ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು ಯೋಜನೆ ಆರಂಭಿಸಲು ಕಾವೇರಿ ಪ್ರಾಧಿಕಾರದ ಅನುಮತಿ ಅಗತ್ಯ: ಕೇಂದ್ರ ಸರ್ಕಾರ

Last Updated 5 ಆಗಸ್ಟ್ 2021, 20:17 IST
ಅಕ್ಷರ ಗಾತ್ರ

ನವದೆಹಲಿ: ಮೇಕೆದಾಟು ಯೋಜನೆ ಆರಂಭಿಸಲು ಕರ್ನಾಟಕ ಸರ್ಕಾರ ಸಲ್ಲಿಸಿರುವ ಸಮಗ್ರ ಯೋಜನಾ ವರದಿ (ಡಿಪಿಆರ್‌)ಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅನುಮತಿಯ ಅಗತ್ಯವಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಲೋಕಸಭೆಯಲ್ಲಿ ಗುರುವಾರ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್‌ನ ಪ್ರಜ್ವಲ್ ರೇವಣ್ಣ ಅವರ ಪ್ರಶ್ನೆಗೆ ಉತ್ತರಿಸಿದ ಕೇಂದ್ರದ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೆಖಾವತ್, ಯೋಜನೆಗೆ ಕಾವೇರಿ ಕಣಿವೆಯ ಕೆಳಹಂತದ ರಾಜ್ಯಗಳ ಸಮ್ಮತಿಯೂ ಬೇಕು ಎಂದರು.

ಕರ್ನಾಟಕ ಸರ್ಕಾರವು 2018ರಲ್ಲಿ ಕೇಂದ್ರ ಜಲ ಆಯೋಗ (ಸಿಡಬ್ಲ್ಯೂಸಿ)ದ ಪರಿಶೀಲನಾ ಸಮಿತಿಗೆ ಯೋಜನೆ ಕುರಿತ ಕಾರ್ಯಸಾಧ್ಯತೆ ವರದಿ ಸಲ್ಲಿಸಿ ಡಿಪಿಆರ್‌ಗೆ ಅನುಮತಿ ಕೋರಿದ್ದರಿಂದ, ಷರತ್ತುಗಳನ್ನು ವಿಧಿಸಿ ತಾತ್ವಿಕ ಒಪ್ಪಿಗೆ ನೀಡಲಾಗಿದೆ ಎಂದು ಅವರು ಹೇಳಿದರು.

ಈ ಡಿಪಿಆರ್‌ಗೆ ಅನುಮತಿ ಕೋರಿ ಕರ್ನಾಟಕ ಸಲ್ಲಿಸಿರುವ ಅರ್ಜಿಯ ಕುರಿತು ಕಾವೇರಿ ನೀರು ನಿರ್ವಹಣಾ ಮಂಡಳಿ ಸಭೆ ನಡೆಸಿದಾಗ ಕರನಾಟಕ ಹಾಗೂ ತಮಿಳುನಾಡು ಸರ್ಕಾರಗಳು ಒಮ್ಮತದ ನಿಲುವು ತಾಳದ್ದರಿಂದ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಅವರು ವಿವರಿಸಿದರು.

ಕಣಿವೆಯ ಕೆಳಹಂತದ ರಾಜ್ಯಗಳಾದ ತಮಿಳುನಾಡು ಮತ್ತು ಪುದುಚೇರಿ ಸರ್ಕಾರಗಳ ಸಮ್ಮತಿ ಪಡೆಯುವುದು ಅಗತ್ಯ ಎಂದು ಕರ್ನಾಟಕವು ಡಿಪಿಆರ್ ಸಲ್ಲಿಸಿದಾಗಲೇ ತಿಳಿಸಲಾಗಿದೆ ಎಂದೂ ಸಚಿವರು ಲೋಕಸಭೆಗೆ ಹೇಳಿದರು.

ತಮಿಳುನಾಡಿನ ವಿರೋಧದಿಂದಾಗಿ ಇದುವರೆಗೆ ಯೋಜನೆಗೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವೂ ಅನುಮತಿ ನೀಡಿಲ್ಲ ಎಂದ ಅವರು, ಒಮ್ಮತದ ನಿರ್ಧಾರ ಕೈಗೊಂಡಲ್ಲಿ ಅನುಮತಿ ನೀಡಲಾಗುವುದು ಎಂದೂ ಸಚಿವಾಲಯವು ಉಭಯ ರಾಜ್ಯಗಳಿಗೆ ತಿಳಿಸಿತ್ತು ಎಂದರು.

‘ಅನುಮತಿ ಕೋರಿ ಅರ್ಜಿ ಸಲ್ಲಿಸಿದ 6 ತಿಂಗಳೊಳಗೆ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡದಿದ್ದರೆ, ತಾತ್ವಿಕ ಒಪ್ಪಿಗೆ ದೊರೆತಿದೆ ಎಂದು ಭಾವಿಸಬಹುದಲ್ಲವೇ?’ ಎಂಬ ಪ್ರಜ್ವಲ್ ಅವರ ಪೂರಕ ಪ್ರಶ್ನೆಗೆ ಉತ್ತರಿಸಿದ ಸಚಿವರು, ತಾತ್ವಿಕ ಒಪ್ಪಿಗೆ ದೊರೆತಿದೆ ಎಂದು ಭಾವಿಸುವುದು ಸಹಜ. ಆದರೆ, ಕಾವೇರಿ ಜಲವಿವಾದ ನ್ಯಾಯಮಂಡಳಿ ನೀಡಿದ್ದ ಐತೀರ್ಪನ್ನು ಪ್ರಶ್ನಿಸಲಾದ ಕಣಿವೆ ರಾಜ್ಯಗಳ ಮೇಲ್ಮನವಿಯ ವಿಚಾರಣೆ ನಡೆಸಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಅನ್ವಯ, ಯಾವುದೇ ಯೋಜನೆಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅನುಮತಿ ಅಗತ್ಯವಿದೆ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಮನ ಒಲಿಸಲಿ: ‘ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿ ಆಡಳಿತವೇ ಇದೆ. ಮೇಕೆದಾಟು ಯೋಜನೆಗೆ ಅನುಮತಿ ನೀಡದಂತೆ ಉಪವಾಸ ಸತ್ಯಾಗ್ರಹ ಆರಂಭಿಸಿರುವ ಬಿಜೆಪಿಯ ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷ ಅಣ್ಣಾಮಲೈ ಅವರ ಮನ ಒಲಿಸುತ್ತಿಲ್ಲ ಏಕೆ?’ ಎಂದು ಸಂಸದ ಪ್ರಜ್ವಲ್‌ ರೇವಣ್ಣ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

ಅತ್ತ ತಮಿಳುನಾಡಿನಲ್ಲಿ ಅಣ್ಣಾಮಲೈ ನಡೆಸುತ್ತಿರುವ ಹೋರಾಟ ನಡೆಸುತ್ತರೆ. ಇತ್ತ ಯೋಜನೆ ಆರಂಭಿಸಿಯೇ ತೀರುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳುತ್ತಾರೆ. ಇದು ಬಿಜೆಪಿಯ ದ್ವಿಮುಖ ನೀತಿಯಾಗಿದೆ ಎಂದು ಅವರು ಆರೋಪಿಸಿದರು.

‘ನಮ್ಮ ಪಾಲಿನ ನೀರು ನಮ್ಮ ಹಕ್ಕು. ಕಾವೇರಿ ಕಣಿವೆಯಲ್ಲಿ ಲಭ್ಯವಿರುವ ಹೆಚ್ಚುವರಿ ನೀರನ್ನು ನಾವು ಬಳಸಿಕೊಳ್ಳುವುದರಲ್ಲಿ ತಪ್ಪಿಲ್ಲ ಎಂದ ಅವರು, ರಾಮನಗರ ಜಿಲ್ಲೆ ಮತ್ತು ಬೆಂಗಳೂರಿನ ಜನತೆಗೆ ಕುಡಿಯುವ ನೀರು ಪೂರೈಸಲು ನಿಯೋಜಿತ ಯೋಜನೆಗೆ ರಾಜ್ಯ ಸರ್ಕಾರ ಕೂಡಲೇ ಚಾಲನೆ ನೀಡಬೇಕು ಎಂದು ಮನವಿ ಮಾಡಿದರು.

ಯೋಜನೆ ಆರಂಭಿಸಲಿ: ರಾಜ್ಯ ಸರ್ಕಾರ ಮೊದಲು ಯೋಜನೆಯನ್ನು ಕೈಗೆತ್ತಿಕೊಂಡು, ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

‘ಹೆಚ್ಚುವರಿ ನೀರಿನ ಮೇಲೆ ಕರ್ನಾಟಕದ ಹಕ್ಕು ಇರುವುದರಿಂದ ಯೋಜನೆಗೆ ಅನುಮತಿ ದೊರೆಯುವ ಕುರಿತು ಸಂಶಯವಿಲ್ಲ. ಹಾಗಾಗಿ ಅನುಮತಿ ದೊರೆಯುವ ಮೊದಲೇ ಕಾಮಗಾರಿ ಆರಂಭಿಸಬಹುದಾಗಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT