ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಟ್ಸ್‌ಆ್ಯಪ್‌ ವಿರುದ್ಧ ತನಿಖೆಗೆ ಸಿಸಿಐ ಆದೇಶ

Last Updated 24 ಮಾರ್ಚ್ 2021, 16:24 IST
ಅಕ್ಷರ ಗಾತ್ರ

ನವದೆಹಲಿ: ವಾಟ್ಸ್‌ಆ್ಯಪ್‌ನ ಪರಿಷ್ಕೃತ ಖಾಸಗಿತನ ನೀತಿ ಹಾಗೂ ಸೇವಾ ನಿಯಮಗಳ ಬಗ್ಗೆ ತನಿಖೆ ನಡೆಸುವಂತೆ ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ತನ್ನ ತನಿಖಾ ವಿಭಾಗಕ್ಕೆ ಆದೇಶಿಸಿದೆ. ಈ ನೀತಿ ಹಾಗೂ ಸೇವಾ ನಿಯಮಗಳು ಸ್ಪರ್ಧಾ ಕಾನೂನುಗಳ ಉಲ್ಲಂಘನೆಯಂತೆ ಮೇಲ್ನೋಟಕ್ಕೆ ಕಾಣಿಸುತ್ತಿವೆ ಎಂದು ಸಿಸಿಐ ಹೇಳಿದೆ.

ಬಳಕೆದಾರರಿಗೆ ಇಷ್ಟವಿಲ್ಲದಿದ್ದರೂ ತಮ್ಮ ಕೆಲವು ಮಾಹಿತಿಯನ್ನು ಹಂಚಿಕೊಳ್ಳುವುದಕ್ಕೆ ವಾಟ್ಸ್‌ಆ್ಯಪ್‌ಗೆ ಒಪ್ಪಿಗೆ ನೀಡಬೇಕಿರುವುದರ ಪೂರ್ಣ ಪರಿಣಾಮಗಳ ಕುರಿತು ವಿಸ್ತೃತ ತನಿಖೆ ಆಗಬೇಕಿದೆ ಎಂದು ಸಿಸಿಐ ಹೇಳಿದೆ. 60 ದಿನಗಳಲ್ಲಿ ತನಿಖೆ ನಡೆಸಿ, ವರದಿ ಸಲ್ಲಿಸಬೇಕು ಎಂದು ಸೂಚಿಸಿದೆ.

ವಾಟ್ಸ್‌ಆ್ಯಪ್‌ನ ಪರಿಷ್ಕೃತ ನಿಯಮಗಳ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳನ್ನು ಗಮನಿಸಿ ಸಿಸಿಐ ಸ್ವಯಂಪ್ರೇರಿತವಾಗಿ ಈ ಕ್ರಮ ಕೈಗೊಂಡಿದೆ. ‘ವಾಟ್ಸ್‌ಆ್ಯಪ್‌ನ ಹೊಸ ನಿಯಮವನ್ನು ಬಳಕೆದಾರರು ಪೂರ್ಣವಾಗಿ ಒಪ್ಪಿಕೊಳ್ಳಲೇಬೇಕು. ವಾಟ್ಸ್‌ಆ್ಯಪ್‌ ತನ್ನ ಬಳಕೆದಾರರಿಗೆ ಸಂಬಂಧಿಸಿದ ಮಾಹಿತಿಯನ್ನು ಫೇಸ್‌ಬುಕ್‌ ಸಮೂಹದ ಇತರ ಕಂಪನಿಗಳ ಜೊತೆ ಹಂಚಿಕೊಳ್ಳುತ್ತದೆ ಎಂಬುದನ್ನೂ ಒಪ್ಪಿಕೊಳ್ಳಬೇಕು’ ಎಂಬ ಅಂಶವನ್ನು ಸಿಸಿಐ ಪರಿಗಣನೆಗೆ ತೆಗೆದುಕೊಂಡಿದೆ.

‘ವಾಟ್ಸ್‌ಆ್ಯಪ್‌ಗೆ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಇದೆ. ಒಪ್ಪಿಕೊಳ್ಳಿ, ಅದಾಗದಿದ್ದರೆ ಹೊರಗೆ ನಡೆಯಿರಿ ಎಂಬ ಧೋರಣೆಯುಳ್ಳ ನೀತಿಯ ಬಗ್ಗೆ ವಿವರವಾದ ತನಿಖೆ ಆಗಬೇಕಿದೆ’ ಎಂದು ಸಿಸಿಐ ಅಭಿಪ್ರಾಯ ವ್ಯಕ್ತಪಡಿಸಿದೆ.

‘ಫೇಸ್‌ಬುಕ್‌ ಜೊತೆ ನಾವು ಮಾಹಿತಿ ಹಂಚಿಕೊಳ್ಳುವ ಶಕ್ತಿಯನ್ನು ಹೊಸ ನೀತಿಯು ಹೆಚ್ಚಿಸುವುದಿಲ್ಲ. ಬದಲಿಗೆ, ನಾವು ಹೇಗೆ ಮಾಹಿತಿ ಸಂಗ್ರಹಿಸುತ್ತೇವೆ, ಅದನ್ನು ಹೇಗೆ ಬಳಸುತ್ತೇವೆ ಹಾಗೂ ಹೇಗೆ ಹಂಚಿಕೊಳ್ಳುತ್ತೇವೆ ಎಂಬ ವಿಚಾರಗಳು ಹೆಚ್ಚು ಪಾರದರ್ಶಕ ಆಗುತ್ತವೆ’ ಎಂದು ವಾಟ್ಸ್‌ಆ್ಯಪ್ ಹೇಳಿತ್ತು. ಇಂತಹ ಹೇಳಿಕೆಗಳ ಸತ್ಯಾಸತ್ಯತೆಯನ್ನು ಕೂಡ ತನಿಖೆಯ ಸಂದರ್ಭದಲ್ಲಿ ಪರಿಶೀಲನೆಗೆ ಒಳಪಡಿಸಲಾಗುವುದು ಎಂದು ಸಿಸಿಐ ಹೇಳಿದೆ.

ಬಳಕೆದಾರರ ಈ ಹಿಂದಿನ ಮಾಹಿತಿಗಳನ್ನು ಕೂಡ ಫೇಸ್‌ಬುಕ್‌ ಮಾಲೀಕತ್ವದ ಇತರ ಕಂಪನಿಗಳ ಜೊತೆ ಹಂಚಿಕೊಳ್ಳಲಾಗುತ್ತದೆಯೇ ಎಂಬುದು ಸ್ಪಷ್ಟವಿಲ್ಲ. ಫೇಸ್‌ಬುಕ್‌ನ ಇತರ ಆ್ಯಪ್‌ಗಳನ್ನು ಬಳಸದ, ವಾಟ್ಸ್‌ಆ್ಯಪ್ ಮಾತ್ರ ಬಳಸುವ ಗ್ರಾಹಕರ ಮಾಹಿತಿಗಳನ್ನೂ ಹಂಚಿಕೊಳ್ಳಲಾಗುತ್ತದೆಯೇ ಎಂಬುದು ಸ್ಪಷ್ಟವಾಗುತ್ತಿಲ್ಲ ಎಂದು ಆಯೋಗ ಹೇಳಿದೆ.

ಮಾಹಿತಿ ಹಂಚಿಕೆಗೆ ಸಂಬಂಧಿಸಿದಂತೆ ನಿರ್ದಿಷ್ಟ ನಿಯಮಗಳನ್ನು ಒಪ್ಪಿಕೊಳ್ಳದಿರುವ ಅಥವಾ ಅದಕ್ಕೆ ವಿರೋಧ ವ್ಯಕ್ತಪಡಿಸುವ ಆಯ್ಕೆಯನ್ನು ಬಳಕೆದಾರರಿಗೆ ನೀಡಿಲ್ಲ. ಇದು ವಾಟ್ಸ್‌ಆ್ಯಪ್‌ ಬಳಕೆದಾರರ ಪಾಲಿಗೆ ನ್ಯಾಯಸಮ್ಮತವಾಗಿರುವಂತೆ ಮೇಲ್ನೋಟಕ್ಕೆ ಕಾಣುತ್ತಿಲ್ಲ ಎಂದು ಆಯೋಗ ಅಭಿಪ್ರಾಯ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT