ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನ ರಾಜಕೀಯ: ಮುಂದಿನ ವಾರ ಸಂಪುಟ ಪುನರ್‌ರಚನೆ ಸಾಧ್ಯತೆ

Last Updated 24 ಜುಲೈ 2021, 15:45 IST
ಅಕ್ಷರ ಗಾತ್ರ

ನವದೆಹಲಿ: ರಾಜಸ್ಥಾನದಲ್ಲಿ ಮುಂದಿನ ವಾರ ಸಚಿವ ಸಂಪುಟ ಪುನರ್‌ರಚನೆ ನಡೆಯುವ ಸಾಧ್ಯತೆ ಇದೆ. ಪಂಜಾಬ್‌ನ ಆಂತರಿಕ ಭಿನ್ನಾಭಿಪ್ರಾಯಕ್ಕೆ ತೇಪೆ ಹಚ್ಚಿರುವ ಕಾಂಗ್ರೆಸ್‌ ಹೈಕಮಾಂಡ್ ಚಿತ್ತವೀಗ ರಾಜಸ್ಥಾನದತ್ತ ನೆಟ್ಟಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಅಶೋಕ್ ಗೆಹ್ಲೋತ್ ಮತ್ತು ಪಕ್ಷದ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಸಚಿನ್ ಪೈಲಟ್ ನಡುವಣ ಭಿನ್ನಾಭಿಪ್ರಾಯ ಮೂರು ವರ್ಷಗಳಿಗೂ ಹಿಂದಿನದ್ದಾಗಿದ್ದು, ಇದನ್ನು ಸರಿಪಡಿಸಲು ಹೈಕಮಾಂಡ್ ಮುಂದಾಗಿದೆ ಎನ್ನಲಾಗಿದೆ.

ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ರಾಜಸ್ಥಾನ ಉಸ್ತುವಾರಿ ಅಜಯ್ ಮಾಕೆನ್ ಇಂದು (ಶನಿವಾರ) ರಾತ್ರಿ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಹಿರಿಯ ನಾಯಕರ ಜತೆ ಸಭೆ ನಡೆಸಲಿದ್ದಾರೆ. ಮುಖ್ಯಮಂತ್ರಿಗಳ ನಿವಾಸದಲ್ಲಿ ಸಭೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.

ಇತ್ತೀಚೆಗೆ ದೆಹಲಿಗೆ ಭೇಟಿ ನೀಡಿದ್ದ ಸಚಿನ್ ಪೈಲಟ್, ಪಕ್ಷದ ಹೈಕಮಾಂಡ್‌ ಜತೆ ಸಂಪರ್ಕದಲ್ಲಿರುವುದಾಗಿಯೂ ತಾವು ಪ್ರಸ್ತಾಪಿಸಿದ್ದ ವಿಚಾರಗಳಿಗೆ ಸಂಬಂಧಿಸಿ ಹೈಕಮಾಂಡ್ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದೂ ಭರವಸೆ ವ್ಯಕ್ತಪಡಿಸಿದ್ದಾರೆ.

ಪಕ್ಷಕ್ಕಾಗಿ ಸಾಕಷ್ಟು ದುಡಿದಿರುವ ಕಾರ್ಯಕರ್ತರಿಗೆ ಅವರ ಶ್ರಮಕ್ಕೆ ಅನುಗುಣವಾಗಿ ರಾಜಕೀಯ ಪ್ರತಿಫಲ ದೊರೆಯಬೇಕು. ಇದು ಯಾವುದೇ ಹುದ್ದೆ ಅಥವಾ ಸ್ಥಾನಕ್ಕೆ ಸಂಬಂಧಿಸಿದ್ದಲ್ಲ. ನಾವು ಕಾಂಗ್ರೆಸ್ ಕುಟುಂಬವನ್ನು ವಿಸ್ತರಿಸಲು ಬಯಸುತ್ತೇವೆ. ಹೊಸ ಜನರನ್ನು ಸಂಯೋಜಿಸಬೇಕಿದೆ ಎಂದು ಪೈಲಟ್ ಹೇಳಿದ್ದಾರೆ.

ಕಳೆದ ವರ್ಷ ಜುಲೈನಲ್ಲಿ ತಮ್ಮದೇ ಸರ್ಕಾರದ ವಿರುದ್ಧ ಬಂಡೆದ್ದಿದ್ದ ಸಚಿನ್ ಪೈಲಟ್ ಅವರನ್ನು ಉಪ ಮುಖ್ಯಮಂತ್ರಿ ಸ್ಥಾನ ಮತ್ತು ರಜಸ್ಥಾನ ಪಿಸಿಸಿ ಮುಖ್ಯಸ್ಥನ ಸ್ಥಾನದಿಂದ ಕಾಂಗ್ರೆಸ್‌ ವಜಾಗೊಳಿಸಿತ್ತು. ಕಾಂಗ್ರೆಸ್ ಸರ್ಕಾರ ಪತನಗೊಳಿಸಲು ಸಚಿನ್ ಪೈಲಟ್ ಸಂಚು ಹೂಡಿದ್ದರು ಎಂದು ಆರೋಪಿಸಿದ್ದ ಮುಖ್ಯಮಂತ್ರಿ ಅಶೋಕ್ ಗೆಹ್ಲೋತ್ ಬಣ ಆಡಿಯೊ ಸಾಕ್ಷ್ಯವನ್ನೂ ಬಿಡುಗಡೆ ಮಾಡಿತ್ತು. ಆ ಬಳಿಕ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಯಾಗಿತ್ತು. ಬಳಿಕ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಪೈಲಟ್ ಜತೆ ಮಾತುಕತೆ ನಡೆಸುವುದರೊಂದಿಗೆ ಬಂಡಾಯ ತಾತ್ಕಾಲಿಕ ಶಮನ ಕಂಡಿತ್ತು.

ಆದರೆ ಸಚಿನ್‌ ಪೈಲಟ್‌ ಅವರ ಕಟ್ಟಾ ಬೆಂಬಲಿಗರಾಗಿರುವ, ಶಾಸಕ ವೇದ ಪ್ರಕಾಶ್‌ ಸೋಲಂಕಿ ಅವರು ಕೆಲವು ಶಾಸಕರ ದೂರವಾಣಿ ಕರೆಗಳ ಕದ್ದಾಲಿಕೆ ನಡೆಸಲಾಗುತ್ತಿದೆ ಎಂದು ಕಳೆದ ತಿಂಗಳು ಆರೋಪಿಸಿದ್ದರು. ಆದರೆ, ಆರೋಪವನ್ನು ರಾಜಸ್ಥಾನ ಸಾರಿಗೆ ಸಚಿವ ಪ್ರತಾಪ್ ಸಿಂಗ್ ಕಚಾರಿಯವಸ್ ತಳ್ಳಿಹಾಕಿದ್ದರು. ಇದರೊಂದಿಗೆ ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಮತ್ತೆ ಆರೋಪ–ಪ್ರತ್ಯಾರೋಪಗಳು ಮುನ್ನೆಲೆಗೆ ಬಂದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT