ಬುಧವಾರ, ಜನವರಿ 27, 2021
16 °C
ಡ್ರೋನ್‌ ನೆರವಿನಿಂದ ಪತ್ತೆ ಹಚ್ಚಿದ್ದಕ್ಕೆ ಪ್ರಶಂಸೆ

ಮೀನುಗಾರರ ಪತ್ತೆ ಹಚ್ಚಿದ ಬೆಂಗಳೂರಿನ ವಿದ್ಯಾರ್ಥಿ ದೇವಾಂಗ್‌ ಈಗ ಕೇರಳದಲ್ಲಿ ಹೀರೊ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿರುವನಂತ‍ಪುರ: ಕೇರಳದ ತ್ರಿಶ್ಯೂರ್‌ ಜಿಲ್ಲೆಯ ತಳಿಕುಳಂನ ದೇವಾಂಗ್‌ ಸುಬಿನ್‌ ಈಗ ರಾಜ್ಯದ ಜನರ ದೃಷ್ಟಿಯಲ್ಲಿ ಹೀರೊ ಆಗಿದ್ದಾರೆ!

ಅರಬ್ಬಿ ಸಮುದ್ರದಲ್ಲಿ ನಾಪತ್ತೆಯಾಗಿದ್ದ ನಾಲ್ವರು ಮೀನುಗಾರರನ್ನು ಡ್ರೋನ್‌ ನೆರವಿನಿಂದ ಪತ್ತೆ ಹಚ್ಚಿ, ಅವರನ್ನು ರಕ್ಷಿಸಲು ಸಹಾಯ ಮಾಡಿದ್ದಕ್ಕಾಗಿ ದೇವಾಂಗ್‌ ಅವರು ಈ ಅಭಿನಂದನೆ, ಅಭಿಮಾನಕ್ಕೆ ಪಾತ್ರರಾಗಿದ್ದಾರೆ.

ಅವರು ಬೆಂಗಳೂರಿನ ಕೆಂಗೇರಿಯಲ್ಲಿರುವ ಕ್ರೈಸ್ಟ್‌ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಕಂಪ್ಯೂಟರ್‌ ವಿಜ್ಞಾನ ಪದವಿ ಕೋರ್ಸ್‌ನ ಎರಡನೇ ವರ್ಷದ ವಿದ್ಯಾರ್ಥಿ.

ಛಾಯಾಗ್ರಹಣ ಅವರ ನೆಚ್ಚಿನ ಹವ್ಯಾಸ. ಡ್ರೋನ್‌ ಬಳಸಿ ಚಿತ್ರಗಳನ್ನು ಸೆರೆ ಹಿಡಿಯುವುದೆಂದರೆ ಅವರಿಗೆ ಅಚ್ಚುಮೆಚ್ಚು. ಸಮುದ್ರ ತೀರಕ್ಕೆ ಸನಿಹದ ತಮ್ಮ ಊರು ತಳಿಕುಳಂನ ಮನೆಯಿಂದಲೇ ಡ್ರೋನ್‌ ಕ್ಯಾಮೆರಾ ಬಳಸಿ ಪ್ರಕೃತಿಯ ಚಿತ್ರ ಹಿಡಿಯುತ್ತಾರೆ.

ನಾಲ್ಕು ಜನ ಮೀನುಗಾರರು ಆಳಸಮುದ್ರದಲ್ಲಿ ಮೀನು ಹಿಡಿಯಲು ಹೋದಾಗ ನಾಪತ್ತೆಯಾದ ಬಗ್ಗೆ ತಂದೆ ಸುಬಿನ್‌ ಅವರು ದೇವಾಂಗ್‌ಗೆ ಮಂಗಳವಾರ ಬೆಳಿಗ್ಗೆ ತಿಳಿಸಿದರು. ಪ್ರತಿಕೂಲ ಹವಾಮಾನ ಕಾರಣದಿಂದಾಗಿಯೇ ದೋಣಿ ಮುಗುಚಿ ಈ ಅವಘಡ ಸಂಭವಿಸಿರುವುದಾಗಿ ವಿವರಿಸಿದರು.

ತಕ್ಷಣ, ಡ್ರೋನ್‌ ಕ್ಯಾಮೆರಾ ಸಮೇತ ಕಡಲ ತೀರಕ್ಕೆ ತೆರಳಿದ ದೇವಾಂಗ್, ನಾಪತ್ತೆಯಾಗಿದ್ದ ಮೀನುಗಾರರನ್ನು ಪತ್ತೆ ಮಾಡುವ ಕಾರ್ಯ ಆರಂಭಿಸಿದರು.

‘ಪ್ರತಿಕೂಲ ಹವಾಮಾನ, ಜೋರಾಗಿ ಗಾಳಿ ಬೀಸುತ್ತಿದ್ದ ಕಾರಣ ಡ್ರೋನ್‌ ನಿಯಂತ್ರಣ ಸಹ ಕಷ್ಟವಾಗಿತ್ತು. 10 ನಾಟಿಕಲ್‌ ಮೈಲಿಗಿಂತ ಹೆಚ್ಚು ದೂರ ಕ್ರಮಿಸಿದ ನಂತರ ಡ್ರೋನ್‌ ಕ್ಯಾಮೆರಾ ಮೀನುಗಾರರನ್ನು ಪತ್ತೆ ಹಚ್ಚಿತು’ ಎಂದು ದೇವಾಂಗ್‌ ‘ಪ್ರಜಾವಾಣಿ’ಗೆ ವಿವರಿಸಿದರು.

ರಾಜ್ಯ ಕೃಷಿ ಸಚಿವ ವಿ.ಎಸ್‌.ಸುನೀಲ್‌ಕುಮಾರ್ ಅವರು ದೇವಾಂಗ್‌ ಮಾಡಿದ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ, ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಮೀನುಗಾರರು ಹಾಗೂ ಗ್ರಾಮಸ್ಥರಲ್ಲದೇ, ಇಡೀ ರಾಜ್ಯದ ಜನರೇ ಈಗ ದೇವಾಂಗ್‌ ಅವರನ್ನು ಕೊಂಡಾಡುತ್ತಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು