ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವ್ಯಾಕ್ಸಿನ್‌ ಅನುಮೋದನೆಗೆ ಆತುರವಿಲ್ಲ: ಡಬ್ಲ್ಯುಎಚ್‌ಒ

Last Updated 18 ಅಕ್ಟೋಬರ್ 2021, 15:59 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವ್ಯಾಕ್ಸಿನ್‌ಗೆ ಅನುಮೋದನೆ ನೀಡುವಲ್ಲಿ ಆತುರ ನೀತಿ ಅನುಸರಿಸುವುದಿಲ್ಲ. ಅಗತ್ಯವಿರುವ ಎಲ್ಲ ದಾಖಲೆ ಪರಿಶೀಲಿಸಿದ ನಂತರವೇ ಅನುಮೋದನೆ ನೀಡಲಾಗುತ್ತದೆ,’ ಎಂದು ವಿಶ್ವ ಆರೋಗ್ಯ ಸಂಸ್ಥೆ ಸೋಮವಾರ ಸ್ಪಷ್ಟಪಡಿಸಿದೆ.

ಕೋವ್ಯಾಕ್ಸಿನ್‌ ಅನ್ನು ತುರ್ತು ಬಳಕೆಯ ಪಟ್ಟಿಯಲ್ಲಿ ಸೇರಿಸಲು ಡಬ್ಲ್ಯೂಎಚ್‌ಒ ಬಹುತೇಕ ಸೋಮವಾರ ಅನುಮೋದನೆ ನೀಡಲಿದೆ ಎಂದು ಹೇಳಲಾಗಿತ್ತು. ಆದರೆ, ಡಬ್ಲ್ಯುಎಚ್‌ಒ ವ್ಯಕ್ತಪಡಿಸಿರುವ ಅಭಿಪ್ರಾಯವು ಅನುಮೋದನೆ ವಿಳಂಬವಾಗುವ ಮನ್ಸೂಚನೆ ನೀಡಿದೆ.

ಈ ಕುರಿತು ಸೋಮವಾರ ಸಂಜೆ ಟ್ವೀಟ್‌ ಮಾಡಿರುವ ಡಬ್ಲ್ಯುಎಚ್‌ಒ,‘ತುರ್ತು ಬಳಕೆಯ ಪಟ್ಟಿಯಲ್ಲಿ ಕೋವಾಕ್ಸಿನ್‌ ಲಸಿಕೆಯನ್ನು ಸೇರಿಸಲು ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸಿಗಾಗಿ ಆನೇಕರು ನಿರೀಕ್ಷೆಯಲ್ಲಿದ್ದಾರೆ ಎಂಬುದು ನಮಗೆ ಗೊತ್ತಿದೆ. ಆದರೆ ನಾವು ಆತುರ ಮಾಡುವುದಿಲ್ಲ. ತುರ್ತು ಬಳಕೆಗಾಗಿ ಲಸಿಕೆಯನ್ನು ಶಿಫಾರಸು ಮಾಡುವ ಮೊದಲು, ಅದನ್ನು ಸುರಕ್ಷಿತ, ಪರಿಣಾಮಕಾರಿ ಎಂದು ಖಚಿತಪಡಿಸಿಕೊಳ್ಳಲು ನಾವು ಅದರ ಸಂಪೂರ್ಣ ಮೌಲ್ಯಮಾಪನ ಮಾಡಬೇಕು,‘ ಎಂದು ತಿಳಿಸಿದೆ.

‘ಕೋವಾಕ್ಸಿನ್ ತಯಾರಕ ಸಂಸ್ಥೆಯಾದ ಭಾರತ್ ಬಯೋಟೆಕ್ ಡಬ್ಲ್ಯುಎಚ್‌ಒಗೆ ಆಗಾಗ್ಗೆ ಮಾಹಿತಿಗಳನ್ನು ಸಲ್ಲಿಸುತ್ತಿದೆ. ಡಬ್ಲ್ಯುಎಚ್‌ಒ ತಜ್ಞರು ಈ ಮಾಹಿತಿಯನ್ನು ಪರಿಶೀಲಿಸುತ್ತಿದ್ದಾರೆ.ಇಂದು ವಿಶ್ವ ಆರೋಗ್ಯ ಸಂಸ್ಥೆಯು ಲಸಿಕೆ ತಯಾರಕ ಸಂಸ್ಥೆಯಿಂದ ಒಂದು ಹೆಚ್ಚುವರಿ ಮಾಹಿತಿಯನ್ನು ಕೇಳಿದೆ’ ಎಂದು ತಿಳಿಸಿದೆ.

‘ಲಸಿಕೆಯ ಗುಣಮಟ್ಟ, ಸುರಕ್ಷತೆ, ಪರಿಣಾಮಕಾರಿತ್ವ ಮತ್ತು ಕಡಿಮೆ ಹಾಗೂ ಮಧ್ಯಮ-ಆದಾಯದ ದೇಶಗಳು ಈ ಲಸಿಕೆಯನ್ನು ಹೊಂದಲು ಸಾಧ್ಯವೆ ಎಂಬುದರ ಕುರಿತ ಮಾಹಿತಿಯನ್ನು ಭಾರತ್‌ ಬಯೋಟೆಕ್‌ ಸಂಸ್ಥೆ ಎಷ್ಟು ಬೇಗ ವಿಶ್ವ ಆರೋಗ್ಯ ಸಂಸ್ಥೆಗೆ ಸಲ್ಲಿಸುತ್ತದೆ ಎಂಬುದರ ಆಧಾರದ ಮೇಲೆ ಲಸಿಕೆಯನ್ನು ತುರ್ತು ಬಳಕೆಗೆ ಅನುಮೋದನೆ ನೀಡುವ ಸಮಯಾವಧಿ ನಿಗದಿಯಾಗಿರುತ್ತದೆ,’ ಎಂದು ಡಬ್ಲ್ಯುಎಚ್‌ಒ ತಿಳಿಸಿದೆ.

‘ಲಸಿಕೆಯೊಂದರ ಕುರಿತು ಉದ್ಭವವಾಗುವ ಪ್ರಶ್ನೆಗಳಿಗೆ ಸಮಾಧಾನ ನೀಡುವ ದಾಖಲೆಗೆಲ್ಲ ಪೂರೈಕೆಯಾದರೆ, ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅದರ ಸಲಹಾ ಸಮಿತಿಯು ಪ್ರಕ್ರಿಯೆಯನ್ನು ಮುಗಿಸುತ್ತದೆ. ನಂತರ ಲಸಿಕೆಗೆ ಅನುಮತಿ ನೀಡಬೇಕೋ ಬೇಡವೋ ಎಂಬ ತೀರ್ಮಾನಕ್ಕೆ ಬರಲಿದೆ’ ಎಂದು ಡಬ್ಲ್ಯುಎಚ್‌ಒ ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT