ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಬಿಸಿ ಮೀಸಲು: ‘ಸುಪ್ರೀಂ’ಗೆ ಮರು ಪರಿಶೀಲನೆ ಅರ್ಜಿ ಸಲ್ಲಿಸಲು ಚಿಂತನೆ

Last Updated 21 ಡಿಸೆಂಬರ್ 2021, 19:45 IST
ಅಕ್ಷರ ಗಾತ್ರ

ನವದೆಹಲಿ: ಮಹಾನಗರಪಾಲಿಕೆಗಳೂ ಸೇರಿ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ‘ರಾಜಕೀಯ ಮೀಸಲಾತಿ’ಯನ್ನು ರದ್ದುಪಡಿಸಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿಗೆ ಮರುಪರಿಶೀಲನಾ ಅರ್ಜಿ ಸಲ್ಲಿಸುವ ಚಿಂತನೆ ನಡೆದಿದೆ ಎಂದು ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವಾಲಯ ಹೇಳಿದೆ.

ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಶೇ 27ರಷ್ಟು ಮೀಸಲಾತಿ ನೀಡಲು ಮಹಾರಾಷ್ಟ್ರ ಮತ್ತು ಮಧ್ಯ ಪ್ರದೇಶ ಸರ್ಕಾರ ಕೈಗೊಂಡ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ ರದ್ದುಪಡಿಸಿದೆ. ಸ್ಥಳೀಯಾಡಳಿತ ಸಂಸ್ಥೆಗಳ ಮೀಸಲಾತಿಗೆ ಸಂವಿಧಾನದಲ್ಲಿ ನಿಗದಿ ಮಾಡಿರುವ ಮಾನದಂಡವನ್ನೇ ಅನುಸರಿಸಬೇಕು ಎಂದು ಸಲಹೆ ನೀಡಲಾಗಿದೆ ಎಂದು ಸಚಿವಾಲಯವು ತಿಳಿಸಿದೆ.

ಸುಪ್ರೀಂ ಕೋರ್ಟ್‌ ಕೆಲವು ಮಾನದಂಡಗಳನ್ನು ಮುಂದಿಟ್ಟಿದೆ. ರಾಜ್ಯಗಳು ಅವುಗಳನ್ನು ಅಳವಡಿಸಿಕೊಳ್ಳುವವರೆಗೆ ಒಬಿಸಿ ಸಮುದಾಯಗಳಿಗೆ ಮೀಸಲಾತಿ ನೀಡಲು ಅವಕಾಶ ಕೊಡಬೇಕು ಎಂದು ಸುಪ್ರೀಂ ಕೋರ್ಟ್‌ ಅನ್ನು ಕೋರಲಾಗುವುದು ಎಂದು ಸಚಿವಾಲಯ ಹೇಳಿದೆ.

ಮೂರು ಅಂಶಗಳನ್ನು ಪರಿಗಣಿಸಿ ಮೀಸಲಾತಿ ನಿಗದಿ ಮಾಡಲು ಸುಪ್ರೀಂ ಕೋರ್ಟ್‌ ಸೂಚನೆ ನೀಡಿದೆ. ರಾಜ್ಯದೊಳಗಿನ ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹಿಂದುಳಿದಿರುವಿಕೆಯ ಸ್ವರೂಪ ಮತ್ತು ಅದರ ಪರಿಣಾಮ ಅಧ್ಯಯನ ಮಾಡಲು ಪ್ರತ್ಯೇಕ ಆಯೋಗ ರಚಿಸಬೇಕು; ಆಯೋಗದ ಶಿಫಾರಸಿನಂತೆ ಅಗತ್ಯ ಇರುವ ಮೀಸಲಾತಿಯ ಪ್ರಮಾಣವನ್ನು ನಿಗದಿ ಮಾಡಬೇಕು; ಪರಿಶಿಷ್ಟ ಜಾತಿ, ಪಂಗಡ ಮತ್ತು ಒಬಿಸಿ ಮೀಸಲಾತಿಯು ಶೇ 50ರಷ್ಟನ್ನು ಮೀರಬಾರದು ಎಂಬುದು ಕೋರ್ಟ್‌ ನಿಗದಿಪಡಿಸಿರುವ ಮಾನದಂಡಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT