ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಮುಕ್ತ ಪುದುಚೇರಿ: ಬಿಜೆಪಿ ಕಾರ್ಯತಂತ್ರ

Last Updated 26 ಫೆಬ್ರುವರಿ 2021, 19:32 IST
ಅಕ್ಷರ ಗಾತ್ರ

ಪುದುಚೇರಿ: ಕೆಲವೇ ದಿನಗಳ ಹಿಂದೆ, ಚುನಾವಣೆ ಇನ್ನೇನು ಹೊಸ್ತಿಲಿಗೆ ಬಂತು ಎಂದಾಗ ಕೇಂದ್ರಾಡಳಿತ ಪ್ರದೇಶವಾಗಿ
ರುವ ಪುದುಚೇರಿಯಲ್ಲಿದ್ದ ಕಾಂಗ್ರೆಸ್‌ ನೇತೃತ್ವದ ಮೈತ್ರಿ ಸರ್ಕಾರ ಪತನವಾಗಿದೆ. ‘ಕಾಂಗ್ರೆಸ್‌ಮುಕ್ತ ಭಾರತ’ ನಿರ್ಮಾಣದ ಬಿಜೆಪಿಯ ಕನಸು ದಕ್ಷಿಣ ಭಾರತದಲ್ಲಿ ಸಾಕಾರವಾಗಬೇಕಾದರೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪುದುಚೇರಿ ಮತ್ತು ಕೇರಳದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಾರದಂತೆ ನೋಡಿಕೊಳ್ಳುವುದು ಬಿಜೆಪಿಗೆ ಮಹತ್ವದ್ದಾಗಿದೆ.

ಈ ಎರಡೂ ರಾಜ್ಯಗಳು ಬಿಜೆಪಿಯ ಮಟ್ಟಿಗೆ ಈವರೆಗೆ ದುರ್ಗಮವೇ ಆಗಿದ್ದವು. ಕೇರಳದಲ್ಲಿ ಕಳೆದ ಬಾರಿ ಪದಾರ್ಪಣೆ ಮಾಡಲು ಬಿಜೆಪಿಗೆ ಸಾಧ್ಯವಾಗಿದ್ದರೂ, ಪುದುಚೇರಿಯಲ್ಲಿ ಖಾತೆ ತೆರೆಯಲೂ ಸಾಧ್ಯವಾಗಿರಲಿಲ್ಲ. ಕೊನೆಗೆ, ನಾಮನಿರ್ದೇಶನದ ಮೂಲಕ ವಿಧಾನಸಭೆಗೆ ಪಕ್ಷದ ಮೂವರು ಪ್ರತಿನಿಧಿಗಳನ್ನು ಕಳುಹಿಸುವಲ್ಲಿಗೆ ಸಮಾಧಾನಪಡಬೇಕಾಯಿತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಕಾಂಗ್ರೆಸ್‌ನ ಐವರು ಮುಖಂಡರು ಪಕ್ಷವನ್ನು ತ್ಯಜಿಸಿ, ಕಾಂಗ್ರೆಸ್‌–ಡಿಎಂಕೆ ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿದ್ದಾರೆ. ಅಷ್ಟೇ ಅಲ್ಲ ಕಾಂಗ್ರೆಸ್‌ ತ್ಯಜಿಸಿದವರಲ್ಲಿ ಮೂವರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಆದ್ದರಿಂದ ಈ ಬಾರಿ ಪುದುಚೇರಿಯಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ.

30 ಸ್ಥಾನಗಳ ಪುದುಚೇರಿ ವಿಧಾನಸಭೆಯಲ್ಲಿ 2016ರಲ್ಲಿ ಕಾಂಗ್ರೆಸ್‌ 15 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಡಿಎಂಕೆಯ ನಾಲ್ವರು ಸದಸ್ಯರು ಗೆದ್ದಿರುವುದರಿಂದ ನಿರಾಯಾಸವಾಗಿ ಅಧಿಕಾರ ಹಿಡಿಯಲು ಕಾಂಗ್ರೆಸ್‌ಗೆ ಸಾಧ್ಯವಾಗಿತ್ತು. ಆದರೆ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ಅವರ ಕಾರ್ಯವೈಖರಿಯಿಂದಾಗಿ ಪಕ್ಷದೊಳಗೇ ಅಸಮಾಧಾನ ಸೃಷ್ಟಿಯಾಗಿತ್ತು ಎಂದು ಕಾಂಗ್ರೆಸ್‌ ನಾಯಕರೇ ಹೇಳಿಕೊಂಡಿದ್ದಾರೆ. ಲೆಫ್ಟಿನೆಂಟ್‌ ಗವರ್ನರ್‌ ಆಗಿದ್ದ ಕಿರಣ್‌ ಬೇಡಿ ಅವರು ಸೂಪರ್‌ ಸಿಎಂ ಎಂಬಂತೆ ವರ್ತಿಸಿ, ಕಾಂಗ್ರೆಸ್‌ ಸರ್ಕಾರಕ್ಕೆ ಅಡ್ಡಿ ಉಂಟುಮಾಡಿದ್ದರು ಎಂದೂ ಆರೋಪಿಸಲಾಗಿತ್ತು.

ಈ ಗೊಂದಲಗಳನ್ನು ಬಿಜೆಪಿಯು ತನಗೆ ಲಾಭದಾಯಕವಾಗಿ ಪರಿವರ್ತಿಸಿಕೊಂಡಿದೆ. ಬೇಡಿ ಅವರ ವರ್ತನೆಯಿಂದ ಪಕ್ಷಕ್ಕೆ ಹಿನ್ನಡೆ ಆಗಬಹುದು ಎಂದು ಭಾವಿಸಿದ ಕೇಂದ್ರ ಸರ್ಕಾರವು ಚುನಾವಣೆಯ ಹೊಸ್ತಿಲಲ್ಲೇ ಅವರನ್ನು ವಜಾ ಮಾಡಿ, ಜನರಿಗೆ ಅಗತ್ಯ ಸಂದೇಶವನ್ನು ರವಾನಿಸಿದೆ. ಇನ್ನೊಂದೆಡೆ, ಕಾಂಗ್ರೆಸ್‌ನ ಅತೃಪ್ತ ಶಾಸಕರ ಜತೆ ಸಂಪರ್ಕ ಸಾಧಿಸಿ, ಅವರಲ್ಲಿ ಪ್ರಮುಖರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಮಿತ್ರಪಕ್ಷವಾಗಿರುವ ಡಿಎಂಕೆ ಸಹ ಮೈತ್ರಿಯಿಂದ ದೂರ ಸರಿಯುವ ಹೇಳಿಕೆ ನೀಡಿರುವುದು ಕಾಂಗ್ರೆಸ್‌ಗೆ ಹೊಸ ಸಮಸ್ಯೆಯನ್ನು ಸೃಷ್ಟಿಸಿದ್ದರೆ, ಇದು ಸಹ ತಮಗೆ ಲಾಭವಾಗಿ ಪರಿಣಮಿಸಬಹುದು ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT