ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್‌ ಪೋಸ್ಟ್‌: ಕಾಂಗ್ರೆಸ್‌–ಬಿಜೆಪಿ ವಾಕ್ಸಮರ

ಝುಕರ್‌ಬರ್ಗ್‌ಗೆ ಪತ್ರ; ಭಾರತದ ರಾಜಕಾರಣದಲ್ಲಿ ಹಸ್ತಕ್ಷೇಪದ ಆರೋಪ
Last Updated 18 ಆಗಸ್ಟ್ 2020, 19:45 IST
ಅಕ್ಷರ ಗಾತ್ರ

ನವದೆಹಲಿ: ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿನ ದ್ವೇಷ ಭಾಷಣದ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳ ನಡುವೆ ಆರಂಭವಾದ ಸಂಘರ್ಷ ತಾರಕಕ್ಕೇರಿದೆ.

ಫೇಸ್‌ಬುಕ್ ಇಂಡಿಯಾ ಅಧಿಕಾರಿಗಳ ವಿರುದ್ಧ ಪಕ್ಷಪಾತ ಧೊರಣೆಯ ಆರೋಪ ಮಾಡಿದ್ದ ಕಾಂಗ್ರೆಸ್‌ ಅಸಮಾಧಾನವು ಫೇಸ್‌ಬುಕ್ ಸಿಇಒ ಮಾರ್ಕ್ ಝುಕರ್‌ಬರ್ಗ್ ಅವರನ್ನು ತಲುಪಿದೆ.‌

‘ಫೇಸ್‌ಬುಕ್ ಇಂಡಿಯಾ‌ ಭಾರತದ‌ ಚುನಾವಣಾ ರಾಜಕಾರಣದಲ್ಲಿ ಮೂಗು ತೂರಿಸುತ್ತಿದೆ’ ಎಂದು ಕಾಂಗ್ರೆಸ್‌ ಮಂಗಳವಾರ ಝುಕರ್‌ಬರ್ಗ್‌ ಅವರಿಗೆ ದೂರು ನೀಡಿದೆ. ಫೇಸ್‌ಬುಕ್‌ ಇಂಡಿಯಾ ಅಧಿಕಾರಿಗಳ ವರ್ತನೆ, ಕಾರ್ಯವೈಖರಿ ಮತ್ತು ಪಕ್ಷಪಾತ ಧೊರಣೆಯ ಬಗ್ಗೆ ಈ ಪತ್ರದಲ್ಲಿ ಕಾಂಗ್ರೆಸ್‌ ಅಸಮಾಧಾನ ಹೊರಹಾಕಿದೆ.

‘ಪ್ರತಿಯೊಬ್ಬ ಭಾರತೀಯನೂ ಫೇಸ್‌ಬುಕ್ ಕಾರ್ಯವೈಖರಿ ಮತ್ತು ಧೋರಣೆಯನ್ನು ಪ್ರಶ್ನಿಸಬೇಕು. ಪಕ್ಷಪಾತದಿಂದ ಕೂಡಿದ ಸುಳ್ಳು ಸುದ್ದಿ ಮತ್ತು ದ್ವೇಷ ಭಾಷಣಗಳಿಗೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಿ ಕೊಡಲು ಸಾಧ್ಯವಿಲ್ಲ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ.

‘ರಾಜಕೀಯ ತಳಹದಿಯನ್ನೇ ಕಳೆದುಕೊಂಡ ಜನರು ಈಗ ಫೇಸ್‌ಬುಕ್‌ನಂತಹ ವೇದಿಕೆಗಳ ಬಗ್ಗೆ ಚರ್ಚೆಯಲ್ಲಿ ತೊಡಗಿದ್ದಾರೆ’ ಎಂದು ಬಿಜೆಪಿ ತಿರುಗೇಟು ನೀಡಿದೆ.

ತಮ್ಮ ಮೂಗಿನ ನೇರಕ್ಕೆ ನಡೆಯದ ಸಂಸ್ಥೆಗಳು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ನಿಯಂತ್ರಣದಲ್ಲಿವೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭಾವಿಸುತ್ತಾರೆ ಎಂದು ಬಿಜೆಪಿ ಹಿರಿಯ ಮುಖಂಡ ರವಿಶಂಕರ್‌ ಪ್ರಸಾದ್‌ ಹೇಳಿದ್ದಾರೆ.

ಭಾರತದ ಫೇಸ್‌ಬುಕ್‌ ಮತ್ತು ವಾಟ್ಸ್‌ಆ್ಯಪ್,‌ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ನಿಯಂತ್ರಣದಲ್ಲಿವೆ ಎಂದು ರಾಹುಲ್‌ ಆರೋಪಿಸಿದ್ದರು.

ವಿವಾದದ ಕೇಂದ್ರ ಬಿಂದು ಹಾಗೂ ತೆಲಂಗಾಣದ ಏಕೈಕ ಬಿಜೆಪಿ ಶಾಸಕ ರಾಜಾ ಸಿಂಗ್ ಅವರು‌, ಸಾಮಾಜಿಕ ಜಾಲತಾಣದಲ್ಲಿ ತಾನು ದ್ವೇಷ ಭಾಷಣ ಪೋಸ್ಟ್‌ ಮಾಡಿಲ್ಲ ಎಂದು ಹೇಳಿದ್ದಾರೆ. ರಾಷ್ಟ್ರದ ಹಿತಾಸಕ್ತಿ ಪರವಾಗಿ ಮಾತ್ರ ತಾವು ಕೆಲಸ ಮಾಡುವುದಾಗಿ ಪ್ರತಿಕ್ರಿಯಿಸಿದ್ದಾರೆ. ‘2018ರಲ್ಲಿಯೇ ನನ್ನ ಫೇಸ್‌ಬುಕ್‌ ಖಾತೆ ಹ್ಯಾಕ್‌ ಆಗಿತ್ತು. ಅಂದೇ ಅದನ್ನು ಸ್ಥಗಿತ‌ ಮಾಡಲಾಗಿದೆ’ ಎಂದು ಅವರು ಸ್ಪಷ್ಟೀಕರಣ ನೀಡಿದ್ದಾರೆ.

ಫೇಸ್‌ಬುಕ್ ದ್ವೇಷ ಭಾಷಣಗಳ ಮೇಲಿನ‌ ನಿರ್ಬಂಧ ನಿಯಮಬಿಜೆಪಿಯ ಕೆಲವು ನಾಯಕರ ಭಾಷಣಗಳಿಗೆ ಅನ್ವಯಿಸುವುದಿಲ್ಲ ಎಂದು ವಾಲ್‌ಸ್ಟ್ರೀಟ್ ಜರ್ನಲ್ ಇದೇ 14ರಂದು ವರದಿ ಮಾಡಿತ್ತು. ಅದರ ಬೆನ್ನಲ್ಲೇ ಕಾಂಗ್ರೆಸ್‌ ಮತ್ತು ಇತರ ವಿರೋಧಪಕ್ಷಗಳು ಫೇಸ್‌ಬುಕ್ ಇಂಡಿಯಾ‌ ವಿರುದ್ಧ ತಿರುಗಿ ಬಿದ್ದಿವೆ.

ಆಂತರಿಕ ತನಿಖೆಗೆ ಆಗ್ರಹ
ಫೇಸ್‌ಬುಕ್‌ ಇಂಡಿಯಾ ಅಧಿಕಾರಿಗಳ ವರ್ತನೆ ಬಗ್ಗೆ ಒಂದು ಅಥವಾ ಎರಡು ತಿಂಗಳ ಕಾಲಮಿತಿಯೊಳಗೆ ಉನ್ನತ ಮಟ್ಟದ ಆಂತರಿಕ ತನಿಖೆ ನಡೆಸಬೇಕು ಮತ್ತು ಆ ವರದಿಯನ್ನು ಬಹಿರಂಗಗೊಳಿಸಬೇಕು ಎಂದು ಝುಕರ್‌ಬರ್ಗ್‌ ಅವರಿಗೆ ಪತ್ರ ಬರೆದಿರುವುದಾಗಿ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.

ತನಿಖೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಫೇಸ್‌ಬುಕ್‌ ಇಂಡಿಯಾ ಕಾರ್ಯಾಚರಣೆಗೆ ಹೊಸ ಅಧಿಕಾರಿಗಳನ್ನು ನೇಮಕ ಮಾಡುವಂತೆಯೂ ಅವರು‌ ಒತ್ತಾಯಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್‌ ಪ್ರಸಾದ್‌, ಇದು ಫೇಸ್‌ಬುಕ್‌ ಸಂಸ್ಥೆಗೆ ಬಿಟ್ಟ ಆಂತರಿಕ ವಿಚಾರ. ಬಿಜೆಪಿ ಬೆಂಬಲಿಗರ ನೂರಾರು ಪುಟಗಳನ್ನು ಫೇಸ್‌ಬುಕ್‌ ತೆಗೆದು ಹಾಕಿದೆ ಎಂದು ಹೇಳಿದರು.‌

ಫೇಸ್‌ಬುಕ್‌ ಅಧಿಕಾರಿ ಸೇರಿ ಮೂವರ ವಿರುದ್ಧ ಎಫ್‌ಐಆರ್
ರಾಯಪುರ
: ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಅವಹೇಳನಕಾರಿ ಸಂದೇಶಗಳ ಪೋಸ್ಟ್‌ ಪ್ರಕಟಿಸಿದ ಆರೋಪದ ಮೇಲೆ ಫೇಸ್‌ಬುಕ್‌ ಹಿರಿಯ ಅಧಿಕಾರಿ ಮತ್ತು ಇಬ್ಬರು ಬಳಕೆದಾರರ ವಿರುದ್ಧ ರಾಯಪುರ ಠಾಣೆಯಲ್ಲಿ ಸೋಮವಾರ ರಾತ್ರಿ ಎಫ್‌ಐಆರ್ ದಾಖಲಾಗಿದೆ.

ಅವಹೇಳನಕಾರಿ ಸಂದೇಶ ಪ್ರಕಟಿಸಿದ ಆರೋಪದಡಿ ಫೇಸ್‌ಬುಕ್‌ ದಕ್ಷಿಣ ಮತ್ತು ಮಧ್ಯ ಏಷ್ಯಾದ ನಿರ್ದೇಶಕಿ ಹಾಗೂ ನವದೆಹಲಿ ನಿವಾಸಿ ಆಂಖಿ ದಾಸ್, ಸಂದೇಶ ಪೋಸ್ಟ್ ಮಾಡಿದಛತ್ತೀಸ‌ಗಡದ ಮುಂಗೇಲಿ ನಿವಾಸಿ ರಾಮ್‌ ಸಾಹು ಮತ್ತು ಮಧ್ಯ ಪ್ರದೇಶದ ಇಂದೋರ್‌ ನಿವಾಸಿ ವಿವೇಕ್‌ ಸಿನ್ಹಾ ಎಂಬುವರ ವಿರುದ್ಧ ದೂರು ದಾಖಲಾಗಿದೆ.

‌ರಾಯಪುರದ ಸುದ್ದಿವಾಹಿನಿಯೊಂದರ ಪತ್ರಕರ್ತ ಆವೇಶ್ ತಿವಾರಿ ಎಂಬುವರು ಕಬೀರ್‌ ನಗರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೂರಿನಲ್ಲಿರುವುದು ಏನು?
ವಾಲ್‌ಸ್ಟ್ರೀಟ್‌ ಜರ್ನಲ್‌ನಲ್ಲಿ ಪ್ರಕಟವಾದ ಲೇಖನವೊಂದನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದೆ. ಬಿಜೆಪಿ ನಾಯಕರ ದ್ವೇಷಕಾರುವ ಪ್ರಚೋದನಕಾರಿ ಭಾಷಣಗಳಿಗೆ ನಿರ್ಬಂಧ ಹೇರಲು ಫೇಸ್‌ಬುಕ್‌ ನಿರಾಕರಿಸಿದ ವರದಿ ಅದಾಗಿತ್ತು.

ಈ ಪೋಸ್ಟ್ ವಿರುದ್ಧ ಆಂಖಿದಾಸ್ ಕಮೆಂಟ್‌ ಮಾಡಿದ್ದರು. ಅದಕ್ಕೆ ಇಬ್ಬರು ಬಳಕೆದಾರರು ‌ಬೆಂಬಲ ಸೂಚಿಸಿದ್ದರು. ಅಲ್ಲದೇ ಬೆದರಿಕೆ ಒಡ್ಡಿದ್ದರು. ಪೋಸ್ಟ್‌ ಪ್ರಕಟವಾದ ನಂತರ ನಿರಂತರ ಬೆದರಿಕೆ ಸಂದೇಶಗಳು ಬರುತ್ತಿವೆ ಎಂದು ಆವೇಶ್‌ ತಿವಾರಿ ದೂರಿನಲ್ಲಿ ತಿಳಿಸಿದ್ದಾರೆ.

*

ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣದಲ್ಲಿ ದ್ವೇಷದ ವಿಷಬೀಜ ಬಿತ್ತುವ ಮತ್ತು ಪ್ರಚೋದನಕಾರಿ ಸಂದೇಶ ಪೋಸ್ಟ್‌ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು.
-ಶಿವಸೇನಾ

*
ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವೊಂದರ ಚುನಾವಣಾ ರಾಜಕಾರಣದಲ್ಲಿ ಫೇಸ್‌ಬುಕ್‌ ಹಸ್ತಕ್ಷೇಪ ಮಾಡುತ್ತಿರುವುದು ಗಂಭೀರ ವಿಷಯ.
-ಕೆ.ಸಿ. ವೇಣುಗೋಪಾಲ್, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT