ಮಂಗಳವಾರ, ಡಿಸೆಂಬರ್ 6, 2022
24 °C

ರಾಜಸ್ಥಾನ ಕಾಂಗ್ರೆಸ್ ಬಿಕ್ಕಟ್ಟಿನ ಕುರಿತು ಲಿಖಿತ ವರದಿ ಕೇಳಿದ ಸೋನಿಯಾ ಗಾಂಧಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ರಾಜಸ್ಥಾನದಲ್ಲಿ ಪಕ್ಷದ ಬೆಳವಣಿಗಗೆಳ ಕುರಿತು ವಿಸ್ತೃತವಾದ ಲಿಖಿತ ವರದಿ ನೀಡುವಂತೆ ಸೋನಿಯಾ ಗಾಂಧಿ ಅವರು ಕೇಳಿದ್ದಾರೆ ಎಂದು ಕಾಂಗ್ರೆಸ್‌ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಅಜಯ್ ಮಾಕನ್‌ ಅವರು ಸೋಮವಾರ ತಿಳಿಸಿದ್ಡಾರೆ.

ರಾಜಸ್ಥಾನದಿಂದ ವಾಪಸ್‌ ಆದ ಬಳಿಕ ಈ ಇಬ್ಬರೂ ನಾಯಕರು ಸೋನಿಯಾ ಅವರೊಂದಿಗೆ ಒಂದು ಗಂಟೆಗೂ ಹೆಚ್ಚು ಸಮಯ ಮಾತುಕತೆ ನಡೆಸಿದರು.

ಸೋನಿಯಾ ಜೊತೆಗಿನ ಮಾತುಕತೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿರುವ ಮಾಕನ್‌, 'ಖರ್ಗೆ ಅವರು ಮತ್ತು ನಾನು ರಾಜಸ್ಥಾನ ಬೆಳವಣಿಗೆಗಳ ಕುರಿತು ಸೋನಿಯಾ ಅವರಿಗೆ ಮಾಹಿತಿ ನೀಡಿದ್ದೇವೆ. ಅವರು ಸಂಪೂರ್ಣ ವಿದ್ಯಮಾನದ ಕುರಿತು ವಿವರವಾದ ವರದಿ ಕೇಳಿದ್ದಾರೆ. ಇಂದು ರಾತ್ರಿ ಅಥವಾ ನಾಳೆ ವರದಿ ನೀಡುತ್ತೇವೆ' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: 

ಶಾಸಕಾಂಗ ಪಕ್ಷದ ಸಭೆ (ಸಿಎಲ್‌ಪಿ) ನಡೆಸಲು ಸಾಧ್ಯವಾಗದ್ದು 'ದುರದೃಷ್ಟಕರ' ಎಂದಿರುವ ಮಾಕನ್‌, ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಆಪ್ತರು ಅಶಿಸ್ತು ಪ್ರದರ್ಶಿಸಿದ್ದಾರೆ ಎಂದು ಟೀಕಿಸಿದ್ದಾರೆ.

ಗೆಹಲೋತ್‌ ಅವರ ಅನುಮತಿಯಂತೆ ಸಿಎಲ್‌ಪಿ ಸಭೆ ಏರ್ಪಡಿಸಲಾಗಿತ್ತು. ಅವರ ಮನವಿಗೆ ಅನುಸಾರವಾಗಿಯೇ ಸಮಯ ಮತ್ತು ಸ್ಥಳವನ್ನೂ ನಿಗದಿಪಡಿಸಲಾಗಿತ್ತು.

ಮುಖ್ಯಮಂತ್ರಿ ಆಯ್ಕೆ ವಿಚಾರವಾಗಿ ಗೆಹಲೋತ್‌ ಅವರ ಆಪ್ತರು ಪಕ್ಷದ ನಾಯಕತ್ವಕ್ಕೆ ಷರತ್ತುಗಳನ್ನು ಹಾಕಲು ಸಾಧ್ಯವಿಲ್ಲ. ಅದು ಹಿತಾಸಕ್ತಿ ಸಂಘರ್ಷಕ್ಕೆ ಸಮಾನ ಎಂದೂ ಎಚ್ಚರಿಸಿದ್ದಾರೆ.

ಸದ್ಯ ರಾಜಸ್ಥಾನ ಸಿಎಂ ಆಗಿರುವ ಗೆಹಲೋತ್‌ ಅವರು ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಇದರಿಂದಾಗಿ ತೆರವಾಗಲಿರುವ ಸಿಎಂ ಸ್ಥಾನಕ್ಕೆ ಮತ್ತೊಬ್ಬರನ್ನು ಆಯ್ಕೆ ಮಾಡುವ ಕುರಿತು ಚರ್ಚಿಸಲು, ಕಾಂಗ್ರೆಸ್‌ ಹೈಕಮಾಂಡ್‌ ಮಾಕನ್‌ ಮತ್ತು ಖರ್ಗೆ ಅವರನ್ನು ಪಕ್ಷದ ವೀಕ್ಷಕರನ್ನಾಗಿ ರಾಜಸ್ಥಾನಕ್ಕೆ ಕಳುಹಿಸಿತ್ತು. ಪ್ರತಿಯೊಬ್ಬ ಶಾಸಕರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸುವಂತೆಯೂ ಸೂಚಿಸಿತ್ತು.

ಇದನ್ನೂ ಓದಿ: 

ಗೆಹಲೋತ್‌ ನಿವಾಸದಲ್ಲಿ ಭಾನುವಾರ ಸಂಜೆ ಸಿಎಲ್‌ಪಿ ಸಭೆ ನಿಗದಿಯಾಗಿತ್ತು.

ಸಭೆಗೂ ಮುನ್ನ ಸಚಿವರಾದ ಶಾಂತಿ ಧರಿವಾಲ್‌, ಮಹೇಶ್‌ ಜೋಶಿ ಹಾಗೂ ಪ್ರತಾಪ್‌ ಸಿಂಗ್‌ ಖಚಾರಿಯಾವಾಸ್‌ ಅವರು ಗೆಹಲೋತ್‌ ಬೆಂಬಲಿಗರ ಪ್ರತಿನಿಧಿಗಳಾಗಿ ಮಾಕನ್ ಹಾಗೂ ಖರ್ಗೆ ಅವರನ್ನು ಭೇಟಿಯಾಗಿದ್ದರು.

ಈ ಬಗ್ಗೆ ಮಾಹಿತಿ ನೀಡಿರುವ ಮಾಕನ್‌, ಗೆಹಲೋತ್‌ ಆಪ್ತ ಬಳಗದ ಪ್ರತಿನಿಧಿಗಳು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ನಂತರವೇ ರಾಜಸ್ಥಾನ ಸಿಎಂ ಆಯ್ಕೆಯಾಗಬೇಕು, ರಾಜ್ಯದಲ್ಲಿ 2020ರಲ್ಲಿ ರಾಜಕೀಯ ಬಿಕ್ಕಟ್ಟು ಎದುರಾದ ಸಂದರ್ಭದಲ್ಲಿ ಸರ್ಕಾರಕ್ಕೆ ಬೆಂಬಲವಾಗಿ ನಿಂತಿದ್ದ ಶಾಸಕರಲ್ಲಿಯೇ ಯಾರನ್ನಾದರೂ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಬೇಕು ಹಾಗೂ ಕಾಂಗ್ರೆಸ್‌ ವೀಕ್ಷಕರು ಶಾಸಕರೊಂದಿಗೆ ಪ್ರತ್ಯೇಕ ಸಭೆ ನಡೆಸದೆ ಸಾಮೂಹಿಕವಾಗಿ ಚರ್ಚಿಸಬೇಕು ಎಂಬ ಷರತ್ತುಗಳನ್ನು ಹಾಕಿದ್ದರು ಎಂದಿದ್ದಾರೆ.

'ಇದು ದುರದೃಷ್ಟಕರ. ಇವುಗಳ ಪರಿಣಾಮವಾಗಿ ಸಿಎಲ್‌ಪಿ ಸಭೆ ಸಾಧ್ಯವಾಗಲಿಲ್ಲ. ಸಿಎಲ್‌ಪಿ ಸಭೆ ನಿಗದಿಯಾದ ಸಂದರ್ಭದಲ್ಲಿ, ಪರ್ಯಾಯ ಸಭೆಗಳು ನಡೆಯಲೇಬಾರದು. ಆ ರೀತಿ ಆಗುವುದು ಅಶಿಸ್ತಿನ ನಡೆಯಾಗುತ್ತದೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅಕ್ಟೋಬರ್ 17ರಂದು ಚುನಾವಣೆ ನಡೆಯಲಿದ್ದು, ಅ. 19ರಂದು ಫಲಿತಾಂಶ ಹೊರಬೀಳಲಿದೆ. ಸೆಪ್ಟೆಂಬರ್ 30ರಂದು ನಾಮಪತ್ರ ಸಲ್ಲಿಕೆಗೆ ಕೊನೇ ದಿನವಾಗಿದ್ದು, ಅದೇ ದಿನ ಹಿರಿಯ ನಾಯಕ ಶಶಿ ತರೂರ್ ನಾಮಪತ್ರ ಸಲ್ಲಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು