ಬುಧವಾರ, ಸೆಪ್ಟೆಂಬರ್ 28, 2022
27 °C

ದೆಹಲಿ ಅಬಕಾರಿ ನೀತಿಯಲ್ಲಿ ಅಕ್ರಮ ಆರೋಪ; ಸಿಸೋಡಿಯಾಗೆ ಸಿಬಿಐ ಬಿಸಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೆಹಲಿ ಉಪಮುಖ್ಯಮಂತ್ರಿ  ಮನೀಷ್‌ ಸಿಸೋಡಿಯಾ ಅವರ ಮನೆಯಲ್ಲಿ ಸಿಬಿಐ ಅಧಿಕಾರಿಗಳು ಶುಕ್ರವಾರ ಶೋಧಕಾರ್ಯ ನಡೆಸಿದ್ದಾರೆ. ದೆಹಲಿ ಅಬಕಾರಿ ನೀತಿ–2021ರ ಜಾರಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಬಿಐ ಈ ಶೋಧ ಕಾರ್ಯ ನಡೆಸಿದೆ.

ದೆಹಲಿ ಸೇರಿ ದೇಶದ ಏಳು ರಾಜ್ಯಗಳ ಒಟ್ಟು 31 ಸ್ಥಳಗಳಲ್ಲಿ ಸಿಬಿಐ ಏಕಕಾಲದಲ್ಲಿ ಶೋಧಕಾರ್ಯ ನಡೆಸಿದೆ. ದೆಹಲಿ, ಹೈದರಾಬಾದ್, ಮುಂಬೈ, ಬೆಂಗಳೂರು, ಲಖನೌ, ಗುರುಗ್ರಾಮ ಸೇರಿ ಹಲವು ನಗರಗಳಲ್ಲಿ ಶೋಧ ಕಾರ್ಯ ನಡೆದಿದೆ. ಶುಕ್ರವಾರ ಬೆಳಿಗ್ಗೆ 8ಕ್ಕೆ ಆರಂಭವಾದ ಶೋಧಕಾರ್ಯವು, ಸಂಜೆಯವರೆಗೂ ಮುಂದುವರಿಯಿತು. ಮನೀಷ್‌ ಮನೆಯಲ್ಲಿ 15 ತಾಸು ಶೋಧ ನಡೆಸಲಾಗಿದೆ. ಈ ವೇಳೆ ಹಲವು ಪ್ರಮುಖ ದಾಖಲೆಗಳು ಮತ್ತು ಎಲೆಕ್ಟ್ರಾನಿಕ್‌ ಉಪಕರಣಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವೂ ತನಿಖೆ ಆರಂಭಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ: 

ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಸಿಸೋಡಿಯಾ, ನಾವು ಸಿಬಿಐ ತಂಡವನ್ನು ಸ್ವಾಗತಿಸುತ್ತೇವೆ ಮತ್ತು ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದ್ದಾರೆ.

'ಶೀಘ್ರದಲ್ಲೇ ಸತ್ಯ ಹೊರಬರಲು ಸಿಬಿಐ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ಇದುವರೆಗೆ ನನ್ನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದರೂ ಯಾವುದೂ ಸಾಬೀತುಗೊಂಡಿಲ್ಲ. ಈ ತನಿಖೆಯಿಂದಲೂ ಏನೂ ಸಂಭವಿಸುವುದಿಲ್ಲ. ದೇಶದಲ್ಲಿ ಉತ್ತಮ ಶಿಕ್ಷಣಕ್ಕಾಗಿ ನನ್ನ ಕೆಲಸವನ್ನು ತಡೆಯಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.

ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ದೆಹಲಿಯ ಅತ್ಯುತ್ತಮ ಕೆಲಸದಿಂದಾಗಿ ಅವರೆಲ್ಲರೂ ಚಿಂತಿತರಾಗಿದ್ದಾರೆ. ನಮ್ಮ ದೇಶದಲ್ಲಿ ಉತ್ತಮ ಕೆಲಸ ಮಾಡುವವರಿಗೆ ಕಿರುಕುಳ ನೀಡುತ್ತಿರುವುದು ತುಂಬಾ ಬೇಸರದ ಸಂಗತಿ. ಅದಕ್ಕಾಗಿಯೇ ಭಾರತ ನಂ.1 ಆಗಿಲ್ಲ ಎಂದು ಹೇಳಿದ್ದಾರೆ.

ಎಫ್‌ಐಆರ್‌ನಲ್ಲಿ ಏನಿದೆ?
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಬುಧವಾರವೇ ಎಫ್‌ಐಆರ್ ದಾಖಲಿಸಿದೆ. ಎಫ್‌ಐಆರ್‌ನಲ್ಲಿನ ವಿವರಗಳ ಬಗ್ಗೆ ಅಧಿಕಾರಿಗಳು ಶುಕ್ರವಾರ ಮಾಹಿತಿ ನೀಡಿದ್ದಾರೆ. ಎಫ್‌ಐಆರ್‌ನಲ್ಲಿ ಮನೀಷ್‌ ಸಿಸೋಡಿಯಾ ಅವರೇ ಮೊದಲ ಆರೋಪಿ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಆದರೆ ಈ ಮಾಹಿತಿ ಖಚಿತವಾಗಿಲ್ಲ. ಎಫ್‌ಐಆರ್‌ನಲ್ಲಿನ ವಿವರಗಳು ಇಂತಿವೆ.

* ಮನೀಷ್ ಸಿಸೋಡಿಯಾ ಸೇರಿ ಒಟ್ಟು 13 ಜನರು ಮತ್ತು ಎರಡು ಕಂಪನಿಗಳನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಅಬಕಾರಿ ಆಯುಕ್ತ ಅರವ ಗೋಪಿ ಕೃಷ್ಣಾ, ಈ ಹಿಂದಿನ ಅಬಕಾರಿ ಉಪ ಆಯುಕ್ತ ಆನಂದ್ ಕುಮಾರ್ ತಿವಾರಿ, ಸಹಾಯಕ ಅಬಕಾರಿ ಆಯುಕ್ತ ಪಂಕಜ್ ಭಟ್ನಾಗರ್ ಮತ್ತು ಒಂಬತ್ತು ಉದ್ಯಮಿಗಳ ಹೆಸರು ಎಫ್‌ಐಆರ್‌ನಲ್ಲಿದೆ. ‘ಓನ್ಲಿ ಮಚ್‌ ಲೌಡರ್’ ಇವೆಂಟ್ ಮ್ಯಾನೇಜ್‌ಮೆಂಟ್‌ ಕಂಪನಿಯ ಸಿಇಒ ವಿಜಯ್ ನಾಯರ್ ಮತ್ತು ಕಂಪನಿಯ ಹಲವು ನೌಕರರು ಈ ಅಕ್ರಮದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು.

* ಮನೀಷ್ ಸಿಸೋಡಿಯಾ ಅವರ ಮೂವರು ಆಪ್ತರು, ಮದ್ಯ ಮಾರಾಟಗಾರರಿಂದ ಹಣ ಪಡೆಯುತ್ತಿದ್ದರು. ಆ ಹಣವನ್ನು ಬೇರೆಡೆಗೆ ಸಾಗಿಸುತ್ತಿದ್ದರು. ಮದ್ಯ ಮಾರಾಟಗಾರರಿಂದ ಪಡೆದ ಹಣವನ್ನು ಎರಡು ಕಂಪನಿಗಳ ಲೆಕ್ಕಪತ್ರದಲ್ಲಿ ಸೇರಿಸಲಾಗುತ್ತಿತ್ತು

* ಮನೀಷ್ ಅವರ ಆಪ್ತ ದಿನೇಶ್ ಅರೋರಾ, ಇಂಡೊಸ್ಪಿರಿಟ್ಸ್‌ ಮಾಲೀಕರಿಂದ ₹1 ಕೋಟಿ ಹಣ ಪಡೆದಿದ್ದರು

* ಮನೀಷ್ ಅವರ ಮತ್ತೊಬ್ಬ ಆಪ್ತ ಅರುಣ್ ರಾಮಚಂದ್ರ ಪಿಳ್ಳೈ ಮದ್ಯ ಉದ್ಯಮಿಗಳಿಂದ ಹಣ ಪಡೆದು, ಅದನ್ನು ಅಧಿಕಾರಿಗಳಿಗೆ ನೀಡುತ್ತಿದ್ದರು. ಅರ್ಜುನ್ ಪಾಂಡೆ ಎಂಬ ವ್ಯಕ್ತಿ ಒಮ್ಮೆ ಉದ್ಯಮಿಗಳಿಂದ ₹2 ಕೋಟಿಯಿಂದ ₹4 ಕೋಟಿ ಹಣ ಪಡೆದು, ವಿಜಯ್ ನಾಯರ್‌ಗೆ ನೀಡಿದ್ದರು ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು