ಸೋಮವಾರ, ಸೆಪ್ಟೆಂಬರ್ 27, 2021
24 °C
ಮುಂದಿನ ಯೋಜನೆಗಳ ಮಾಹಿತಿ ನೀಡಲು ಕೇಂದ್ರಕ್ಕೆ ಎರಡು ವಾರಗಳ ಕಾಲಾವಕಾಶ

ಸಶಸ್ತ್ರ ಪಡೆಗೆ ಮಹಿಳೆಯರನ್ನು ಸೇರಿಸಿಕೊಳ್ಳುತ್ತೇವೆ: ಸುಪ್ರೀಂಗೆ ಕೇಂದ್ರ

ಡೆಕ್ಕನ್ ಹೆರಾಲ್ಡ್ Updated:

ಅಕ್ಷರ ಗಾತ್ರ : | |

PTI Photo

ನವದೆಹಲಿ: ರಾಷ್ಟ್ರೀಯ ರಕ್ಷಣಾ ಅಕಾಡೆಮಿ(ಎನ್‌ಡಿಎ)ಗೆ ಮಹಿಳೆಯರನ್ನು ಸೇರಿಸಿಕೊಳ್ಳಲು ನಿರ್ಧರಿಸಿರುವುದಾಗಿ ಕೇಂದ್ರ ಸರ್ಕಾರ ಬುಧವಾರ ಸುಪ್ರೀಂ ಕೋರ್ಟ್‌ಗೆ ಹೇಳಿದೆ. ಈ ಮೂಲಕ ಭಾರತೀಯ ಸಶಸ್ತ್ರ ಪಡೆ ಸೇರಬೇಕು ಎಂಬ ಮಹಿಳೆಯರ ಬಹು ದಿನಗಳ ಆಶಯಕ್ಕೆ ಗೆಲುವು ಸಿಕ್ಕಿದೆ.

ಮಹಿಳೆಯರನ್ನು ಸಶಸ್ತ್ರ ಪಡೆಗೆ ಸೇರಿಸಿಕೊಳ್ಳುವ ವಿಚಾರವಾಗಿ ಕೇಂದ್ರ ಸರ್ಕಾರದ ತೆಗೆದುಕೊಳ್ಳಲಿರುವ ಭವಿಷ್ಯದ ಯೋಜನೆಗಳ ಕುರಿತು ಮಾಹಿತಿ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿದ್ದು, ಎರಡು ವಾರಗಳ ಕಾಲಾವಕಾಶವನ್ನು ನೀಡಿದೆ.

ಸೇನೆಯಲ್ಲಿ ಮಹಿಳೆಯರಿಗೆ ಅವಕಾಶ ನೀಡಬೇಕು ಎಂಬ ವಾದವನ್ನು ಎತ್ತಿ ಹಿಡಿದ ಸುಪ್ರೀಂ, 'ಮಹಿಳೆಯರ ಕುರಿತಾಗಿ ಇಂತಹ ಮನೋಭಾವವನ್ನು ಬದಲಿಸಿಕೊಳ್ಳಬೇಕು. ಇಂತಹ ವಿಚಾರಗಳಿಗೆಲ್ಲ ನ್ಯಾಯಾಲಯವು ಆದೇಶ ನೀಡುವ ವರೆಗೆ ಕಾಯಬಾರದು' ಎಂದಿದೆ.

ನ್ಯಾಯಮೂರ್ತಿ ಸಂಜಯ್‌ ಕಿಶನ್‌ ಕೌಲ್‌ ನೇತೃತ್ವದ ಪೀಠ ಕೇಂದ್ರ ಸರ್ಕಾರಪರ ಹೆಚ್ಚುವರಿ ಸಾಲಿಸಿಟರ್‌ ಜೆನೆರಲ್‌ ಐಶ್ವರ್ಯ ಭಾಟಿ ಅವರ 'ಈ ನೀತಿಯು ಕೇಂದ್ರ ಸರ್ಕಾರದ ನಿರ್ಧಾರವಾಗಿದೆ' ಎಂಬ ವಾದವನ್ನು ತಿರಸ್ಕರಿಸಿತು. 'ಈ ನೀತಿಯು ಲಿಂಗತಾರತಮ್ಯವನ್ನು ಒಳಗೊಂಡಿದೆ. ಈ ಕುರಿತು ಕೇಂದ್ರವು ರಚನಾತ್ಮಕ ಅವಲೋಕನ ಮಾಡಿಕೊಳ್ಳಬೇಕು' ಎಂದು ತಿಳಿಸಿದೆ.

ಕಳೆದ ಆಗಸ್ಟ್‌ನಲ್ಲಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಪ್ರವೇಶ ಪರೀಕ್ಷೆಗೆ ಮಹಿಳೆಯರೂ ಹಾಜರಾಗಲು ಅನುಮತಿ ನೀಡುವಂತೆ ಸುಪ್ರೀಂ ಕೋರ್ಟ್‌ ಮಧ್ಯಂತರ ಆದೇಶ ನೀಡಿತ್ತು. ನ್ಯಾಯಮೂರ್ತಿಗಳಾದ ಸಂಜಯ್‌ ಕಿಶನ್‌ ಕೌಲ್‌ ಮತ್ತು ಹೃಷಿಕೇಶ್‌ ರಾಯ್‌ ಅವರಿದ್ದ ನ್ಯಾಯಪೀಠ ಈ ಆದೇಶ ಹೊರಡಿಸಿತ್ತು.

ಎನ್‌ಡಿಎ ಮತ್ತು ನೌಕಾದಳ ಅಕಾಡೆಮಿ ಪರೀಕ್ಷೆಗಳಿಗೆ ಹಾಜರಾಗಲು ಮಹಿಳಾ ಅಭ್ಯರ್ಥಿಗಳಿಗೆ ಅನುಮತಿ ನೀಡದ ಕೇಂದ್ರದ ನೀತಿಯನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು.

ಸಹ ಶಿಕ್ಷಣವು ಏಕೆ ಸಮಸ್ಯೆಯಾಗಲಿದೆ ಎಂದು ಪ್ರಶ್ನಿಸಿರುವ ನ್ಯಾಯಾಲಯ, ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ. ಇದು ಕೇವಲ ಲಿಂಗ ತತ್ವದ ಪ್ರಕರಣವಲ್ಲ. ಲಿಂಗತಾರತಮ್ಯವನ್ನು ಒಳಗೊಂಡಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಸೇನೆಯಲ್ಲಿ ಮಹಿಳೆಯರಿಗೆ ಅವಕಾಶ ಇದೆ ಎಂದಾದರೆ, ಎನ್‌ಡಿಎ ಪ್ರವೇಶಕ್ಕೆ ಏಕೆ ತಡೆಹಿಡಿಯಲಾಗುತ್ತಿದೆ ಎಂದಿರುವ ನ್ಯಾಯಾಲಯ, ಸರ್ಕಾರ ಪ್ರತಿ ಬಾರಿ ನ್ಯಾಯಾಂಗದ ಮಧ್ಯಸ್ಥಿಕೆಯನ್ನು ಬಯಸಬಾರದು ಎಂದು ತಿಳಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು