ಬುಧವಾರ, ಸೆಪ್ಟೆಂಬರ್ 22, 2021
23 °C

ಪೊಲೀಸರ ಬಗ್ಗೆ ಜನರಿಗಿರುವ ನಕಾರಾತ್ಮಕ ಭಾವನೆ ಬದಲಾಯಿಸಿ: ಪ್ರಧಾನಿ ಮೋದಿ

‍ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ದೇಶ ಮೊದಲು, ಸದಾ ಮೊದಲು ಎನ್ನುವುದು ಪ್ರತಿಯೊಂದು ಕಾರ್ಯಗಳಲ್ಲೂ ಪ್ರತಿಬಿಂಬಿಸಬೇಕು. ಪೊಲೀಸ್‌ ಪಡೆಯ ಬಗ್ಗೆ ಜನರಿಗಿರುವ ನಕಾರಾತ್ಮಕ ಭಾವನೆ ಬದಲಿಸಲು ಶ್ರಮಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಐಪಿಎಸ್‌ ಪ್ರೊಬೇಷನ್‌ ಅಧಿಕಾರಿಗಳಿಗೆ ಸಲಹೆ ನೀಡಿದರು.

ಸರ್ದಾರ್ ವಲ್ಲಭಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯ ಐಪಿಎಸ್‌ ಪ್ರೊಬೇಷನ್‌ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಅವರು,‘ದೇಶದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಂದು ನಿರ್ಧಾರ ಮತ್ತು ಕೆಲಸಗಳನ್ನು ಕೈಗೊಳ್ಳಿ’ ಎಂದು ಕಿವಿಮಾತು ಹೇಳಿದರು.

‘ಜನರಲ್ಲಿ ಪೊಲೀಸರ ಬಗೆಗಿರುವ ನಕಾರಾತ್ಮಕ ಗ್ರಹಿಕೆಯನ್ನು ಬದಲಾಯಿಸುವುದು ದೊಡ್ಡ ಸವಾಲು. ಆದರೆ, ಸಾಂಕ್ರಾಮಿಕದ ಸಂದರ್ಭದಲ್ಲಿ ಸಂಕಷ್ಟದಲ್ಲಿ ಸಿಲುಕಿರುವವರಿಗೆ ಪೊಲೀಸ್‌ ಸಿಬ್ಬಂದಿ ಸಹಾಯ ಮಾಡುತ್ತಿರುವುದನ್ನು ಜನರು ಗಮನಿಸಿದ್ದರು. ಆಗ ಪೊಲೀಸರ ಬಗೆಗಿನ ಜನರ ಭಾವನೆ ಸ್ವಲ್ಪ ಮಟ್ಟಿಗೆ ಬದಲಾಗಿತ್ತು. ಆದರೆ ಈಗ ಮತ್ತೆ ಜನರಲ್ಲಿ ನಕಾರಾತ್ಮಕ ಗ್ರಹಿಕೆ ಮನೆ ಮಾಡಿದೆ’ ಎಂದು ಅವರು ತಿಳಿಸಿದರು.

‘ದೇಶದ ಭದ್ರತೆ ಮತ್ತು ಉಗ್ರರ ವಿರುದ್ಧದ ಹೋರಾಟದ ವೇಳೆ ನಮ್ಮ ಪೊಲೀಸ್‌ ಅಧಿಕಾರಿಗಳು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಅವರು ಕೂಡ ಜನರಿಗಾಗಿ ಹಲವು ದಿನಗಳ ಕಾಲ ಮನೆಗೆ ಹೋಗದೆ ಕಾರ್ಯನಿರ್ವಹಿಸಿದ್ದಾರೆ.ಆದರೂ ಜನರಲ್ಲಿ ಅವರ ಬಗೆಗಿರುವ ಮನೋಭಾವನೆಯೇ ಬೇರೆ. ಹಾಗಾಗಿ ಪೊಲೀಸ್‌ ಪಡೆಗೆ ಸೇರ್ಪಡೆಯಾಗುವ ಹೊಸ ‍ಪೀಳಿಗೆಯು ಜನರ ಈ ಗ್ರಹಿಕೆಯನ್ನು ಬದಲಾಯಿಸಬೇಕು’ ಎಂದು ಅವರು ಅಭಿಪ್ರಾಯಪಟ್ಟರು.

ಈ ಬಳಿಕ ಮೋದಿ ಅವರು ಪ್ರೊಬೇಷನರಿಗಳೊಂದಿಗೆ ಸಂವಾದ ನಡೆಸಿದರು. ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು