ಶನಿವಾರ, ಅಕ್ಟೋಬರ್ 1, 2022
20 °C

ಹೆಂಡತಿಯನ್ನು ಇತರ ಮಹಿಳೆಯರೊಂದಿಗೆ ಹೋಲಿಸುವುದು ಮಾನಸಿಕ ಕ್ರೌರ್ಯ: ಕೇರಳ ಹೈಕೋರ್ಟ್

ಪಿಟಿಐ Updated:

ಅಕ್ಷರ ಗಾತ್ರ : | |

ತಿರುವನಂತಪುರ: ಹೆಂಡತಿಯನ್ನು ಇತರ ಮಹಿಳೆಯರೊಂದಿಗೆ ಹೋಲಿಸುವುದು ಮತ್ತು ತನ್ನ ನಿರೀಕ್ಷೆಗೆ ತಕ್ಕಂತೆ ಇಲ್ಲ ಎಂದು ಪದೇ ಪದೇ ನಿಂದಿಸುವುದು ಮಾನಸಿಕ ಕ್ರೌರ್ಯಕ್ಕೆ ಸಮಾನವಾಗುತ್ತದೆ. ಹಾಗಾಗಿ, ಮಹಿಳೆ ಅಂತಹ ನಡವಳಿಕೆಯನ್ನು ಸಹಿಸಿಕೊಳ್ಳಬೇಕಾಗಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ.

ಹೆಂಡತಿಯಿಂದ ಸುಮಾರು 13 ವರ್ಷಗಳ ಕಾಲ ದೂರವಿದ್ದ ಗಂಡನು, ತಮ್ಮ ಮದುವೆಯನ್ನು ರದ್ದು ಮಾಡಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸುವ ಸಂದರ್ಭದಲ್ಲಿ ಹೈಕೋರ್ಟ್ ಈ ತೀರ್ಪು ನೀಡಿದೆ.

ತಮ್ಮ ನಿರೀಕ್ಷೆಗೆ ತಕ್ಕಂತೆ ಇಲ್ಲ ಎಂದು ಹೆಂಡತಿಯನ್ನು ಅರ್ಜಿದಾರರು(ಗಂಡ) ಪದೇ ಪದೇ ನಿಂದಿಸಿರುವುದು ಮತ್ತು ಇತರ ಮಹಿಳೆಯರೊಂದಿಗೆ ಹೋಲಿಕೆ ಮಾಡಿರುವುದು ನಿಸ್ಸಂಶಯವಾಗಿ ಮಾನಸಿಕ ಕ್ರೌರ್ಯವಾಗಿದ್ದು, ಇದನ್ನು ಹೆಂಡತಿ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.

ಹೆಂಡತಿ ಮತ್ತು ಆಕೆಯ ತಾಯಿಯ ಹೇಳಿಕೆ ಹಾಗೂ ಗಂಡ ಕಳುಹಿಸಿರುವುದು ಇಮೇಲ್‌ಗಳಲ್ಲಿ ಸಂಗಾತಿ ಬಗ್ಗೆ ಅವರ ನಿರೀಕ್ಷೆಗಳನ್ನು ವ್ಯಕ್ತಪಡಿಸಿರುವುದು ಸ್ಪಷ್ಟವಾಗಿದೆ.

ಗಂಡನು, ಹೆಂಡತಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ವಿಚಾರಣೆ ಸಂದರ್ಭ ತಿಳಿದುಬಂದಿದೆ. ಪ್ರತಿವಾದಿಯು(ಹೆಂಡತಿ) ದೈಹಿಕವಾಗಿ ಆಕರ್ಷಣೀಯವಾಗಿ ಇಲ್ಲ ಎಂಬ ಕಾರಣಕ್ಕೆ ಆಕೆಯೊಂದಿಗೆ ಅರ್ಜಿದಾರ(ಗಂಡ) ಒಡನಾಟದಲ್ಲಿ ತೊಡಗಿಲ್ಲ ಎಂಬುದೂ ಸಹ ಸ್ಪಷ್ಟವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಈ ದಂಪತಿ ಅಲ್ಪಾವಧಿಗೆ ಮಾತ್ರ ಸಂಸಾರ ನಡೆಸಿದ್ದು, ಅವರ ಮದುವೆಯ ಉದ್ದೇಶ ಪೂರ್ಣಗೊಂಡಿಲ್ಲ ಎಂದು ಕೋರ್ಟ್ ಹೇಳಿದೆ. ಜನವರಿ 2009 ರಲ್ಲಿ ಶಾಸ್ತ್ರೋಕ್ತವಾಗಿ ವಿವಾಹ ನಡೆದಿದ್ದು, ಅದೇ ವರ್ಷದ ನವೆಂಬರ್‌ನಲ್ಲಿ ವಿವಾಹ ವಿಚ್ಛೇದನಕ್ಕೆ ಅರ್ಜಿಸಲ್ಲಿಸಲಾಗಿದೆ ಎಂಬುದನ್ನು ಪೀಠ ಒತ್ತಿ ಹೇಳಿದೆ.

ಇದಲ್ಲದೆ, ದಾಖಲೆಗಳ ಪ್ರಕಾರ, ದಂಪತಿ ಕೇವಲ ಒಂದು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಒಟ್ಟಿಗೆ ಇದ್ದಂತೆ ಕಂಡುಬರುತ್ತದೆ. ಬಳಿಕ, ಅವರು ಬೇರ್ಪಟ್ಟಿದ್ದಾರೆ ಎಂದು ಅದು ಹೇಳಿದೆ.

ಮದುವೆ ಸಂದರ್ಭ ಪತ್ನಿಗೆ 26 ಮತ್ತು ಗಂಡನಿಗೆ 29 ವರ್ಷ ವಯಸ್ಸಾಗಿತ್ತು. ಮದುವೆ ಬಳಿಕ ಅವರ ನಡುವೆ ಯಾವುದೇ ಭಾವನಾತ್ಮಕ ಸಂಬಂಧ ಏರ್ಪಟ್ಟಂತೆ ಕಾಣುತ್ತಿಲ್ಲ ಎಂದು ನ್ಯಾಯಾಲಯ ಹೇಳಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು