ಶುಕ್ರವಾರ, ಆಗಸ್ಟ್ 19, 2022
25 °C
ನೂತನ ಯೋಜನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ

ಸಾರ್ವಜನಿಕ ವೈ-ಫೈಗೆ ‘ಪಿಎಂ–ವಾಣಿ’, ಒಂದು ಕೋಟಿ ಡೇಟಾ ಕೇಂದ್ರ ಸ್ಥಾಪನೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದಾದ್ಯಂತ ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ ಲಭ್ಯತೆಯನ್ನು ಹೆಚ್ಚಿಸುವ ಉದ್ದೇಶದಿಂದ ಸಾರ್ವಜನಿಕ ವೈ-ಫೈ ಕೇಂದ್ರಗಳನ್ನು ಸ್ಥಾಪಿಸಲು ಕೇಂದ್ರ ಸಚಿವ ಸಂಪುಟವು ಅನುಮತಿ ನೀಡಿದೆ. ಈ ಯೋಜನೆ ಅಡಿ ಒಂದು ಕೋಟಿ ಸಾರ್ವಜನಿಕ ಡೇಟಾ ಕಚೇರಿಗಳನ್ನು ಆರಂಭಿಸಲಾಗುವುದು. ಇದರಿಂದ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ವೈ-ಫೈ ಕೇಂದ್ರಗಳನ್ನು ‘ಪಿಎಂ-ವೈಫೈ ಆಕ್ಸೆಸ್ ನೆಟ್‌ವರ್ಕ್ ಇಂಟರ್‌ಫೇಸ್ (ಪಿಎಂ-ವಾಣಿ)’ ಎಂದು ಕರೆಯಲಾಗುವುದು. ಈ ಯೋಜನೆಯನ್ನು ‘ಪಬ್ಲಿಕ್ ವೈ-ಫೈ ಆಫೀಸ್ (ಪಿಡಿಒ)’, ‘ಪಿಡಿಒ ಅಗ್ರಗೇಟರ್’ ಮತ್ತು ‘ಅಪ್ಲಿಕೇಷನ್ ಪ್ರೊವೈಡರ್‌’ ಮೂಲಕ ಅಭಿವೃದ್ಧಿಪಡಿಸಲಾಗುತ್ತದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಮಾಹಿತಿ ನೀಡಿದ್ದಾರೆ.

ದೇಶದಾದ್ಯಂತ ಹೈಸ್ಪೀಡ್‌- ಬ್ರಾಡ್‌ಬ್ಯಾಂಡ್‌ನ ಅವಶ್ಯಕತೆ ಇದೆ ಎಂಬುದು ಕೋವಿಡ್‌-19 ಲಾಕ್‌ಡೌನ್‌ನ ಅವಧಿಯಲ್ಲಿ ಅರಿವಿಗೆ ಬಂದಿದೆ. ಈ ಯೋಜನೆ ಅನುಷ್ಠಾನದಿಂದ 4ಜಿ ನೆಟ್‌ವರ್ಕ್ ಇಲ್ಲದ ಪ್ರದೇಶದಲ್ಲೂ ವೇಗದ ಇಂಟರ್‌ನೆಟ್ ಸೇವೆ ದೊರೆಯಲಿದೆ. ಸಣ್ಣ ಬಂಡವಾಳ ಇರುವವರೂ ಉದ್ಯಮಿಗಳಾಗುವ ಅವಕಾಶ ದೊರೆಯಲಿದೆ ಎಂದು ಸಚಿವರು ಹೇಳಿದ್ದಾರೆ.

ಪಿಡಿಒ: ಸಾರ್ವಜನಿಕ ವೈ-ಫೈ ಕೇಂದ್ರಗಳ ಸ್ಥಾಪನೆ, ಕಾರ್ಯನಿರ್ವಹಣೆ, ನಿರ್ವಹಣೆ ಮತ್ತು ಚಂದಾದಾರರಿಗೆ ಬ್ರಾಡ್‌ಬ್ಯಾಂಡ್‌ ಸೇವೆ ಒದಗಿಸುವುದು ಪಿಡಿಒಗಳ ಹೊಣೆ. ಸಣ್ಣ ಅಂಗಡಿ ಇಲ್ಲವೇ ಸಾಮಾನ್ಯ ಸೇವಾ ಕೇಂದ್ರಗಳಲ್ಲೇ ಪಿಡಿಒ ಆರಂಭಿಸಬಹುದು. ಪಿಡಿಒಗಳನ್ನು ಆರಂಭಿಸಲು ಯಾವುದೇ ಪರವಾನಗಿ, ನೋಂದಣಿ ಮತ್ತು ಶುಲ್ಕ ಇರುವುದಿಲ್ಲ.

ಪಬ್ಲಿಕ್ ಡೇಟಾ ಆಫೀಸ್ ಅಗ್ರಗೇಟರ್ (ಪಿಡಿಒಎ): ಪಿಡಿಒಗಳನ್ನು ದೃಢೀಕರಿಸುವ ಮತ್ತು ಅವುಗಳಿಗೆ ಸಂಬಂಧಿಸಿದ ಲೆಕ್ಕಪತ್ರಗಳನ್ನು ನೋಡಿಕೊಳ್ಳುವ ಕೆಲಸವನ್ನು ಪಿಡಿಒಎ ಮಾಡಬೇಕಾಗುತ್ತದೆ. ಈ ಸೇವೆ ಒದಗಿಸುವವರು ನೋಂದಣಿ ಮಾಡಿಕೊಳ್ಳಬೇಕು. ಆದರೆ ಯಾವುದೇ ಶುಲ್ಕವಿರುವುದಿಲ್ಲ. ಅರ್ಜಿ ಸಲ್ಲಿಸಿದ ಏಳು ದಿನಗಳ ಒಳಗೆ ನೋಂದಣಿ ನೀಡಲಾಗುತ್ತದೆ.

ಅಪ್ಲಿಕೇಷನ್ ಪ್ರೊವೈಡರ್‌: ಈ ಸೇವೆಯನ್ನು ಪಡೆಯಲು ಬಳಕೆದಾರರು ನೋಂದಣಿ ಮಾಡಿಕೊಳ್ಳಲು ಅಗತ್ಯವಾದ ಅಪ್ಲಿಕೇಷನ್‌ ಅನ್ನು ಅಭಿವೃದ್ಧಿಪಡಿಸುವುದು ಅಪ್ಲಿಕೇಷನ್ ಪ್ರೊವೈಡರ್‌ಗಳ ಕೆಲಸ. ಈ ಯೋಜನೆ ವ್ಯಾಪ್ತಿಗೆ ಬರುವ ವೈ-ಫೈ ಕೇಂದ್ರಗಳನ್ನು ಪತ್ತೆ ಮಾಡಿ, ಅವುಗಳಿಗೆ ಸಂಬಂಧಿಸಿದ ವಿವರಗಳನ್ನು ಅಪ್ಲಿಕೇಷನ್‌ನಲ್ಲಿ ತೋರಿಸುವುದು ಅಪ್ಲಿಕೇಷನ್‌ ಪ್ರೊವೈಡರ್‌ಗಳ ಕೆಲಸ. ಈ ಸೇವೆ ಒದಗಿಸುವವರು ನೋಂದಣಿ ಮಾಡಿಕೊಳ್ಳಬೇಕು. ಆದರೆ ಯಾವುದೇ ಶುಲ್ಕವಿರುವುದಿಲ್ಲ. ಅರ್ಜಿ ಸಲ್ಲಿಸಿದ ಏಳು ದಿನಗಳ ಒಳಗೆ ನೋಂದಣಿ ನೀಡಲಾಗುತ್ತದೆ. ಕೇಂದ್ರ ಸರ್ಕಾರದ ಸಿ-ಡಾಟ್ ಸಂಸ್ಥೆಯು ಪಿಡಿಒ, ಪಿಡಿಒಎ ಮತ್ತು ಅಪ್ಲಿಕೇಷನ್ ಪ್ರೊವೈಡರ್‌ಗಳ ದಾಖಲಾತಿಯನ್ನು ನಿರ್ವಹಣೆ ಮಾಡಲಿದೆ. 

ಲಕ್ಷದ್ವೀಪಗಳಿಗೆ ವೇಗದ ಬ್ರಾಡ್‌ಬ್ಯಾಂಡ್‌ ಸೇವೆ ಒದಗಿಸಲು ಸಾಗರದಾಳದಲ್ಲಿ ಫೈಬರ್ ಆಪ್ಟಿಕಲ್ ಕೇಬಲ್‌ ಅನ್ನು ಅಳವಡಿಸಲು ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ನೀಡಿದೆ.

ಆತ್ಮನಿರ್ಭರ ರೋಜ್‌ಗಾರ್ ಯೋಜನೆಗೆ ₹ 22,810 ಕೋಟಿ

₹ 22,810 ಕೋಟಿ ಮೊತ್ತದ ಆತ್ಮನಿರ್ಭರ ಭಾರತ ರೋಜ್‌ಗಾರ್ ಯೋಜನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಲಾಕ್‌ಡೌನೋತ್ತರ ಅವಧಿಯಲ್ಲಿ ಕೆಲಸಕ್ಕೆ ಸೇರುವ ಉದ್ಯೋಗಿಗಳಿಗೆ ಮತ್ತು ಕೆಲಸ ನೀಡುವ ಸಂಸ್ಥೆಗಳಿಗೆ ಈ ಯೋಜನೆಯ ಪ್ರಯೋಜನ ದೊರೆಯಲಿದೆ.

* 2020-21ನೇ ಆರ್ಥಿಕ ವರ್ಷದಲ್ಲಿ ಈ ಯೋಜನೆ ಅಡಿ ₹ 1,584 ಕೋಟಿ ವಿನಿಯೋಗ ಮಾಡಲಾಗುತ್ತದೆ. 2020-2023ರ ಅವಧಿಯಲ್ಲಿ ಒಟ್ಟು ₹ 22,810 ಕೋಟಿ ವಿನಿಯೋಗ ಮಾಡಲಾಗುತ್ತದೆ

* 2020ರ ಅಕ್ಟೋಬರ್ 1ರ ನಂತರ ಕೆಲಸಕ್ಕೆ ಸೇರುವ ಉದ್ಯೋಗಿಗಳ ಭವಿಷ್ಯ ನಿಧಿಗೆ, ಉದ್ಯೋಗಿಗಳ ಕೊಡುಗೆ (12 %) ಮತ್ತು ಮಾಲೀಕರ ಕೊಡುಗೆಯನ್ನು (12%) ಸರ್ಕಾರವೇ ಭರಿಸುತ್ತದೆ. 1,000ಕ್ಕಿಂತ ಕಡಿಮೆ ಸಂಖ್ಯೆಯ ಉದ್ಯೋಗಿಗಳು ಇರುವ ಸಂಸ್ಥೆಗಳಿಗೆ 2 ವರ್ಷದ ಅವಧಿಗೆ ಈ ಯೋಜನೆ ಅನ್ವಯವಾಗಲಿದೆ

* 1,000ಕ್ಕಿಂತ ಹೆಚ್ಚು ಸಂಖ್ಯೆಯ ಉದ್ಯೋಗಿಗಳು ಇರುವ ಸಂಸ್ಥೆಗಳಿಗೂ ಈ ಯೋಜನೆ ಅನ್ವಯವಾಗುತ್ತದೆ. ಆದರೆ, ಉದ್ಯೋಗಿಗಳ ಪಾಲನ್ನು ಮಾತ್ರ ಸರ್ಕಾರ ಭರಿಸಲಿದೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು