ಶುಕ್ರವಾರ, ಅಕ್ಟೋಬರ್ 23, 2020
27 °C
ಹತ್ರಾಸ್‌ಗೆ ಹೋಗುತ್ತಿದ್ದ ಕಾಂಗ್ರೆಸ್‌ ಕಾರ್ಯಕರ್ತರಿಗೆ ತಡೆ

ಕಾಲ್ನಡಿಗೆಯಲ್ಲಿ ಹತ್ರಾಸ್‌ಗೆ ಹೊರಟಿದ್ದ ರಾಹುಲ್‌‌ ಗಾಂಧಿ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

rahul gandhi

ನೊಯ್ಡಾ/ಜೇವರ್‌(ಉತ್ತರ ಪ್ರದೇಶ): ಅತ್ಯಾಚಾರ ಸಂತ್ರಸ್ತೆಯ ಕುಟುಂಬದವರ ಭೇಟಿಗಾಗಿ ಗುರುವಾರ ಹತ್ರಾಸ್‌ಗೆ ಹೊರಟಿದ್ದ ಕಾಂಗ್ರೆಸ್ ನಾಯಕರಾದ ರಾಹುಲ್‌ ಗಾಂಧಿಯನ್ನು ಉತ್ತರ ಪ್ರದೇಶ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಐಪಿಸಿ ಸೆಕ್ಷನ್ 188 ಅಡಿಯಲ್ಲಿ ರಾಹುಲ್‌ನ್ನು ಬಂಧಿಸಲಾಗಿದೆ.

ಸಂತ್ರಸ್ತೆಯ ಕುಟುಂಬದವರನ್ನು ಭೇಟಿಯಾಗಲು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ವಾದ್ರಾ ಸೇರಿದಂತೆ ನೂರಾರು ಕಾರ್ಯಕರ್ತರೊಂದಿಗೆ ಹತ್ರಾಸ್‌ಗೆ ತೆರಳುತ್ತಿದ್ದ ರಾಹುಲ್ ಗಾಂಧಿಯವರ ವಾಹನಗಳನ್ನು ಪೊಲೀಸರು ಗ್ರೇಟರ್‌ ನಾಯ್ಡಾ ಬಳಿ ಪರಿಚೌಕದಲ್ಲಿ ತಡೆದಿದ್ದರು.

ನಂತರ ರಾಹುಲ್, ಪ್ರಿಯಾಂಕಾ ಸೇರಿದಂತೆ ನೂರಾರು ಕಾರ್ಯಕರ್ತರು ಕಾಲ್ನಡಿಗೆಯಲ್ಲೇ ಹತ್ರಾಸ್‌ನತ್ತ ಹೊರಟರು. ಈ ವೇಳೆ  ಪ್ರಿಯಾಂಕ, ರಾಹುಲ್ ಇಬ್ಬರನ್ನು ಪೊಲೀಸ್ ವಾಹನದಲ್ಲಿ ಕರೆದುಕೊಂಡು ಹೋಗಲಾಯಿತು.

ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಹತ್ರಾಸ್‌ ಕಡೆಗೆ ಹೆಜ್ಜೆ ಹಾಕುತ್ತಲೇ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕಾ ವಾದ್ರಾ ‘ಅವರು ನಮ್ಮ ಕಾರುಗಳನ್ನು ತಡೆದಿರಬಹುದು. ಆದರೆ, ನಾವು ನಡೆದುಕೊಂಡೇ ಹತ್ರಾಸ್‌ ತಲುಪಿ, ಸಂತ್ರಸ್ತೆಯ ಕುಟುಂಬದವರಿಗೆ ಸಮಾಧಾನ, ಸಂತಾಪ ತಲುಪಿಸಿ ಬರುತ್ತೇವೆ‘ ಎಂದು ಹೇಳಿದರು.

‘ಕಳೆದ ವರ್ಷ ಇದೇ ಸಮಯದಲ್ಲಿ ನಾವು ಉನ್ನಾವೊದಲ್ಲಿ ಮಹಿಳೆಯೊಬ್ಬರ ಮೇಲೆ ನಡೆದ ಅತ್ಯಾಚಾರ ಪ್ರಕರಣದ ವಿರುದ್ಧ ಹೋರಾಟ ಮಾಡುತ್ತಿದ್ದೆವು. ಈ ಘಟನೆ ನಡೆದು ಒಂದು ವರ್ಷ ಕಳೆದರೂ, ಉತ್ತರ ಪ್ರದೇಶದಲ್ಲಿ ಪರಿಸ್ಥಿತಿ ಬದಲಾಗಿಲ್ಲ‘ ಎಂದರು.

‘ಉತ್ತರ ಪ್ರದೇಶದಲ್ಲಿ ಮಹಿಳೆಯರ ಭದ್ರತೆಯನ್ನು ಖಾತರಿಪಡಿಸುವವರೆಗೂ ನಮ್ಮ ಪಕ್ಷ ಹೋರಾಟ ಮುಂದುವರಿಸಲಿದೆ‘ ಎಂದು ಸ್ಪಷ್ಟಪಡಿಸಿರುವ ಪ್ರಿಯಾಂಕಾ, ‘ಈ ಹೋರಾಟದ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿ, ಎಚ್ಚರಗೊಳಿಸುವುದನ್ನು ಬಿಟ್ಟು ಬೇರೆ ದಾರಿ ಇಲ್ಲ‘ ಎಂದರು.

‘ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು 19 ವರ್ಷದ ದಲಿತ ಮಹಿಳೆ ಮೇಲಿನ ಅತ್ಯಾಚಾರ ಮತ್ತು ಸಾವಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು. ರಾಜ್ಯದಲ್ಲಿ ಮಹಿಳೆಯರಿಗೆ ಭದ್ರತೆ ನೀಡುವ ಜವಾಬ್ದಾರಿ ತೆಗೆದುಕೊಳ್ಳಬೇಕು‘ ಎಂದು ಅವರು ಒತ್ತಾಯಿಸಿದರು. 

‘ಮಹಿಳೆಯರ ಸುರಕ್ಷತೆಗಾಗಿ ಆದಿತ್ಯನಾಥ್  ಏನಾದರೂ ಕ್ರಮ ಕೈಗೊಳ್ಳಬೇಕಿತ್ತು. ಮುಂದೆಯಾದರೂ ಸೂಕ್ತ ಕ್ರಮ ಕೈಗೊಳ್ಳುವವರೆಗೂ ಹೋರಾಟ ಮುಂದುವರಿಸುತ್ತೇವೆ. ರಾಜ್ಯದಲ್ಲಿರುವ ಮಹಿಳೆಯರಿಗೆ ತಾವು ಸುರಕ್ಷಿತವಾಗಿಲ್ಲ ಎಂದು ತಿಳಿದರೆ, ಅವರು ಹೋರಾಟಕ್ಕೆ ಬರುತ್ತಾರೆ‘ ಎಂದು ಅಭಿಪ್ರಾಯಪಟ್ಟರು. 

‘ಉತ್ತರ ಪ್ರದೇಶ ರಾಜ್ಯದಲ್ಲಿ ಪ್ರತಿ ದಿನ 11 ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿವೆ. ಇಂಥ ಘಟನೆಗಳು ಪ್ರತಿ ದಿನ ನಡೆಯುತ್ತಿವೆ. ಆದರೆ ಸರ್ಕಾರ ಏನನ್ನೂ ಮಾಡುತ್ತಿಲ್ಲ. ನಾವು ಸರ್ಕಾರವನ್ನು ಅಲ್ಲಾಡಿಸಿ ಅಥವಾ ಎಚ್ಚರಗೊಳಿಸದಿದ್ದರೆ ಅವರು ಮಹಿಳೆಯರ ಸುರಕ್ಷತೆಗಾಗಿ ಏನನ್ನೂ ಮಾಡುವುದಿಲ್ಲ" ಎಂದು ಅವರು ಹೇಳಿದರು.

ಇದನ್ನೂ ಓದಿ: ಸಾಮೂಹಿಕ ಅತ್ಯಾಚಾರ: ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು