ಮುದ್ರಾಂಕ ಶುಲ್ಕ: ಕರ್ನಾಟಕ, ಮಹಾರಾಷ್ಟ್ರ ಮಾದರಿಗೆ ಕೇಂದ್ರ ಮೆಚ್ಚುಗೆ

ನವದೆಹಲಿ: ಗೃಹೋದ್ಯಮವನ್ನು ಉತ್ತೇಜಿಸುವ ಹಾಗೂ ವಸತಿ ಮಾರುಕಟ್ಟೆಗೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ಆಸ್ತಿಗಳ ನೋಂದಣಿ ಮೇಲಿನ ಮುದ್ರಾಂಕ ಶುಲ್ಕ (ಸ್ಟ್ಯಾಂಪ್ ಡ್ಯೂಟಿ) ಕಡಿಮೆ ಮಾಡುವಂತೆ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ಮನವಿ ಮಾಡಲು ನಿರ್ಧರಿಸಿದೆ.
ಮನೆಗಳ ಮಾರಾಟ ಪ್ರಮಾಣ ಹೆಚ್ಚಿಸಲು ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳು ಸ್ಥಿರಾಸ್ತಿ ವಹಿವಾಟಿನ ಮೇಲಿನ ಮುದ್ರಾಂಕ ಶುಲ್ಕವನ್ನು ಈಗಾಗಲೇ ಕಡಿತಗೊಳಿಸಿರುವುದು ಉತ್ತಮ ನಡೆಯಾಗಿದೆ. ಆರಂಭಿಕವಾಗಿ ಅಲ್ಲಿ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಕೇಂದ್ರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
ಉಭಯ ರಾಜ್ಯ ಸರ್ಕಾರಗಳ ಈ ನಿರ್ಧಾರದಿಂದ ವಹಿವಾಟು ಇಲ್ಲದೆ ನಷ್ಟ ಅನುಭವಿಸುತ್ತಿರುವ ಬಿಲ್ಡರ್‌ಗಳಿಗೆ ನೆರವಾಗಿದ್ದು, ಇದೇ ಮಾದರಿಯನ್ನು ಅನುಸರಿಸುವಂತೆ ಇತರ ರಾಜ್ಯಗಳಿಗೂ ಪತ್ರ ಬರೆಯಲಾಗುವುದು ಎಂದು ಅವರು ಹೇಳಿದ್ದಾರೆ.
ಪ್ರಸಕ್ತ ಸೆಪ್ಟೆಂಬರ್ ವೇಳೆಗೆ ಮಹಾರಾಷ್ಟ್ರದಲ್ಲಿ ಮಾರಾಟ ನೋಂದಣಿಯು ಕೋವಿಡ್ ಪೂರ್ವದ ಅವಧಿಗಿಂತಲೂ ಉತ್ತಮ ಪ್ರಮಾಣದಲ್ಲಿದೆ. ಪ್ರಸಕ್ತ ವರ್ಷ ಈಗಾಗಲೇ ಅಲ್ಲಿ 1.19 ಲಕ್ಷಕ್ಕೂ ಅಧಿಕ ಆಸ್ತಿ ನೋಂದಣಿ ದಾಖಲಾಗಿದೆ ಎಂದು ಅವರು ವಿವರಿಸಿದ್ದಾರೆ.
ವಲಯವಾರು ದರ ಮತ್ತು ವಹಿವಾಟು ಮೌಲ್ಯದ ನಡುವಿನ ವ್ಯತ್ಯಾಸವನ್ನು ಶೇಕಡ 20ಕ್ಕೆ ಕಡಿತಗೊಳಿಸುವ ನಿಟ್ಟಿನಲ್ಲಿ ಹಣಕಾಸು ಸಚಿವಾಲಯವು ಇತ್ತೀಚೆಗಷ್ಟೇ ಆದಾಯ ತೆರಿಗೆ ನಿಯಮಗಳನ್ನು ಸಡಿಲಗೊಳಿಸಿದೆ ಎಂದು ಅವರು ತಿಳಿಸಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಪರಿಸರ ಅನುಮತಿ ದೊರೆಯುವಲ್ಲಿ ವಿಳಂಬವಾಗುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿರುವ ಸಚಿವರು, ಈ ಸಮಸ್ಯೆ ಪರಿಹರಿಸುವಂತೆ ಕೋರಿ ಕೇಂದ್ರದ ಪರಿಸರ ಖಾತೆ ಸಚಿವರಿಗೆ ಪತ್ರ ಬರೆಯುವುದಾಗಿ ಭರವಸೆ ನೀಡಿದ್ದಾರೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.