ಬುಧವಾರ, ಆಗಸ್ಟ್ 17, 2022
25 °C
8ರಂದು ದೇಶದಾದ್ಯಂತ ಪ್ರತಿಭಟನೆ

ಭಾರತ್‌ ಬಂದ್‌ಗೆ ಕಾಂಗ್ರೆಸ್‌ ಬೆಂಬಲ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ವಿವಿಧ ರೈತ ಸಂಘಟನೆಗಳು ಡಿಸೆಂಬರ್‌ 8ರಂದು ಕರೆ ನೀಡಿರುವ ‘ಭಾರತ್‌ ಬಂದ್‌’ಗೆ ಕಾಂಗ್ರೆಸ್‌ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.

ರೈತರಿಗೆ ಬೆಂಬಲ ಸೂಚಿಸಿ ಅಂದು ಎಲ್ಲ ಜಿಲ್ಲಾ ಕೇಂದ್ರಗಳು ಮತ್ತು ರಾಜಧಾನಿಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅದು ತಿಳಿಸಿದೆ.

‘ಇಡೀ ಜಗತ್ತು ರೈತರ ಪರಿಸ್ಥಿತಿಯನ್ನು ನೋಡುತ್ತಿದೆ. ದೇಶದ ರಾಜಧಾನಿ ಗಡಿಯಲ್ಲಿ ಚಳಿಯನ್ನು ಲೆಕ್ಕಿಸದೆ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೂ, ಸರ್ಕಾರ ರೈತರ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ’ ಎಂದು ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಹೊಸದಾಗಿ ಕೃಷಿ ಕಾಯ್ದೆ ಜಾರಿಗೊಳಿಸುವುದು ಅಗತ್ಯವಿರಲಿಲ್ಲ. ಸರ್ಕಾರ ಅವಸರದಲ್ಲಿ ಈ ಕಾಯ್ದೆಗಳನ್ನು ರೂಪಿಸಿದೆ. ಕೋವಿಡ್‌–19 ಸಾಂಕ್ರಾಮಿಕ ಕಾಯಿಲೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭದಲ್ಲಿ ಜೂನ್‌ ತಿಂಗಳಲ್ಲಿ ಈ ಬಗ್ಗೆ ಸುಗ್ರೀವಾಜ್ಞೆ ಜಾರಿಗೊಳಿಸಿತು. ಅಂತಹ ಅಗತ್ಯ ಸರ್ಕಾರಕ್ಕೆ ಏನಿತ್ತು. ಕೆಲವು ಉದ್ಯಮ ಸ್ನೇಹಿತರಿಗೆ ನೆರವು ನೀಡುವ ಉದ್ದೇಶದಿಂದಲೇ ಈ ಕ್ರಮಕೈಗೊಳ್ಳಲಾಯಿತು. ಬಳಿಕ, ಸಂಸದೀಯ ಪ್ರಕ್ರಿಯೆಗಳನ್ನು ಪಾಲಿಸದೆಯೇ ಸಂಸತ್‌ನಲ್ಲಿ ಕೃಷಿ ಮಸೂದೆಗಳಿಗೆ ಅನುಮೋದನೆ ಪಡೆದು ಕಾಯ್ದೆ ರೂಪಿಸಲಾಗಿದೆ. ಇದು ಸಂಪೂರ್ಣ ಪ್ರಜಾಪ್ರಭುತ್ವ ವಿರೋಧಿ ಕಾಯ್ದೆಯಾಗಿದೆ’ ಎಂದು ಕಟುವಾಗಿ ಟೀಕಿಸಿದರು.

‘ಕಾಯ್ದೆಗಳನ್ನು ರೂಪಿಸುವಾಗ ರೈತ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ರೈತರ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದಿದ್ದರೆ ಸಲಹೆಗಳನ್ನು ಪಡೆಯಲಾಗುತ್ತಿತ್ತು. ಸರ್ಕಾರ ಮತ್ತು ಕಾರ್ಪೋರೇಟ್‌ ಸ್ನೇಹಿತರ ನಡುವಿನ ಅಪವಿತ್ರ ಮೈತ್ರಿಯಿಂದ ಈ ಕಾಯ್ದೆಗಳನ್ನು ರೂಪಿಸಲಾಗಿದೆ. ಇದರಿಂದಾಗಿ, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ದೂರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು