ಬುಧವಾರ, ಜನವರಿ 27, 2021
16 °C

ಕಂಗನಾ 'ಓಲೈಕೆ' ಟ್ವೀಟ್‌‌: ಬಿಜೆಪಿ ವಿರುದ್ಧ ಕಾಂಗ್ರೆಸ್‌, ಎನ್‌ಸಿಪಿ ವಾಗ್ದಾಳಿ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಮುಂಬೈ: ಬಾಲಿವುಡ್‌ ನಟಿ ಕಂಗನಾ ರನೌತ್‌ ಅವರ 'ಓಲೈಕೆ' ಟ್ವೀಟ್‌ಗೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಕಾಂಗ್ರೆಸ್‌ ಮತ್ತು ಎನ್‌ಸಿಪಿ ಪಕ್ಷಗಳು ತೀವ್ರ ವಾಗ್ದಾಳಿ ನಡೆಸಿವೆ.

ಬಿಜೆಪಿಯನ್ನು ಓಲೈಸಲು ಮುಂದಾದ ನನ್ನ ಮೇಲೆ 25 ರಿಂದ 30 ಪ್ರಕರಣಗಳು ದಾಖಲಾಗಿವೆ ಎಂದು ಕಂಗನಾ ರನೌತ್‌ ಟ್ವೀಟ್‌ ಮಾಡಿದ್ದರು. ಈ ವಿಚಾರವಾಗಿ ಬಿಜೆಪಿ ವಿರುದ್ಧ ಹರಿಹಾಯ್ದಿರುವ ಮಹಾರಾಷ್ಟ್ರದ ಕಾಂಗ್ರೆಸ್‌ ಹಾಗೂ ಎನ್‌ಸಿಪಿ ನಾಯಕರು, 'ಬಿಜೆಪಿಯ ನಿರ್ದೇಶನದ ಮೇರೆಗೆ ನಟಿ ಕಂಗನಾ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕಾರ್ಯಚರಣೆ ಕೈಗೊಂಡಿದ್ದಾರೆ. ಇದಕ್ಕೆ ಅವರು ಮಾಡಿರುವ ಟ್ವೀಟ್‌ ಸಾಕ್ಷಿಯಾಗಿದೆ' ಎಂದು ಆರೋಪಿಸಿದ್ದಾರೆ.

'ಈ ವಿಚಾರದಲ್ಲಿ ಬಿಜೆಪಿಯು ಪಾಪವನ್ನು ಎಸಗಿದೆ. ಮಹಾರಾಷ್ಟ್ರದ ಜನರಲ್ಲಿ ಕ್ಷಮೆಯಾಚಿಸಿದರೂ ಬಿಜೆಪಿ ತನ್ನ ಪಾಪವನ್ನು ತೊಳೆದುಕೊಳ್ಳಲು ಸಾಧ್ಯವಿಲ್ಲ' ಎಂದು ಕಾಂಗ್ರೆಸ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಸಚಿನ್ ಸಾವಂತ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ತಾವು ಬಿಜೆಪಿಯನ್ನು ಓಲೈಸುತ್ತಿರುವುದಾಗಿ ಸ್ವತಃ ರನೌತ್ ಒಪ್ಪಿಕೊಂಡಿದ್ದಾರೆ. ಮುಂಬೈ ಪೊಲೀಸರು ಮತ್ತು ಮಹಾರಾಷ್ಟ್ರದ ಹೆಸರು ಕೆಡಿಸುವ ಪಿತೂರಿಯ ಹಿಂದೆ ಬಿಜೆಪಿ ಇದೆ ಎಂದು ಇದರಿಂದ ಸಾಬೀತಾಗಿದೆ. ಮಹಾರಾಷ್ಟ್ರದ ಜನರಲ್ಲಿ ಕ್ಷಮೆಯಾಚಿಸಿದರೂ ಬಿಜೆಪಿ ತನ್ನ ಪಾಪವನ್ನು ತೊಳೆದುಕೊಳ್ಳಲು ಸಾಧ್ಯವಿಲ್ಲ. ನಾವು ಬಿಜೆಪಿಯನ್ನು ಖಂಡಿಸುತ್ತೇವೆ' ಎಂದು ಸಾವಂತ್‌ ತಿಳಿಸಿದ್ದಾರೆ.

'ಬಿಜೆಪಿಯನ್ನು ಓಲೈಸಲು ಮಹಾರಾಷ್ಟ್ರ ಸರ್ಕಾರವನ್ನು ಗುರಿಯಾಗಿಸಿಕೊಂಡಿದ್ದಾಗಿ ಕಂಗನಾ ಅವರು ನಿಸ್ಸಂಶಯವಾಗಿ ಒಪ್ಪಿಕೊಂಡಿದ್ದಾರೆ. ಹಾಗೆ ಮಾಡುವ ಮೂಲಕ ಅವರು ಬಿಜೆಪಿ ಕಾರ್ಯಸೂಚಿಯನ್ನು ಬಹಿರಂಗಪಡಿಸಿದ್ದಾರೆ. ಈ ಕಾರಣಕ್ಕಾಗಿ ನಾವು ಅವರನ್ನು ಅಭಿನಂದಿಸಬೇಕು.ಈಗ ಮಹಾರಾಷ್ಟ್ರದ ಜನರು ಬಿಜೆಪಿ ಎಸಗಿದ ದ್ರೋಹದ ಬಗ್ಗೆ ನಿರ್ಧರಿಸಲಿದ್ದಾರೆ' ಎಂದು ಎನ್‌ಸಿಪಿ ಮುಖಂಡ ರೋಹಿತ್‌ ಪವಾರ್‌ ಟ್ವೀಟ್‌ ಮಾಡಿದ್ದಾರೆ.

ಊರ್ಮಿಳಾ ಅವರು ಹೊಸ ಬಂಗಲೆ ಖರೀದಿಸಿರುವ ವರದಿಯೊಂದರ ಸ್ಕ್ರೀನ್‌ಶಾಟ್‌ ಅನ್ನು ಕಂಗನಾ ರನೌತ್‌ ಭಾನುವಾರ ಟ್ವೀಟಿಸಿದ್ದರು. 'ಊರ್ಮಿಳಾ ಅವರೇ, ನಾನು ಕಷ್ಟಪಟ್ಟು ದುಡ್ಡು ಸಂಪಾದಿಸಿದ್ದೇನೆ. ಅದರಿಂದ ನಿರ್ಮಿಸಿರುವ ಮನೆಯನ್ನು ಕಾಂಗ್ರೆಸ್‌ ಪಕ್ಷವು ಧ್ವಂಸಗೊಳಿಸಿತು. ನಾನು ಬಿಜೆಪಿಯನ್ನು ಓಲೈಸಲು ಹೋಗಿ ನನ್ನ ಮೇಲೆ 25 ರಿಂದ 30 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದೇನೆ. ನಿಮ್ಮ ಹಾಗೆ ನಾನೂ ಸಹ ಬುದ್ದಿವಂತೆಯಾಗಿದ್ದರೆ, ಕಾಂಗ್ರೆಸ್‌ ಅನ್ನು ಓಲೈಸಲು ಬಯಸುತ್ತಿದ್ದೆ. ನಾನು ಅದೆಷ್ಟು ಮೂರ್ಖಳು ಅಲ್ಲವೇ?' ಎಂದು ಅದೇ ಟ್ವೀಟ್‌ನಲ್ಲಿ ಬರೆದುಕೊಂಡಿದ್ದರು.

ಇದಕ್ಕೆ ತಿರುಗೇಟು ನೀಡಿದ್ದ ಊರ್ಮಿಳಾ ಮಾತೋಂಡ್ಕರ್‌, 'ನನ್ನ ಹೊಸ ಮನೆಯೂ ಸಹ ನಾನು ಕಷ್ಟಪಟ್ಟು ಸಂಪಾದಿಸಿದ ದುಡ್ಡಿನಲ್ಲಿ ಖರೀದಿಸಿದ್ದು. ಇದಕ್ಕೆ ನನ್ನ ಬಳಿ ಎಲ್ಲ ರೀತಿಯ ಪುರಾವೆಗಳಿವೆ. ನೀವು ಬೇಕಾದರೆ, ಸ್ಥಳವನ್ನು ನಿಗದಿಪಡಿಸಿ. ಅಲ್ಲಿಗೆ ಬಂದು ನಿಮ್ಮೊಂದಿಗೆ ಚರ್ಚಿಸಿ, ಎಲ್ಲ ಪುರಾವೆಗಳನ್ನು ನಿಮ್ಮ ಮುಂದೆ ಇರಿಸುತ್ತೇನೆ' ಎಂದು ವಿಡಿಯೊ ಟ್ವೀಟ್‌ ಮಾಡಿದ್ದಾರೆ.

ಇದೇ ವೇಳೆ, ಕಂಗನಾ ಅವರಿಗೆ ನೀಡಿರುವ ವೈ-ಪ್ಲಸ್‌ ಭದ್ರತೆಯ ಬಗ್ಗೆ ಮಾತನಾಡಿರುವ ಊರ್ಮಿಳಾ,'ಇದು ಕೋಟ್ಯಾಂತರ ಜನರು ಸರ್ಕಾರಕ್ಕೆ ನೀಡಿದ ತೆರಿಗೆ ಹಣ' ಎಂದು ಟೀಕಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು