ಭಾನುವಾರ, ಜೂನ್ 13, 2021
22 °C
ಒಂದೇ ಸಮನೇ ಏರುತ್ತಿರುವ ಸೋಂಕಿತರ ಸಂಖ್ಯೆ

ರಾಷ್ಟ್ರೀಯ ಲಾಕ್‌ಡೌನ್‌: ಪ್ರಧಾನಿ ಮೇಲೆ ಹೆಚ್ಚಿದ ಒತ್ತಡ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಸತತ ಎರಡನೇ ದಿನ ದೇಶದಲ್ಲಿ ಕೋವಿಡ್‌ –19 ಹೆಮ್ಮಾರಿಯಿಂದ ಸಾವಿಗೀಡಾದವರ ಸಂಖ್ಯೆ ನಾಲ್ಕು ಸಹಸ್ರ ದಾಟಿದೆ. ಇದರೊಂದಿಗೆ ಅಬ್ಬರಿಸುತ್ತಿರುವ ವೈರಸ್‌ಗೆ ಕಡಿವಾಣ ಹಾಕಲು ದೇಶದಲ್ಲಿ ಲಾಕ್‌ಡೌನ್‌ ಹೇರಬೇಕೆಂಬ ಕೂಗು ಕೂಡ ಬಲವಾಗಿದೆ.

ಸೋಂಕಿತರಾಗುತ್ತಿರುವವರ ಮತ್ತು ಸಾವಿಗೆ ತುತ್ತಾಗುತ್ತಿರುವ ಸಂಖ್ಯೆಯಲ್ಲಿ ಒಂದೇ ಸಮನೇ ಏರಿಕೆಯಾಗುತ್ತಿದೆ. ಭಾನುವಾರ ಬೆಳಿಗ್ಗೆಯವರೆಗೆ ದೇಶದಲ್ಲಿ ಹೊಸದಾಗಿ ಕೊರೊನಾ ಸೋಂಕು ಬಾಧೆಗೊಳಗಾದವರ ಸಂಖ್ಯೆ 4,03,738 ತಲುಪಿದೆ. ಇದು ಸಾರ್ವಕಾಲಿಕ ದಾಖಲೆಯ ಸನಿಹದಲ್ಲೇ ಇದೆ.

ಆರೋಗ್ಯ ಸಚಿವಾಲಯದ ಪ್ರಕಾರ  ದೇಶದಲ್ಲಿ 24 ಗಂಟೆಗಳ ಅವಧಿಯಲ್ಲಿ ಅಸುನೀಗಿದವರ ಸಂಖ್ಯೆ 4,092 ಆಗಿದೆ. ದೇಶದಲ್ಲಿ ಇದುವರೆಗೆ 2,43,362 ಮಂದಿ ಈ ಪಿಡುಗಿನಿಂದ ಕೊನೆಯುಸಿರೆಳೆದಿದ್ದಾರೆ.

ದಿನೇ ದಿನೇ ಸೋಂಕಿತರಾಗುತ್ತಿರುವವರ ಸಂಖ್ಯೆ ಏರುತ್ತಿದೆ. ಆಸ್ಪತ್ರೆಗಳಲ್ಲಿ ಆಮ್ಲಜನಕ ಮತ್ತು ಹಾಸಿಗೆಗಳ ಕೊರತೆಯೂ ಕಾಡುತ್ತಿದೆ. ದೇಶದ ಕೆಲವು ಶವಾಗಾರಗಳಲ್ಲಿ ಶವಗಳು ತುಂಬಿ ತುಳುಕಿವೆ. ಚಿತಾಗಾರಗಳಲ್ಲಿ ಸತತವಾಗಿ ಎಂಬಂತೆ ಅಂತ್ಯಸಂಸ್ಕಾರಗಳು ನಡೆಯುತ್ತಿವೆ. ವಾಸ್ತವದಲ್ಲಿ ಸರ್ಕಾರದ ಅಂಕಿ ಅಂಶಗಳಿಗಿಂತ ಹೆಚ್ಚು ಮಂದಿ ಈ ಪಿಡುಗಿನಿಂದ ಪ್ರಾಣ ಕಳೆದುಕೊಂಡಿರಬಹುದು ಎಂದು ತಜ್ಞರು ಅಂದಾಜು ಮಾಡಿದ್ದಾರೆ.

ಹೆಚ್ಚಿನ ರಾಜ್ಯಗಳು, ಸೋಂಕು ಹರಡುವುದನ್ನು ತಡೆಯಲು ಲಾಕ್‌ಡೌನ್‌ಗೆ ಮೊರೆಹೋಗಿವೆ. ಸಿನಿಮಾ ಮಂದಿರ, ಮಾಲ್‌, ಪಬ್‌, ರೆಸ್ಟೊರೆಂಟ್‌ಗಳನ್ನು ಬಂದ್‌ ಮಾಡಲಾಗಿದೆ. ಜನರ ಓಡಾಟಕ್ಕೆ ತಡೆಹಾಕಲು ನಿರ್ಬಂಧಗಳನ್ನು ವಿಧಿಸಲಾಗಿದೆ.

ಆದರೆ 2020ರ ಮಾರ್ಚ್‌– ಏಪ್ರಿಲ್‌ನಲ್ಲಿ, ಮೊದಲ ಅಲೆಗೆ ತಡೆ ಹಾಕಲು ಹೇರಿದ ಮಾದರಿಯ ಲಾಕ್‌ಡೌನ್‌ಅನ್ನು ಮತ್ತೆ ಘೋಷಣೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ದಾಮೋದರದಾಸ ಮೋದಿ ಅವರ ಮೇಲೆ ಒತ್ತಡ ಹೆಚ್ಚಿದೆ.

ಆಗಸ್ಟ್‌ನಲ್ಲಿ ಸತ್ತವರ ಸಂಖ್ಯೆ 10 ಲಕ್ಷಕ್ಕೆ ಏರಬಹುದು ಎಂದು ತಜ್ಞರು ಗಣಿತದ ಮಾದರಿಯನ್ನಿಟ್ಟು ಅಂದಾಜು ಮಾಡಿದ್ದಾರೆ.

ನೆರವಿನ ರೂಪದಲ್ಲಿ ಆಮ್ಲಜನಕದ ಸಿಲಿಂಡರ್‌ಗಳು, ಸಾಂದ್ರಕಗಳು (ಕಾನ್ಸಂಟ್ರೇಟರ್ಸ್‌), ವೆಂಟಿಲೇಟರ್‌ಗಳು ಮತ್ತು ಇತರ ವೈದ್ಯಕೀಯ ಪರಿಕರಗಳು ವಿಶ್ವದ ವಿವಿಧ ರಾಷ್ಟ್ರಗಳಿಂದ ಭಾರತವನ್ನು ತಲುಪುತ್ತಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು