ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಳಿತಾರೂಢ ಕಾಂಗ್ರೆಸ್‌ಗೆ ಹಿನ್ನಡೆ, ಬಿಜೆಪಿ ಪಾಲಾದ 13 ಜಿಲ್ಲಾ ಪರಿಷತ್‌

Last Updated 9 ಡಿಸೆಂಬರ್ 2020, 19:58 IST
ಅಕ್ಷರ ಗಾತ್ರ

ಜೈಪುರ/ನವದೆಹಲಿ: ರಾಜಸ್ಥಾನದ ಪಂಚಾಯಿತಿರಾಜ್‌ ಸಂಸ್ಥೆಗಳಿಗೆ ನಡೆದ ಚುನಾವಣೆಗಳಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಪಕ್ಷಕ್ಕೆ ಹಿನ್ನಡೆಯಾಗಿದೆ. ಬಿಜೆ‍ಪಿಗೆ ಮುನ್ನಡೆ ದೊರೆತಿದೆ. ‘ಇದು ರೈತರು ನೀಡಿದ ತೀರ್ಪು’ ಎಂದು ಬಿಜೆಪಿ ಬಣ್ಣಿಸಿದೆ.

ಪಂಚಾಯಿತಿ ಸಮಿತಿಗಳಿಗೆ ನಾಲ್ಕು ಹಂತಗಳಲ್ಲಿ ನಡೆದ ಚುನಾವಣೆಗಳ ಬಹುತೇಕ ಎಲ್ಲಾ ಫಲಿತಾಂಶಗಳು ಪ್ರಕಟವಾಗಿವೆ. ಒಟ್ಟು 4,371 ಸ್ಥಾನಗಳಲ್ಲಿ 1,989 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡರೆ, ಕಾಂಗ್ರೆಸ್‌ಗೆ 1,852 ಸ್ಥಾನಗಳು ಲಭಿಸಿವೆ. ಸಿಪಿಎಂ 26, ಆರ್‌.ಎಲ್‌.ಪಿ 6 ಹಾಗೂ ಬಿಎಸ್‌ಪಿ ಐದು ಸ್ಥಾನಗಳನ್ನು ಪಡೆದಿವೆ. 439 ಮಂದಿ ಪಕ್ಷೇತರರು ಗೆಲುವು ಸಾಧಿಸಿದ್ದಾರೆ.

21 ಜಿಲ್ಲಾ ಪರಿಷತ್ತುಗಳ 635 ಸ್ಥಾನಗಳಳಿಗೆ ನಡೆದ ಚುನಾವಣೆಯಲ್ಲಿ 353ರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಕಾಂಗ್ರೆಸ್‌ 252 ಸ್ಥಾನಗಳಿಗೆ ತೃಪ್ತಿಪಡಬೇಕಾಗಿದೆ. 13 ಜಿಲ್ಲಾಪರಿಷತ್ತುಗಳ ಆಡಳಿತವು ನೇರವಾಗಿ ಬಿಜೆಪಿಯ ಪಾಲಾಗಿದ್ದರೆ, ಮಿತ್ರಪಕ್ಷ ರಾಷ್ಟ್ರೀಯ ಲೋಕತಾಂತ್ರಿಕ ಪಾರ್ಟಿಯ (ಆರ್‌ಎಲ್‌ಪಿ) ಬೆಂಬಲದಿಂದ ಇನ್ನೊಂದು ಜಿಲ್ಲಾಪರಿಷತ್ತಿನ ಆಡಳಿತ ಹಿಡಿಯುವ ಸಾಧ್ಯತೆ ಇದೆ. ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹರಿಯಾಣ ಹಾಗೂ ಪಂಜಾಬ್‌ನ ರೈತರ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ ನಡೆಯುತ್ತಿರುವ ಸಂದರ್ಭದಲ್ಲೇ ಬಿಜೆಪಿಗೆ ಈ ಗೆಲುವು ಲಭಿಸಿದೆ.

‘ದೇಶದ ಕೋಟ್ಯಂತರ ರೈತರು ಹೊಸ ಕೃಷಿ ಕಾಯ್ದೆಗಳ ಪರವಾಗಿದ್ದಾರೆ ಎಂಬುದಕ್ಕೆ ಈ ಫಲಿತಾಂಶವೇ ಸಾಕ್ಷಿ. ಇದು ರೈತರ ತೀರ್ಪು ಮತ್ತು ಕೃಷಿ ಸುಧಾರಣೆಯ ಪರವಾದ ತೀರ್ಪು’ ಎಂದು ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಹೇಳಿದ್ದಾರೆ.

2010 ಹಾಗೂ 2015ರಲ್ಲಿ ಸ್ಥಳೀಯ ಸಂಸ್ಥೆಗಳಿಗೆ ನಡೆದಿದ್ದ ಚುನಾವಣೆಗಳಲ್ಲಿ ಆಡಳಿತಾರೂಢ ಪಕ್ಷದ ಸದಸ್ಯರೇ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದರು. ಈ ಬಾರಿ ಫಲಿತಾಂಶ ಆ ಸಂಪ್ರದಾಯಕ್ಕೆ ಕೊನೆಹಾಡಿದೆ.

ಸಚಿವರಿಗೆ ಮುಖಭಂಗ

ರಾಜ್ಯದ ಸಚಿವ, ಕಾಂಗ್ರೆಸ್‌ ರಾಜ್ಯ ಘಟಕದ ಅಧ್ಯಕ್ಷ ಗೋವಿಂದಸಿಂಗ್‌ ಡೊಟಾಸರಾ ಹಾಗೂ ಸಚಿವರಾದ ಉದಯಲಾಲ್‌ ಅಂಜನ ಮತ್ತು ಅಶೋಕ್‌ ಚಂದನ ಅವರ ಕ್ಷೇತ್ರವ್ಯಾಪ್ತಿಯಲ್ಲಿ ಬರುವ ಪಂಚಾಯಿತಿಗಳಲ್ಲೂ ಕಾಂಗ್ರೆಸ್‌ ಸೋಲು ಕಂಡಿರುವುದು ಪಕ್ಷಕ್ಕೆ ಇರಿಸುಮುರುಸು ಉಂಟುಮಾಡಿದೆ.

ಡೊಟಾಸರಾ ಅವರ ಕ್ಷೇತ್ರದಲ್ಲಿ ಬರುವ ಲಕ್ಷ್ಮಣಘರ್‌ ಪಂಚಾಯಿತಿ ಸಮಿತಿಯ 25ರಲ್ಲಿ 13 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಕಾಂಗ್ರೆಸ್‌ಗೆ 11 ಸ್ಥಾನಗಳು ಲಭಿಸಿವೆ. ಉದಯ್‌ಲಾಲ್‌ ಅವರ ಕ್ಷೇತ್ರದ ನಿಂಬಹೇರ ಪಂಚಾಯಿತಿಯ 17ರಲ್ಲಿ 14 ಸ್ಥಾನಗಳು ಬಿಜೆಪಿಯ ಪಾಲಾಗಿವೆ.

ಸಚಿನ್‌ ಪೈಲಟ್‌ ಅವರ ಕ್ಷೇತ್ರದಲ್ಲಿ ಬರುವ ಟೊಂಕ ಪಂಚಾಯಿತಿ ಸಮಿತಿಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಲಭಿಸಿಲ್ಲ. ಆದರೆ ಇಲ್ಲಿ ಗೆಲುವು ಸಾಧಿಸಿರುವ ಮೂವರು ಪಕ್ಷೇತರ ಅಭ್ಯರ್ಥಿಗಳು ಸಚಿನ್‌ ಪೈಲಟ್‌ ಅವರಿಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ.

***
ರಾಜಸ್ಥಾನದಲ್ಲಿ ಲಭಿಸಿದ ಈ ಗೆಲುವು, ರೈತರು, ಕಾರ್ಮಿಕರು ಹಾಗೂ ಬಡವರು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಮೇಲೆ ಇಟ್ಟಿರುವ ವಿಶ್ವಾಸದ ಸಂಕೇತ

- ಜೆ.ಪಿ. ನಡ್ಡಾ, ಬಿಜೆಪಿ ಅಧ್ಯಕ್ಷ

***
ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಲು ಈ ಫಲಿತಾಂಶ ಪ್ರೇರೇಪಿಸುತ್ತದೆ. ಮುಂದಿನ ಚುನಾವಣೆಗಳಲ್ಲಿ ಪಕ್ಷವು ಇನ್ನೂ ಉತ್ತಮ ಸಾಧನೆ ಮಾಡಲಿದೆ

- ಗೋವಿಂದಸಿಂಗ್‌ ಡೊಟಾಸರಾ, ಕಾಂಗ್ರೆಸ್‌ ರಾಜಸ್ಥಾನ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT