ನವದೆಹಲಿ: 10ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳನ್ನು ದಕ್ಷಿಣ ದೆಹಲಿಯ ವಸಂತ ವಿಹಾರ ಪ್ರದೇಶದಿಂದ ಅಪಹರಿಸಿ ಮಹಿಪಾಲ್‌ಪುರ ಎಂಬಲ್ಲಿ ಕಾರಿನಲ್ಲಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನೈಋತ್ಯ ದೆಹಲಿಯ ಮಹಿಪಾಲ್‌ಪುರದಲ್ಲಿ ನಿಲ್ಲಿಸಲಾಗಿದ್ದ ಕಾರೊಂದರಲ್ಲಿ ಜುಲೈ 6ರಂದು ಬಾಲಕಿ ಮೇಲೆ ಅತ್ಯಾಚಾರ ಎಸಗಲಾಗಿದೆ. ಸಂತ್ರಸ್ತೆಯ ಸ್ನೇಹಿತ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಗಳು 23, 25 ಹಾಗೂ 35 ವರ್ಷ ವಯಸ್ಸಿನವರಾಗಿದ್ದಾರೆ.
ಜುಲೈ 8ರಂದು ಸಂಜೆ 4 ಗಂಟೆಗೆ ವಸಂತ ವಿಹಾರ ಪ್ರದೇಶದ ಆಸ್ಪತ್ರೆಯಿಂದ ದೂರವಾಣಿ ಕರೆ ಬಂದಿತ್ತು. ಒಬ್ಬ ವ್ಯಕ್ತಿ ತನ್ನ ಮಗಳನ್ನು ಕರೆದುಕೊಂಡು ಬಂದಿದ್ದು, ಮೂವರು ಆಕೆಗೆ ಕಿರುಕುಳ ನೀಡಿದ್ದಾರೆ ಎಂದು ದೂರಿರುವುದಾಗಿ ಆಸ್ಪತ್ರೆಯವರು ಮಾಹಿತಿ ನೀಡಿದ್ದರು ಎಂದು ಡಿಸಿಪಿ (ನೈಋತ್ಯ) ಮನೋಜ್ ಸಿ. ತಿಳಿಸಿದ್ದಾರೆ.
ಬಳಿಕ ಮಹಿಳಾ ಕೌನ್ಸಿಲರ್ ಅವರು ಬಾಲಕಿಯನ್ನು ಮಾತನಾಡಿಸಿದ್ದಾರೆ. ಈ ವೇಳೆ, ಪರಿಚಯದ ಇಬ್ಬರು ವ್ಯಕ್ತಿಗಳು ಜುಲೈ 6ರಂದು ವಸಂತ ವಿಹಾರ ಮಾರುಕಟ್ಟೆ ಬಳಿ ರಾತ್ರಿ 8.30ಕ್ಕೆ ಮಾತನಾಡಿಸಿ ಕಾರಿನಲ್ಲಿ ಕರೆದುಕೊಂಡು ಹೋಗುವುದಾಗಿ ಹೇಳಿದ್ದಾರೆ. ಅವರಿಬ್ಬರು ಮಾತ್ರವಲ್ಲದೆ ಕಾರಿನಲ್ಲಿ ಇನ್ನೊಬ್ಬ ವ್ಯಕ್ತಿಯೂ ಇದ್ದರು ಎಂದು ಬಾಲಕಿ ತಿಳಿಸಿದ್ದಾಳೆ.
‘ಬಳಿಕ ಬಾಲಕಿಯನ್ನು ಕರೆದುಕೊಂಡು ಮಹಿಪಾಲ್‌ಪುರಕ್ಕೆ ತೆರಳಿದ ಅವರು ಮದ್ಯ ಖರೀದಿಸಿ ಸೇವಿಸಿದ್ದಾರೆ. ಬಳಿಕ ಏಕಾಂತ ಪ್ರದೇಶಕ್ಕೆ ಬಾಲಕಿಯನ್ನು ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಬಾಲಕಿಯ ಸ್ನೇಹಿತ ಆಕೆಗೆ ಮುತ್ತಿಕ್ಕಿದ್ದಾನೆ. ಇನ್ನಿಬ್ಬರು ಅತ್ಯಾಚಾರ ಎಸಗಿದ್ದಾರೆ’ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳದಿಂದ ಮನೆಗೆ ಮರಳುವ ಮೊದಲು ಅವರೆಲ್ಲ ಗುರುಗ್ರಾಮಕ್ಕೆ ತೆರಳಿದ್ದರು ಎಂದೂ ಪೊಲೀಸರು ಹೇಳಿದ್ದಾರೆ.
ಆದಾಗ್ಯೂ, ಬಾಲಕಿಯು ತನ್ನ ಸ್ನೇಹಿತನ ಪರ ಹೇಳಿಕೆ ನೀಡಿದ್ದಾಳೆ. ಆತ ಏನೂ ಅಪರಾಧ ಕೃತ್ಯ ಎಸಗಿಲ್ಲ, ತನ್ನನ್ನು ರಕ್ಷಿಸಲು ಪ್ರಯತ್ನಿಸಿದ್ದ ಎಂದು ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.