ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಸಂಸ್ಥಾಪನಾ ದಿನ: ದೇಶದ ಮೂಲಚೈತನ್ಯಕ್ಕೆ ನಿರಂತರ ಪೆಟ್ಟು –ಖರ್ಗೆ

ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಅಧ್ಯಕ್ಷ ಕಿಡಿ
Last Updated 29 ಡಿಸೆಂಬರ್ 2022, 6:41 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಮೂಲಚೈತನ್ಯದ ಮೇಲೆ ನಿರಂತರವಾದ ದಾಳಿ ನಡೆಯುತ್ತಿದ್ದು, ಸಮಾಜವನ್ನು ದ್ವೇಷದ ಮೂಲಕ ಒಡೆಯಲಾಗುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬುಧವಾರ ಆರೋಪಿಸಿದ್ದಾರೆ.

ಪಕ್ಷದ 138ನೇ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಡವರು, ವಂಚಿತರು ಹಾಗೂ ತುಳಿತಕ್ಕೊಳಗಾದ ಸಮುದಾಯಗಳಿಗೆ ಇದ್ದ ಸವಾಲುಗಳನ್ನು ನಿವಾರಿಸಲು ಕಾಂಗ್ರೆಸ್ಧೈರ್ಯ ತೋರಿದ್ದರಿಂದ ಸ್ವತಂತ್ರ ಭಾರತ ಮುನ್ನಡೆಯಿತು ಎಂದರು.

‘ಭಾರತ ಸ್ವಾತಂತ್ರ್ಯ ಪಡೆದ ಸಮಯದಲ್ಲಿ ಹಲವು ದೇಶಗಳು ಸ್ವತಂತ್ರಗೊಂಡರೂ, ನಂತರದ ದಿನಗಳಲ್ಲಿ ಅವು ನಿರಂಕುಶಾಧಿಕಾರಕ್ಕೆ ಒಳಪಟ್ಟವು. ಆದರೆ, ಭಾರತವು ಯಶಸ್ವಿ ಹಾಗೂ ಪ್ರಬಲ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಬೆಳೆಯಿತು. ಅಲ್ಲಿಂದ ಕೆಲವು ದಶಕಗಳ ಅವಧಿಯಲ್ಲಿ ಆರ್ಥಿಕ ಕ್ಷೇತ್ರ, ಕ್ಷಿಪಣಿ, ಪರಮಾಣು ಕ್ಷೇತ್ರಗಳಲ್ಲಿ ಸೂಪರ್‌ಪವರ್ ಆಗಿ ಬೆಳೆಯಿತು’ ಎಂದು ಖರ್ಗೆ ನೆನಪಿಸಿಕೊಂಡರು.

‘ಭಾರತವು ಕೃಷಿ, ಶಿಕ್ಷಣ, ವೈದ್ಯಕೀಯ, ಮಾಹಿತಿ ತಂತ್ರಜ್ಞಾನದಲ್ಲಿ ಮುಂದುವರಿದ ರಾಷ್ಟ್ರಗಳ ಸಾಲಿಗೆ ಸೇರಿತು. ಇವೆಲ್ಲ ತಂತಾನೇ ಆಗಿದ್ದಲ್ಲ, ಪ್ರಜಾಪ್ರಭುತ್ವದಲ್ಲಿ ಪಕ್ಷವು ನಂಬಿಕೆ ಇಟ್ಟಿದ್ದರಿಂದ ಸಾಧ್ಯವಾಯಿತು. ಸರ್ಕಾರದ ಕಾರ್ಯಕ್ರಮಗಳೇ ಪಕ್ಷದ ಜನಪರ ನಿಲುವನ್ನು ಹೇಳುತ್ತವೆ’ ಎಂದು ಹೇಳಿದರು.

‘ಬಿಜೆಪಿ ವಾಷಿಂಗ್‌ ಮಷಿನ್‌ನಲ್ಲಿ ಶುಚಿಯಾಗುವ ಕಳಂಕಿತರು’
‘ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ದೊಡ್ಡ ವಾಷಿಂಗ್ ಮಷಿನ್ ಖರೀದಿಸಿದ್ದಾರೆ. ಕಳಂಕಿತ ವ್ಯಕ್ತಿಗಳು ಅದರಲ್ಲಿ ಶುಚಿಯಾಗುತ್ತಾರೆ’ ಎಂದು ಮಲ್ಲಿಕಾರ್ಜುನ ಖರ್ಗೆ ವ್ಯಂಗ್ಯ ಮಾಡಿದ್ದಾರೆ.

‘ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಪಕ್ಷದ ಶಾಸಕರನ್ನು ಸೆಳೆದು, ಬಿಜೆಪಿ ಹಾಗೂ ಶಿಂದೆ ನೇತೃತ್ವದ ಶಿವಸೇನಾ ಸರ್ಕಾರ ರಚನೆ ಮಾಡಲಾಯಿತು. ‌ಅಲ್ಲಿವರೆಗೂ ಕಳಂಕಿತರಾಗಿದ್ದವರು ಬಿಜೆಪಿ ಜೊತೆ ಕೈಜೋಡಿಸಿದ ಬಳಿಕ ಶುಭ್ರರೆನಿಸಿಕೊಂಡರು ಎಂದು ಖರ್ಗೆ ವಿವರಿಸಿದ್ದಾರೆ.

ಭರವಸೆ ನೀಡಿದ್ದ 18 ಕೋಟಿ ಉದ್ಯೋಗಗಳು ಎಲ್ಲಿ ಸೃಷ್ಟಿಯಾಗಿವೆ ಎಂದಿರುವ ಅವರು, 75 ಸಾವಿರ ಜನರಿಗೆ ನೇಮಕಾತಿ ಪತ್ರ ನೀಡಿದ ಮೋದಿ ಅವರ ‘ಉದ್ಯೋಗ ಮೇಳ’ ಕೇವಲ ಬೂಟಾಟಿಕೆ ಎಂದು ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್ ಈಗಲೂ ಪ್ರಸ್ತುತ: ಎಂ.ಕೆ.ಸ್ಟಾಲಿನ್
ಚೆನ್ನೈ ವರದಿ: ಕಾಂಗ್ರೆಸ್ ಪಕ್ಷವು ರಾಷ್ಟ್ರೀಯ ಮಟ್ಟದಲ್ಲಿ ತನ್ನ ಮಹತ್ವವನ್ನು ಕಳೆದುಕೊಂಡಿದೆ ಅಥವಾಅಪ್ರಸ್ತುತವಾಗಿದೆ ಎಂಬುದನ್ನು ನಾನು ಒಪ್ಪುವುದಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಹೇಳಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಬೇಕಾದರೆ, ರಾಷ್ಟ್ರಮಟ್ಟದ ವಿರೋಧ ಪಕ್ಷಗಳ ಮೈತ್ರಿಕೂಟದಲ್ಲಿ ಕಾಂಗ್ರೆಸ್ ಇರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್‌ 138ನೇ ಸಂಸ್ಥಾಪನಾ ದಿನದ ಸಮಯದಲ್ಲಿ ಸ್ಟಾಲಿನ್ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಕಾಂಗ್ರೆಸ್ ‍ಪಕ್ಷವು ಪುನರುಜ್ಜೀನಗೊಳ್ಳುವ ಪಥದಲ್ಲಿದೆ. ಭಾರತಕ್ಕೆ ಇದು ಈಗ ಅಗತ್ಯವಿತ್ತು. ಬಿಜೆಪಿಯ ಸಂಕುಚಿತ ರಾಜಕಾರಣಕ್ಕೆ ರಾಹುಲ್ ಗಾಂಧಿ ಅವರೇ ಮದ್ದು’ ಎಂದು ಸ್ಟಾಲಿನ್ ಅಭಿಪ್ರಾಯಪಟ್ಟಿದ್ದಾರೆ. ರಾಹುಲ್ ಅವರನ್ನು ಸಹೋದರ ಎಂದು ಕರೆದಿರುವ ಸ್ಟಾಲಿನ್, ಬಿಜೆಪಿ ವಿರುದ್ಧ ಅವರು ನಡೆಸುತ್ತಿರುವ ಹೋರಾಟ ಕೇವಲ ಚುನಾವಣಾ ದೃಷ್ಟಿಯಿಂದ ಕೂಡಿಲ್ಲ. ಅದು ಸೈದ್ಧಾಂತಿಕ ರೂಪದ್ದು ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT