ಮಂಗಳವಾರ, ಮೇ 17, 2022
24 °C
ಪ್ರಧಾನಿ ಮೌನದಿಂದ ಗಾಬರಿ ಹುಟ್ಟಿದೆ ಎಂದ ನಾಯಕರು

ಕೋಮು ಗಲಭೆ: 13 ಪಕ್ಷಗಳಿಂದ ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಇತ್ತೀಚಿನ ದ್ವೇಷ ಭಾಷಣ ಮತ್ತು ಕೋಮು ಗಲಭೆ ಪ್ರಕರಣಗಳ ಕುರಿತು ತೀವ್ರವಾಗಿ ಕಳವಳ ವ್ಯಕ್ತಪಡಿಸಿರುವ 13 ವಿರೋಧ ಪಕ್ಷಗಳು ಜಂಟಿ ಹೇಳಿಕೆ ಹೊರಡಿಸಿವೆ. ಶಾಂತಿ ಮತ್ತು ಸೌಹಾರ್ದವನ್ನು ಕಾಪಾಡುವಂತೆ ಜನರಿಗೆ ಮನವಿ ಮಾಡಿವೆ.

ಆಹಾರ, ವಸ್ತ್ರ, ನಂಬಿಕೆ, ಹಬ್ಬ ಮತ್ತು ಭಾಷೆ ಮುಂತಾದ ವಿಚಾರಗಳನ್ನು ಸಮಾಜವನ್ನು ದ್ರುವೀಕರಿಸಲು ಸರ್ಕಾರಗಳು ಬಳಸುತ್ತಿರುವುದರ ಕುರಿತು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಮತ್ತು ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಕೋಮು ಗಲಭೆ ಹುಟ್ಟುಹಾಕುವವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಕೂಡಾ ಅವರು ಒತ್ತಾಯಿಸಿದ್ದಾರೆ.

‘ಧರ್ಮಾಂಧತೆ ಹುಟ್ಟುಹಾಕುತ್ತಿರುವವರು ಮತ್ತು ತಮ್ಮ ಮಾತು ಮತ್ತು ನಡವಳಿಕೆಗಳಿಂದ ನಮ್ಮ ಸಮಾಜದಲ್ಲಿ ಕೋಮು ಪ್ರಚೋದನೆ ಮಾಡುತ್ತಿರುವವರ ವಿರುದ್ಧ ಪ್ರಧಾನಿ ಮೌನ ಕಾಯ್ದುಕೊಂಡಿರುವುದು ನಮ್ಮನ್ನು ಗಾಬರಿಗೊಳಿಸಿದೆ. ದ್ವೇಷ ಬಿತ್ತುತ್ತಿರುವ ಸಂಸ್ಥೆಗಳಿಗೆ ಸರ್ಕಾರವೇ ಆಶ್ರಯ ನೀಡುತ್ತಿದೆ ಎಂಬುದಕ್ಕೆ ಈ ಮೌನವೇ ಸಾಕ್ಷಿ ಆಗಿದೆ.’ ಎಂದು ಜಂಟಿ ಹೇಳಿಕೆಯಲ್ಲಿ ಹೇಳಲಾಗಿದೆ. 

‘ಶಾಂತಿ ಕಾಪಾಡಬೇಕು ಎಂದು ಸಮಾಜದ ಎಲ್ಲಾ ವರ್ಗಗಳ ಜನರಿಗೆ ನಾವು ಮನವಿ ಮಾಡುತ್ತೇವೆ. ಕೋಮು ದ್ರುವೀಕರಣ ಮಾಡಲು ಪ್ರಯತ್ನಿಸುತ್ತಿರುವವರ ದುಷ್ಟ ಉದ್ದೇಶವನ್ನು ವಿಫಲಗೊಳಿಸಬೇಕು. ಸಮಾಜದಲ್ಲಿ ಸೌಹಾರ್ದತೆ ಕಾಪಾಡಲು ಸ್ವತಂತ್ರವಾಗಿ ಮತ್ತು ಜಂಟಿಯಾಗಿ ಕೆಲಸ ಮಾಡಲು ದೇಶದಾದ್ಯಂತ ಇರುವ ನಮ್ಮೆಲ್ಲಾ ಪಕ್ಷಗಳ ಘಟಕಗಳಿಗೆ ಕರೆ ನೀಡಲಾಗುವುದು’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸಾಮಾಜಿಕ ಜಾಲತಾಣಗಳು ಮತ್ತು ಆಡಿಯೊ–ವಿಡಿಯೊ ವೇದಿಕೆಗಳನ್ನು ದ್ವೇಷ ಹರಡಲು ಬಳಸಿಕೊಳ್ಳುತ್ತಿರುವ ಕುರಿತು ವಿರೋಧಪಕ್ಷಗಳು ಬೇಸರ ವ್ಯಕ್ತಪಡಿಸಿವೆ.

ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್‌ ಯೆಚೂರಿ, ಎನ್‌ಸಿಪಿ ಅಧ್ಯಕ್ಷ ಫಾರೂಕ್‌ ಅಬ್ದುಲ್ಲ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ಮುಂತಾದವರು ಜಂಟಿ ಹೇಳಿಕೆಗೆ ಸಹಿ ಮಾಡಿದ್ದಾರೆ. 

ಏಪ್ರಿಲ್‌ 10ರಂದು ರಾಮ ನವಮಿ ದಿವಸ ದೇಶದ ಹಲವೆಡೆ ಕೋಮು ಗಲಭೆಗಳು ನಡೆದಿವೆ. ವಸ್ತ್ರ, ಆಹಾರದ ವಿಚಾರಕ್ಕೂ ಸಂಘರ್ಷಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ಈ ಹೇಳಿಕೆ ಹೊರಡಿಸಿವೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು