ಸೋಮವಾರ, ಮಾರ್ಚ್ 1, 2021
29 °C

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಆಕ್ರೋಶ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಪೆಟ್ರೋಲ್, ಡೀಸೆಲ್ ಬೆಲೆ 'ಸಾರ್ವಕಾಲಿಕ ಗರಿಷ್ಠ' ಮಟ್ಟ ತಲುಪಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಭಾನುವಾರ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿ, ಮೋದಿಯವರು ತಮ್ಮ ಅಧಿಕಾರಾವಧಿಯಲ್ಲಿ ಹೇರಿರುವ ಅಬಕಾರಿ ಸುಂಕ ಹೆಚ್ಚಳವನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಒತ್ತಾಯಿಸಿದೆ.

ಇಂಧನ ಬೆಲೆ ಏರಿಕೆ ಕುರಿತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿ, ಹಣದುಬ್ಬರದ ಪರಿಣಾಮದಿಂದಾಗಿ ಜನರು ತೊಂದರೆ ಅನುಭವಿಸುತ್ತಿದ್ದರೆ, ಮೋದಿ ಸರ್ಕಾರ ತೆರಿಗೆ ಸಂಗ್ರಹದಲ್ಲಿ ನಿರತವಾಗಿದೆ ಎಂದು ಟೀಕಿಸಿದರು.

ವಾರದಲ್ಲಿ ನಾಲ್ಕನೇ ಬಾರಿಗೆ ಇಂಧನ ದರಗಳನ್ನು ಹೆಚ್ಚಿಸಿದ ನಂತರ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ.

ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಸಾರ್ವಕಾಲಿಕ ಗರಿಷ್ಠ ₹ 85.70 ಕ್ಕೆ ತಲುಪಿದೆ ಮತ್ತು ಡೀಸೆಲ್ ಲೀಟರ್‌ಗೆ ₹ 75.88 ಕ್ಕೆ ತಲುಪಿದೆ ಎಂದು ಕಾಂಗ್ರೆಸ್ ವಕ್ತಾರ ಅಜಯ್ ಮಾಕನ್ ಹೇಳಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಚ್ಚು ಆಘಾತಕಾರಿ ಸಂಗತಿಯೆಂದರೆ, ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ 2014ರ ಮೇ ತಿಂಗಳಲ್ಲಿ ನಾವು ಅಧಿಕಾರವನ್ನು ತೊರೆದಾಗ ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 108 ಡಾಲರ್ ಆಗಿತ್ತು, ಆದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ ಲೀಟರ್‌ಗೆ ₹ 71.51 ಮತ್ತು ₹ 57.28 ಗಳಷ್ಟಿತ್ತು, ಈಗ ಕಚ್ಚಾ ತೈಲ ಬೆಲೆಗಳು ಅರ್ಧಕ್ಕೆ ಇಳಿದಿದ್ದರೂ ಕೂಡ ದೆಹಲಿಯಲ್ಲಿ ಇಂದು ₹ 85.70 ಮತ್ತು ₹ 75.88 ಗಳಷ್ಟಿದೆ ಎಂದು ಹೇಳಿದರು.

ಮೋದಿ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸುವ ಮೂಲಕ ಕಳೆದ ಆರೂವರೆ ವರ್ಷಗಳಲ್ಲಿ ₹ 20,00,000 ಕೋಟಿ ಹಣವನ್ನು ಗಳಿಸಿದೆ. ಆದರೆ ₹ 20 ಲಕ್ಷ ಕೋಟಿಗಿಂತ ಹೆಚ್ಚಿನ ಮೊತ್ತ ಎಲ್ಲಿಗೆ ಹೋಗಿದೆ ಎಂಬುದು ಪ್ರಮುಖ ಪ್ರಶ್ನೆಯಾಗಿದೆ. ಇದು ನರೇಂದ್ರ ಮೋದಿಯವರ ಬಂಡವಾಳಶಾಹಿ ಸ್ನೇಹಿತರ ಜೇಬಿಗೆ ಹೋಗಿದೆಯೇ? ಕಾಂಗ್ರೆಸ್ ಪಕ್ಷವು ಸರ್ಕಾರದಿಂದ ತಿಳಿದುಕೊಳ್ಳಲು ಬಯಸುವುದು ಇದನ್ನೇ ಎಂದು ಹೇಳಿದರು.

ಪೆಟ್ರೋಲ್ ಮತ್ತು ಡೀಸೆಲ್‌ ದರ ಶನಿವಾರ ಗರಿಷ್ಠ ಹಂತ ತಲುಪಿತ್ತು. ದೆಹಲಿಯಲ್ಲಿ ಪೆಟ್ರೋಲ್‌ ₹ 85.70 ಇದ್ದರೆ, ಮುಂಬೈನಲ್ಲಿ ₹ 92.28 ಆಗಿತ್ತು. ಡೀಸೆಲ್ ದರ ದೆಹಲಿಯಲ್ಲಿ ₹ 75.88 ಹಾಗೂ ಮುಂಬೈನಲ್ಲಿ ₹ 82.66ಕ್ಕೆ ತಲುಪಿತ್ತು.

ಮಾಕನ್ ತಮ್ಮ ಹೇಳಿಕೆಯಲ್ಲಿ, 'ನಮ್ಮ ಸೈನಿಕರ ತುಟ್ಟಿ ಭತ್ಯೆಯನ್ನು ಕಡಿತಗೊಳಿಸಲಾಗುತ್ತಿದೆ, ನಮ್ಮ ಎಂಎಸ್‌ಎಂಇಗಳು ಸಾಲ ಮರುಪಾವತಿಸಲು ಬ್ಯಾಂಕುಗಳಿಂದ ಒತ್ತಡಕ್ಕೆ ಒಳಗಾಗುತ್ತಿವೆ ಮತ್ತು ತೆರಿಗೆ ಅಧಿಕಾರಿಗಳ ಒತ್ತಡದಲ್ಲಿವೆ, ದೇಶಾದ್ಯಂತ ಭಾರಿ ನಿರುದ್ಯೋಗ ಎದುರಾಗಿದೆ, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಆ ಹಣ ಎಲ್ಲಿ ಹೋಗಿದೆ?' ಎಂದರು.

'ಮೋದಿ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹೇರಿರುವ ಅಬಕಾರಿ ಸುಂಕವನ್ನು ಕಡಿಮೆ ಮಾಡಿದರೆ, ಅಂದರೆ ₹ 23.78 ಮತ್ತು ₹ 28.37ರಷ್ಟು ಕಡಿತಗೊಂಡು ಬೆಲೆಗಳು ₹ 61.92 (ಪೆಟ್ರೋಲ್) ಮತ್ತು ₹ 47.51 (ಡೀಸೆಲ್) ಕ್ಕೆ ಇಳಿಯುತ್ತವೆ'. ಆದ್ದರಿಂದ ಕಳೆದ ಆರು ವರ್ಷಗಳಲ್ಲಿ ವಿಧಿಸಿರುವ ಕೇಂದ್ರ ಅಬಕಾರಿ ಸುಂಕ ಹೆಚ್ಚಳವನ್ನು ಕೇಂದ್ರ ಸರ್ಕಾರ ತಕ್ಷಣ ಹಿಂತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು