ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗ ತೆರವುಗೊಳಿಸಲು ರೈತರಿಗೆ ಸೂಚನೆ: ದೆಹಲಿ ಪೊಲೀಸರ ವಿರುದ್ಧ ತೀವ್ರ ಆಕ್ರೋಶ

ಟಿಕ್ರಿ ಗಡಿಯಲ್ಲಿ ಪೋಸ್ಟರ್‌ ಅಂಟಿಸಿದ ದೆಹಲಿ ಪೊಲೀಸರು
Last Updated 23 ಫೆಬ್ರುವರಿ 2021, 18:18 IST
ಅಕ್ಷರ ಗಾತ್ರ

ನವದೆಹಲಿ: ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ಪ್ರತಿಭಟನೆಗೆ ಕುಳಿತಿರುವ ಟಿಕ್ರಿ ಗಡಿಪ್ರದೇಶವನ್ನು ತೆರವುಗೊಳಿಸುವಂತೆ ಸೂಚಿಸಿ ದೆಹಲಿ ಪೊಲೀಸರು ಎಚ್ಚರಿಕೆಯ ಫಲಕಗಳನ್ನು ಹಾಕಿರುವುದು ತೀವ್ರ ವಿರೋಧಕ್ಕೆ ಕಾರಣವಾಗಿದೆ.

ಇಂಥ ಫಲಕಗಳನ್ನು ಹಾಕಿರುವುದಕ್ಕೆ ರೈತ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದರೆ, ‘ಇದು ಹೊಸದೇನೂ ಅಲ್ಲ, ದೆಹಲಿ ಗಡಿಯೊಳಗೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನಕಾರರಿಗೆ ತಿಳಿಸುವುದಷ್ಟೇ ಇದರ ಉದ್ದೇಶ’ ಎಂದು ಪೊಲೀಸರು ಹೇಳಿದ್ದಾರೆ. ಜಾಗ ತೆರವು ಮಾಡಲು ಯಾವುದೇ ಗಡುವನ್ನು ಪೊಲೀಸರು ನೀಡಲಿಲ್ಲ.

‘ಪ್ರತಿಭಟನಾ ಪ್ರದೇಶವನ್ನು ಖಾಲಿ ಮಾಡುವಂತೆ ಟಿಕ್ರಿ ಗಡಿಯಲ್ಲಿ ಕೆಲವೆಡೆ ಫಲಕಗಳನ್ನು ಹಾಕಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಶಾಂತಿಯುತವಾಗಿ ಪ್ರತಿಭಟನೆ ಮಾಡುವುದು ನಮ್ಮ ಸಾಂವಿಧಾನಿಕ ಹಕ್ಕು. ಬೆದರಿಕೆ ಹಾಗೂ ಎಚ್ಚರಿಕೆಗಳ ಮೂಲಕ ಪ್ರತಿಭಟನೆಯನ್ನು ಕೊನೆಗೊಳಿಸುವ ಸಂಚು ನಡೆಸಲಾಗುತ್ತಿದೆ. ಇದನ್ನು ನಾವು ವಿರೋಧಿಸುತ್ತೇವೆ’ ಎಂದು ಸಂಯುಕ್ತ ಕಿಸಾನ್‌ ಮೋರ್ಚಾ ಪ್ರಕಟಣೆಯಲ್ಲಿ ಹೇಳಿದೆ.

‘ಪ್ರತಿಭಟನೆ ಆರಂಭವಾದ ನಂತರ ಗಡಿಯಲ್ಲಿ ಇಂಥ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಇದೊಂದು ಸಾಮಾನ್ಯ ಪ್ರಕ್ರಿಯೆ. ನೀವು ಹರಿಯಾಣ ರಾಜ್ಯದ ವ್ಯಾಪ್ತಿಯಲ್ಲಿದ್ದೀರಿ, ರಾಷ್ಟ್ರದ ರಾಜಧಾನಿಯೊಳಗೆ ಕಾನೂನುಬಾಹಿರವಾಗಿ ಪ್ರವೇಶಿಸಲು ಅವಕಾಶ ನೀಡುವುದಿಲ್ಲ’ ಎಂದು ಪ್ರತಿಭಟನಕಾರರಿಗೆ ಸೂಚಿಸಲಾಗಿದೆ ಅಷ್ಟೇ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಉಪವಾಸದ ಮೂಲಕ ಸಂದೇಶ: ‘ಉತ್ತರ ಪ್ರದೇಶದ ಪ್ರತಿ ಗ್ರಾಮದಲ್ಲಿ ತಲಾ ಐವರು ರೈತರು ಪ್ರತಿದಿನ ಎಂಟು ಗಂಟೆ ಉಪವಾಸವಿದ್ದು, ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವಂತೆ ಮತ್ತು ಕನಿಷ್ಠ ಬೆಂಬಲಬೆಲೆಯನ್ನು ಕಾನೂನು ಮೂಲಕ ಖಾತರಿಪಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಲಿದ್ದಾರೆ’ ಎಂದು ರಾಷ್ಟ್ರೀಯ ಕಿಸಾನ್‌ ಮಜ್ದೂರ್‌ ಸಂಘಟನ್‌ ಅಧ್ಯಕ್ಷ ವಿ.ಎಂ. ಸಿಂಗ್‌ ತಿಳಿಸಿದ್ದಾರೆ.

ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ನಡೆದ ಹಿಂಸಾಚಾರದ ಬಳಿಕ ಈ ಸಂಘಟನೆಯು ರೈತರ ಪ್ರತಿಭಟನೆಗೆ ನೀಡಿದ್ದ ಬೆಂಬಲವನ್ನು ಹಿಂಪಡೆದಿತ್ತು. ಈಗ ಉತ್ತರ ಪ್ರದೇಶದ 21 ರೈತ ಸಂಘಟನೆಗಳ ಜತೆ ಸೇರಿ ‘ಉತ್ತರ ಪ್ರದೇಶ ಕಿಸಾನ್‌ ಮಜ್ದೂರ್‌ ಮೋರ್ಚಾ’ ಆರಂಭಿಸಿದೆ.

‘ಉತ್ತರ ಪ್ರದೇಶದ ಪ್ರತಿ ಗ್ರಾಮದಲ್ಲಿ ತಲಾ ಐವರು ರೈತರು, ಬೆಳಿಗ್ಗೆ 9ರಿಂದ ಸಂಜೆ 5ಗಂಟೆಯವರೆಗೆ ಉಪವಾಸ ನಡೆಸುವರು. ಮಧ್ಯಾಹ್ನ 3 ಗಂಟೆಗೆ ಇವರು, ತಮ್ಮ ಪರಿಚಯ ಮಾಡಿಕೊಂಡು, ತಮ್ಮ ಸಂಕಷ್ಟಗಳನ್ನು ಹೇಳಿಕೊಳ್ಳುವ ಎರಡು ನಿಮಿಷಗಳ ಸಂದೇಶವನ್ನು ಧ್ವನಿಮುದ್ರಣ ಮಾಡುವರು. ಅದನ್ನು ಪ್ರಧಾನಿ ಮೋದಿ ಅವರಿಗೆ ಕಳುಹಿಸಲಾಗುವುದು. ಅಲ್ಲದೆ, ಸಂಘಟನೆಯ ವೆಬ್‌ಸೈಟ್‌ನಲ್ಲೂ ಅಪ್‌ಲೋಡ್‌ ಮಾಡಲಾಗುವುದು. ಹೀಗೆ ಪ್ರತಿನಿತ್ಯ ಕನಿಷ್ಠ ಒಂದು ಲಕ್ಷ ಧ್ವನಿಮುದ್ರಿಕೆಗಳು ಪ್ರಧಾನಿಗೆ ರವಾನೆಯಾಗಲಿವೆ’ ಎಂದು ಸಿಂಗ್‌ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ದೆಹಲಿ ಗಲಭೆ: ಇನ್ನಿಬ್ಬರ ಬಂಧನ

ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಇನ್ನೂ ಇಬ್ಬರು ಆರೋಪಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಯುನೈಟೆಡ್‌ ಕಿಸಾನ್‌ ಫ್ರಂಟ್‌ ಅಧ್ಯಕ್ಷ ಮೊಹಿಂದರ್‌ ಸಿಂಗ್‌ (45) ಹಾಗೂ ಮನ್‌ದೀಪ್‌ ಸಿಂಗ್‌ ಅವರು ಬಂಧಿತರು. ಇವರನ್ನು ದೆಹಲಿ ಗಲಭೆಯ ಪ್ರಮುಖ ಸಂಚಿಕೋರರು ಎಂದು ಗುರುತಿಸಲಾಗಿದೆ ಎಂದು ದೆಹಲಿ ಪೊಲೀಸ್‌ ಇಲಾಖೆಯ ಹೆಚ್ಚುವರಿ ಪಿಆರ್‌ಒ ಅನಿಲ್‌ ಮಿತ್ತಲ್‌ ತಿಳಿಸಿದ್ದಾರೆ.

ದೆಹಲಿ ಪೊಲೀಸರ ಅಪರಾಧ ವಿಭಾಗದವರು ಸೋಮವಾರ ರಾತ್ರಿ ಇವರನ್ನು ವಶಕ್ಕೆ ಪಡೆದು, ವಿಚಾರಣೆಗಾಗಿ ದೆಹಲಿಗೆ ಕರೆತಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೀಪ್‌ಸಿಧುಗೆ ನ್ಯಾಯಾಂಗ ಬಂಧನ: ಗಣರಾಜ್ಯೋತ್ಸವ ದಿನದಂದು ನಡೆದ ಗಲಭೆಯ ಆರೋಪಿಯಾಗಿರುವ ನಟ ದೀಪ್‌ ಸಿಧು ಅವರನ್ನು ದೆಹಲಿಯ ಮೆಟ್ರೊಪಾಲಿಟನ್‌ ನ್ಯಾಯಾಲಯವು ಮಂಗಳವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ರ್‍ಯಾಲಿಯಲ್ಲಿ ಕಾಣಿಸಿದ ಸಿಧಾನಾ (ಭಟಿಂಡ ವರದಿ): ಗಲಭೆಗೆ ಸಂಬಂಧಿಸಿದಂತೆ ಪೊಲೀಸರಿಗೆ ಬೇಕಾಗಿರುವ ಆರೋಪಿ ಲಖ್ಖಾ ಸಿಧಾನಾ ಮಂಗಳವಾರ ಇಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದಾನೆ.

ರೈತ ಪ್ರತಿಭಟನೆಯನ್ನು ಬೆಂಬಲಿಸಿ ಭಟಿಂಡದ ಮೆಹರಾಜ್‌ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರ ವೇದಿಕೆಯ ಮೇಲೆ ಆತ ಕುಳಿತಿರುವುದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೊ ಒಂದರಲ್ಲಿ ಕಂಡುಬಂದಿದೆ.

ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಸಾರ್ವಜನಿಕ ಸಭೆ ಆಯೋಜಿಸುವಂತೆ ಸಿಧಾನಾ ಕಳೆದ ವಾರ ಜನರಿಗೆ ಕರೆ ನೀಡಿದ್ದ. ಆದ್ದರಿಂದ ಈ ಕಾರ್ಯಕ್ರಮದಲ್ಲಿ ಆತ ಪಾಲ್ಗೊಳ್ಳಬಹುದು ಎಂದು ಊಹಿಸಲಾಗಿತ್ತು. ಹೋರಾಟಗಾರನಾಗಿ ಬದಲಾಗಿರುವ ಈ ಪಾತಕಿಯ ವಿರುದ್ಧ ಪಂಜಾಬ್‌ನಲ್ಲಿ ಹಲವು ದೂರುಗಳು ದಾಖಲಾಗಿದ್ದು, ಅನೇಕ ಬಾರಿ ಜೈಲಿಗೂ ಹೋಗಿ ಬಂದಿದ್ದಾನೆ. 2012ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವನ್ನೂ ಸಾಧಿಸಿದ್ದ.

ಅಭಿಪ್ರಾಯ ಸಂಗ್ರಹ

ಮೂರು ಕೃಷಿ ಕಾಯ್ದೆಗಳ ಬಗ್ಗೆ ರೈತರ ಜತೆ ಸಂವಾದ ನಡೆಸಿ ಅಭಿಪ್ರಾಯ ಸಂಗ್ರಹಿಸಲು ಸುಪ್ರೀಂ ಕೋರ್ಟ್‌ ನೇಮಕಮಾಡಿರುವ ಸಮಿತಿಯ ಸದಸ್ಯರು ಮಂಗಳವಾರ ಅಖಿಲಭಾರತ ರೈತ ಸಂಚಾಲನಾ ಸಮಿತಿಯ (ಎಐಕೆಸಿಸಿ) ಪ್ರತಿನಿಧಿಗಳ ಜತೆ ಮಾತುಕತೆ ನಡೆಸಿದ್ದಾರೆ.

‘ಸಮಿತಿಯ ಎಲ್ಲಾ ಪದಾಧಿಕಾರಿಗಳು ಮೂರು ಕೃಷಿ ಕಾನೂನುಗಳ ಬಗ್ಗೆ ತಮ್ಮ ಅಭಿಪ್ರಾಯ, ಸಲಹೆ ಸೂಚನೆಗಳನ್ನು ವ್ಯಕ್ತಪಡಿಸಿದ್ದಾರೆ’ ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಕೃಷಿ ಕಾಯ್ದೆಗಳ ಜಾರಿಗೆ ಕಳೆದ ಜನವರಿ 12ರಂದು ತಡೆಯಾಜ್ಞೆ ನೀಡಿದ್ದ ಸುಪ್ರೀಂ ಕೋರ್ಟ್‌, ಅಶೋಕ್‌ ಗುಲಾಟಿ, ಪ್ರಮೋದ್‌ ಜೋಶಿ ಹಾಗೂ ಅನಿಲ್‌ ಘನವತ್‌ ಅವರನ್ನೊಳಗೊಂಡ ಸಮಿತಿಯನ್ನು ರಚಿಸಿ, ಸಂಬಂಧಪಟ್ಟ ಎಲ್ಲರೊಂದಿಗೂ ಚರ್ಚಿಸಿ ವರದಿ ಸಲ್ಲಿಸುವಂತೆ ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT