ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1963ರ ದುರ್ಘಟನೆ ನೆನಪಿಸಿದ ಕೂನೂರು ಹೆಲಿಕಾಪ್ಟರ್‌ ದುರಂತ: ಏನಾಗಿತ್ತು ಅಂದು?

Last Updated 9 ಡಿಸೆಂಬರ್ 2021, 2:34 IST
ಅಕ್ಷರ ಗಾತ್ರ

ನವದೆಹಲಿ: ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್‌) ಜನರಲ್‌ ಬಿಪಿನ್ ರಾವತ್‌, ಅವರ ಪತ್ನಿ ಮಧುಲಿಕಾ ಮತ್ತು ಇತರ 11 ಮಂದಿಯ ಸಾವಿಗೆ ಕಾರಣವಾದ ಎಂಐ–17ವಿ5 ಹೆಲಿಕಾಪ್ಟರ್‌ ಪತನವು 1963 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ನಡೆದಿದ್ದ ದುರ್ಘಟನೆಯೊಂದನ್ನು ನೆನಪಿಸುತ್ತಿದೆ.

58 ವರ್ಷಗಳ ಹಿಂದೆ ನಡೆದಿದ್ದ ಆ ದುರಂತದಲ್ಲಿ ಸೇನೆಯ ಆರು ಮಂದಿ ಅಧಿಕಾರಿಗಳು ಮರಣಹೊಂದಿದ್ದರು. ಅದನ್ನು ಭಾರತೀಯ ಮಿಲಿಟರಿ ಇತಿಹಾಸದಲ್ಲೇ ದೊಡ್ಡ ವೈಮಾನಿಕ ದುರಂತ ಎಂದು ಪರಿಗಣಿಸಲಾಗಿದೆ.

ಲೆಫ್ಟಿನೆಂಟ್ ಜನರಲ್ ದೌಲತ್ ಸಿಂಗ್, ಲೆಫ್ಟಿನೆಂಟ್ ಜನರಲ್ ವಿಕ್ರಮ್ ಸಿಂಗ್, ಏರ್ ವೈಸ್ ಮಾರ್ಷಲ್ ಇ. ಡಬ್ಲ್ಯೂ ಪಿಂಟೋ, ಮೇಜರ್ ಜನರಲ್ ಕೆಎನ್‌ಡಿ ನಾನಾವತಿ, ಬ್ರಿಗೇಡಿಯರ್ ಎಸ್‌ಆರ್ ಒಬೆರಾಯ್ ಮತ್ತು ಫ್ಲೈಟ್ ಲೆಫ್ಟಿನೆಂಟ್ ಎಸ್‌ಎಸ್ ಸೋಧಿ ಎಂಬುವವರು ನವೆಂಬರ್ 22, 1963 ರಂದು ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದರು.

ತಮಿಳುನಾಡಿನ ಕೂನೂರು ಎಂಬಲ್ಲಿನ ನೀಲಗಿರಿ ಅರಣ್ಯ ಪ್ರದೇಶದಲ್ಲಿ ಬುಧವಾರ ಸಂಭವಿಸಿದ ಅಪಘಾತವು ಮತ್ತೊಂದು ಅವಘಡವನ್ನೂ ನೆನಪಿಸುತ್ತಿದೆ. ಲಖನೌದ ಡೆವೊನ್ ಬಳಿ 1952ರಲ್ಲಿಯೂ ಇದೇ ರೀತಿಯ ಅಪಘಾತವೊಂದು ಸಂಭವಿಸಿತ್ತು. ಅಂದು ಹೆಲಿಕಾಪ್ಟರ್‌ನಲ್ಲಿ ಭಾರತೀಯ ಸೇನೆಯ ಉನ್ನತ ಮಟ್ಟದ ಅಧಿಕಾರಿಗಳು ಪ್ರಯಾಣಿಸುತ್ತಿದ್ದರು.

ಪಶ್ಚಿಮ ಕಮಾಂಡ್‌ನ ಆಗಿನ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಎಸ್‌.ಎಂ ಶ್ರೀನಾಗೇಶ್ ಮತ್ತು ಕ್ವಾರ್ಟರ್ ಮಾಸ್ಟರ್ ಜನರಲ್ ಆಗಿದ್ದ ಮೇಜರ್ ಜನರಲ್ ಕೆ.ಎಸ್ ತಿಮಯ್ಯ ಅವರು ಅಂದಿನ ಅಪಘಾತದಲ್ಲಿ ಪವಾಡ ಸದೃಶವಾಗಿ ಪಾರಾಗಿದ್ದರು. ಸಾವು ಗೆದ್ದು ಬಂದ ಈ ಇಬ್ಬರೂ ಅಧಿಕಾರಿಗಳು ಮುಂದೆ ಸೇನಾ ಮುಖ್ಯಸ್ಥರಾದರು.

ಹೆಲಿಕಾಪ್ಟರ್‌ನಲ್ಲಿದ್ದ ಮೇಜರ್ ಜನರಲ್ ಎಸ್‌ಪಿಪಿ ಥೋರಟ್, ಮೇಜರ್ ಜನರಲ್ ಮೊಹಿಂದರ್ ಸಿಂಗ್ ಚೋಪ್ರಾ, ಮೇಜರ್ ಜನರಲ್ ಸರದಾನಂದ್ ಸಿಂಗ್ ಮತ್ತು ಬ್ರಿಗೇಡಿಯರ್ ಅಜೈಬ್ ಸಿಂಗ್ ಕೂಡ ಬದುಕುಳಿದಿದ್ದರು. ಮೇಜರ್ ಜನರಲ್ ಥೋರಟ್ ಮುಂದೆ ಪಶ್ಚಿಮ ವಿಭಾಗದ ಸೇನಾ ಕಮಾಂಡರ್ ಕೂಡ ಆದರು.

ಯಾವುದೇ ಜೀವ ಹಾನಿಯಾಗದಂತೆ, ಪರಿಸ್ಥಿತಿಯನ್ನು ನಿಭಾಯಿಸಿ ಬಹುದೊಡ್ಡ ನಷ್ಟ ತಪ್ಪಿಸಿದ ಕಾರಣಕ್ಕಾಗಿ ಹೆಲಿಕಾಪ್ಟರ್‌ನ ಪೈಲಟ್, ಫ್ಲೈಟ್ ಲೆಫ್ಟಿನೆಂಟ್ ಸುಹಾಸ್ ಬಿಸ್ವಾಸ್ ಅವರಿಗೆ ಶೌರ್ಯ ಪ್ರಶಸ್ತಿಯಾದ ಅಶೋಕ ಚಕ್ರವನ್ನು ನೀಡಿ ಗೌರವಿಸಲಾಯಿತು.

2019 ರಲ್ಲಿ, ಪೂಂಚ್ ಸೆಕ್ಟರ್‌ನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಉತ್ತರ ಸೇನೆಯ ಮಾಜಿ ಕಮಾಂಡರ್ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಮತ್ತು ಇತರ ಎಂಟು ಸಶಸ್ತ್ರ ಪಡೆಗಳ ಸಿಬ್ಬಂದಿ ಗಾಯಗೊಂಡಿದ್ದರು. .

ರಾವತ್ ಅವರು ಕೂಡ 2015ರಲ್ಲಿ ಲೆಫ್ಟಿನೆಂಟ್ ಜನರಲ್ ಆಗಿದ್ದಾಗ ಹೆಲಿಕಾಪ್ಟರ್ ಅಪಘಾತವೊಂದರಲ್ಲಿ ಬದುಕುಳಿದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT