ಶನಿವಾರ, ಆಗಸ್ಟ್ 13, 2022
22 °C
ವಿಧಾನಭೆ ಚುನಾವಣೆ ಸಿದ್ಧತೆಗಾಗಿ 7 ಸಮಿತಿ ರಚನೆ

ಉತ್ತರ ಪ್ರದೇಶ ಚುನಾವಣೆ: ಕಾಂಗ್ರೆಸ್ ಸಮಿತಿಗಳಲ್ಲಿ ಬಂಡಾಯ ಮುಖಂಡರಿಗಿಲ್ಲ ಸ್ಥಾನ

ಎಎನ್‌ಐ‌ Updated:

ಅಕ್ಷರ ಗಾತ್ರ : | |

Congress

ನವದೆಹಲಿ: ಉತ್ತರಪ್ರದೇಶ ಚುನಾವಣೆ ಸಿದ್ಧತೆಗೆ ಸಂಬಂಧಿಸಿ ಕಾಂಗ್ರೆಸ್ ಪಕ್ಷವು ಭಾನುವಾರ ಪ್ರಣಾಳಿಕೆ, ಸದಸ್ಯತ್ವ, ಯೋಜನಾ ಅನುಷ್ಠಾನ, ಪಂಚಾಯಿತಿ ಚುನಾವಣೆ, ಮಾಧ್ಯಮ ಸೇರಿದಂತೆ ಏಳು ಸಮಿತಿಗಳ ರಚನೆ ಮಾಡಿದೆ. ಪಕ್ಷದಲ್ಲಿನ ನಾಯಕತ್ವ ಸುಧಾರಣೆಗೆ ಆಗ್ರಹಿಸಿ ಅಧ್ಯಕ್ಷ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದವರ ಪೈಕಿ ಕೆಲವು ನಾಯಕರಿಗೆ ಯಾವುದೇ ಸಮಿತಿಯಲ್ಲಿ ಸ್ಥಾನ ಲಭಿಸಿಲ್ಲ.

ಜಿತಿನ್ ಪ್ರಸಾದ್ ಮತ್ತು ರಾಜ್ ಬಬ್ಬರ್ ಹೆಸರು ಯಾವುದೇ ಸಮಿತಿಗಳಲ್ಲಿ ಕಂಡುಬಂದಿಲ್ಲ. ಪಕ್ಷದ ಅಧ್ಯಕ್ಷೆಗೆ ಪತ್ರ ಬರೆದಿದ್ದ 23 ಹಿರಿಯ ನಾಯಕರಲ್ಲಿ ಇವರೂ ಸೇರಿದ್ದಾರೆ. ಪತ್ರ ಬರೆದವರಲ್ಲಿ ಪ್ರಮುಖರಾಗಿರುವ ಗುಲಾಂ ನಬಿ ಆಜಾದ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ನಾಯಕರಿಗೆ ಸಮಿತಿಗಳಲ್ಲಿ ಸ್ಥಾನ ದೊರೆತಿದೆ. ಆಜಾದ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದ, ಕಾಂಗ್ರೆಸ್‌ನ ಉತ್ತರಪ್ರದೇಶ ಘಟಕದ ಮಾಜಿ ಅಧ್ಯಕ್ಷರೂ ಆಗಿರುವ ನಿರ್ಮಲ್ ಖತ್ರಿ ಹಾಗೂ ನಸೀಬ್ ಪಠಾಣ್ ಅವರಿಗೆ ಕ್ರಮವಾಗಿ ತರಬೇತಿ ಸಮಿತಿ ಮತ್ತು ಯೋಜನೆ ಅನುಷ್ಠಾನ ಸಮಿತಿಯಲ್ಲಿ ಸ್ಥಾನ ನೀಡಲಾಗಿದೆ.

ಹಿರಿಯ ನಾಯಕರಾದ ಆರ್‌ಪಿಎನ್‌ ಸಿಂಗ್ ಮತ್ತು ರಾಜೀವ್ ಶುಕ್ಲಾ ಅವರಿಗೂ ಸಮಿತಿಗಳಲ್ಲಿ ಸ್ಥಾನ ದೊರೆತಿಲ್ಲ. ಆದರೆ ಈ ನಾಯಕರು ಉತ್ತರಪ್ರದೇಶ ರಾಜಕೀಯದಿಂದ ದೂರವೇ ಉಳಿದುಕೊಂಡಿದ್ದಾರೆ. ರಾಜ್ ಬಬ್ಬರ್ ಕೂಡ ಉತ್ತರಪ್ರದೇಶ ರಾಜಕಾರಣದಲ್ಲಿ ಸಕ್ರಿಯರಾಗಿಲ್ಲ. ಆದರೆ, ಬ್ರಾಹ್ಮಣರ ವಿಚಾರಗಳಿಗೆ ಸಂಬಂಧಿಸಿ ಜಿತಿನ್ ಪ್ರಸಾದ್ ಅವರು ಕಳೆದ ಕೆಲವು ತಿಂಗಳುಗಳಿಂದ ಉತ್ತರಪ್ರದೇಶ ಸರ್ಕಾರದ ಮೇಲೆ ವಾಗ್ದಾಳಿ ನಡೆಸುತ್ತಿದ್ದಾರಲ್ಲದೆ, ಸಕ್ರಿಯರಾಗಿದ್ದಾರೆ.

ಇದನ್ನೂ ಓದಿ: ಪತ್ರ ಬರೆದವರಿಗೆ ಸೋನಿಯಾ ಗಾಂಧಿ ಪ್ರಬಲ ಸಂದೇಶ: ಪ್ರಮುಖ ಹುದ್ದೆಗಳಲ್ಲಿಲ್ಲ ಅವಕಾಶ

ಉತ್ತರ ಪ್ರದೇಶ ಕಾಂಗ್ರೆಸ್‌ನ ಒಂದು ಕಪ್ರಕಾರ, ಜಿತಿನ್ ಪ್ರಸಾದ್ ಅವರಿಗೆ ಸಮಿತಿಗಳಲ್ಲಿ ಸ್ಥಾನ ನೀಡಿಲ್ಲ ಎಂದು ಈಗಲೇ ಆಕ್ಷೇಪಿಸುವುದು ಸರಿಯಲ್ಲ. ವಿಧಾನಸಭೆ ಚುನಾವಣೆಗೆ ಸಂಬಂಧಿಸಿ ಇನ್ನೂ ಅನೇಕ ಪ್ರಮುಖ ಸಮಿತಿಗಳನ್ನು ರಚಿಸುವುದು ಬಾಕಿ ಇದೆ. ಅವುಗಳಲ್ಲಿ ಅವರಿಗೆ ಸ್ಥಾನ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಜಿತಿನ್ ಪ್ರಸಾದ್ ಅವರು ರಾಜ್ಯ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ಪ್ರಣಾಳಿಕೆ ಸಮಿತಿಯಲ್ಲಿ ಸಲ್ಮಾನ್ ಖುರ್ಷಿದ್, ಪಿ.ಎಲ್.ಪೂನಿಯಾ, ಆರಾಧನಾ ಮಿಶ್ರಾ, ವಿವೇಕ್ ಬನ್ಸಾಲ್, ಅಮಿತಾಭ್ ದುಬೆ ಮತ್ತಿತರರಿಗೆ ಸ್ಥಾನ ಲಭಿಸಿದೆ. ವಿಧಾನಸಭೆ ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಇರುವಾಗಲೇ ಕಾಂಗ್ರೆಸ್ ಸಿದ್ಧತೆ ಆರಂಭಿಸಿರುವುದು ಚುನಾವಣೆಯನ್ನು ಪಕ್ಷವು ಗಂಭೀರವಾಗಿ ಪರಿಗಣಿಸುತ್ತಿದೆ ಎಂಬುದನ್ನು ಸೂಚಿಸುತ್ತದೆ ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು