ಯ ಸಂಚುಕೋರ ನೀರಜ್‌ ಬಿಷ್ಣೋಯಿಯನ್ನು ಕಾಲೇಜಿನಿಂದ ಅಮಾನತು ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಭೋಪಾಲ್‌ನಿಂದ 100 ಕಿ.ಮೀ. ದೂರದ ಸೀಹೋರ್‌ನಲ್ಲಿ ವೆಲ್ಲೂರು ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ (ವಿಐಟಿ) ಕ್ಯಾಂಪಸ್ ಇದ್ದು, ನೀರಜ್ ಎರಡನೇ ವರ್ಷದ ಬಿ.ಟೆಕ್ ವಿದ್ಯಾರ್ಥಿ.

‘ದೆಹಲಿ ಪೊಲೀಸರು ಅಸ್ಸಾಂನ ಜೋರ್ಹಾಟ್‌ನಲ್ಲಿ ನೀರಜ್‌ ಬಿಷ್ಣೋಯಿಯನ್ನು ಗುರುವಾರ ಬಂಧಿಸಿದರು. ನೀರಜ್‌ ಬಂಧನದ ಬಗ್ಗೆ ಮೊದಲು ಮಾಧ್ಯಮಗಳ ಮೂಲಕ ನಂತರ, ಸೀಹೋರ್ ಠಾಣೆ ಪೊಲೀಸರಿಂದ ಮಾಹಿತಿ ಲಭಿಸಿತು. ಈ ಬೆಳವಣಿಗೆ ಬೆನ್ನಲ್ಲೇ, ವಿಐಟಿ ಆಡಳಿತ ಮಂಡಳಿಯು ಬಿಷ್ಣೋಯಿ ವಿರುದ್ಧ ಕ್ರಮ ಕೈಗೊಂಡಿದೆ’ ಎಂದು ಇದೇ ಅಧಿಕಾರಿ ತಿಳಿಸಿದ್ದಾರೆ.

‘ಪ್ರತಿಭಾವಂತ ವಿದ್ಯಾರ್ಥಿ’: ‘ನೀರಜ್‌ ಕುರಿತು ವಿಐಟಿ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲಾಗಿತ್ತು. ನೀರಜ್‌ ಪ್ರತಿಭಾವಂತ ಎಂದು ಕಾಲೇಜು ಆಡಳಿತ ಮಂಡಳಿಯವರು ತಿಳಿಸಿದ್ದರು. ಆನ್‌ಲೈನ್‌ ತರಗತಿಗಳಿಗೆ ಮಾತ್ರ ಆತ ಹಾಜರಾಗುತ್ತಿದ್ದ ಎಂಬುದಾಗಿ ಹೇಳಿದ್ದರು’ ಎಂದು ಸೀಹೋರ್‌ನ ಹೆಚ್ಚುವರಿ ಎಸ್ಪಿ ಸಮೀರ್‌ ಯಾದವ್‌ ತಿಳಿಸಿದ್ದಾರೆ.

‘ಜೋರ್ಹಾಟ್‌ನಲ್ಲಿ ಬಂಧನ’: ‘ಪ್ರಕರಣದ ಪ್ರಮುಖ ಆರೋಪಿ ನೀರಜ್‌ ಬಿಷ್ಣೋಯಿ ಮೂಲತಃ ರಾಜಸ್ಥಾನದವರು. ಆದರೆ, ಸೀಹೋರ್‌ನೊಂದಿಗಿನ ಆತನ ಸಂಪರ್ಕ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದರು’ ಎಂದು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ.

‘ನೀರಜ್‌ ಬಿಷ್ಣೋಯಿ ಬಂಧನದೊಂದಿಗೆ, ನೂರಾರು ಪ್ರಭಾವಿ ಮುಸ್ಲಿಂ ಮಹಿಳೆಯರ ಭಾವಚಿತ್ರಗಳನ್ನು ‘ಬುಲ್ಲಿ ಬಾಯಿ’ ಹೆಸರಿನ ಆ್ಯಪ್‌ಗೆ ಅಪ್‌ಲೋಡ್‌ ಮಾಡಿ ಇವರನ್ನು ಹರಾಜಿಗಿಡಲಾಗಿದೆ ಎಂಬ ಒಕ್ಕಣೆಯೊಂದಿಗೆ ಅವಹೇಳನ ಮಾಡಿದ್ದ ಪ್ರಕರಣವನ್ನು ಭೇದಿಸಿದ್ದೇವೆ’ ಎಂದು ದೆಹಲಿ ಪೊಲೀಸರು ಪ್ರಕಟಣೆಯಲ್ಲಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು