ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಯನ್ನು ಕ್ಷಮಿಸದಿರಿ: ಪ್ರಿಯಾಂಕಾ

ಮೊರಾದಾಬಾದ್‌ನಲ್ಲಿ ಗುರುವಾರ ಸಾರ್ವಜನಿಕ ರ‍್ಯಾಲಿ: ಬಿಜೆಪಿ ವಿರುದ್ಧ ವಾಗ್ದಾಳಿ
Last Updated 2 ಡಿಸೆಂಬರ್ 2021, 19:41 IST
ಅಕ್ಷರ ಗಾತ್ರ

ಲಖನೌ: ರೈತರ ಮೇಲೆ ನಡೆಸಿದ ದಬ್ಬಾಳಿಕೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕ್ಷಮಿಸಬೇಡಿ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮೊರಾದಾಬಾದ್‌ನಲ್ಲಿ ಗುರುವಾರ ನಡೆದ ಸಾರ್ವಜನಿಕ ರ‍್ಯಾಲಿಯಲ್ಲಿ ಹೇಳಿದರು.

‘ರೈತರನ್ನು ದಿನವೂ ಅಪಮಾನ ಮಾಡಿದರು. ದೇಶದ್ರೋಹಿ, ಆಂದೋಲನ ಜೀವಿ ಮತ್ತು ಖಲಿಸ್ತಾನಿ ಎಂದು ಕರೆದರು. ಚುನಾವಣೆ ಸನ್ನಿಹಿತ ಆಗುತ್ತಿರುವುದರಿಂದ ಈಗ ಕ್ಷಮೆ ಕೇಳಿದ್ದಾರೆ. ನೀವು ಏಕೆ ಅವರನ್ನು ಕ್ಷಮಿಸಬೇಕು. ಅವರ ತಪ್ಪಿಗೆ ಅವರನ್ನು ಹೊಣೆಯನ್ನಾಗಿಸಿ’ ಎಂದರು.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಜೆಪಿ ಸರ್ಕಾರಗಳು ಅಭಿವೃದ್ಧಿ ಕುರಿತು ಯೋಚಿಸುವುದಿಲ್ಲ. ಧರ್ಮ ಮತ್ತು ಜಾತಿಯ ಆಧಾರದ ಮೇಲೆ ಜನರನ್ನು ಒಡೆದು ತಾವು ಅಧಿಕಾರಕ್ಕೆ ಬರಬಹುದು ಎಂದು ಅವರು ಭಾವಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಕೋಮುವಾದ ಮತ್ತು ಜಾತಿ ಆಧಾರಿತ ರಾಜಕೀಯಕ್ಕೆ ಆದ್ಯತೆ ಸಿಗುತ್ತದೆ. ರಾಜ್ಯವನ್ನು ಅಭಿವೃದ್ಧಿಪಡಿಸಬೇಕಿಲ್ಲ, ಧರ್ಮ ಮತ್ತು ಜಾತಿ ಬಳಸಿಕೊಂಡು ಚುನಾವಣೆ ಗೆಲ್ಲಬಹುದು ಎಂದು ಮುಖ್ಯಮಂತ್ರಿಗೆ ತಿಳಿದಿದೆ. ನೀವು ಅದನ್ನು ಬದಲಿಸಬೇಕು ಎಂದು ಎಂದರು.

ಹಿತ್ತಾಳೆ ಸಾಮಾಗ್ರಿಗಳನ್ನು ರಫ್ತು ಮಾಡಲು ಹೆಸರವಾಸಿ ಆಗಿದ್ದ ಕಾರಣ ‘ಹಿತ್ತಾಳೆ ನಗರ’ ಎಂದು ಕರೆಯಲಾಗುವ ಮೊರಾದಾಬಾದ್ ನಗರದ ಕುರಿತು ಅವರು ಭಾವನಾತ್ಮಕವಾಗಿ ಮಾತನಾಡಿದರು. ಒಂದು ಕಾಲದಲ್ಲಿ ಅಭಿವೃದ್ಧಿ ಹೊಂದಿದ್ದ ನಗರವಾದ ಮೊರಾದಾಬಾದ್‌ನಲ್ಲಿ ಈಗ ವಾಣಿಜ್ಯ ವ್ಯವಹಾರಗಳು ಸ್ಥಗಿತಗೊಂಡಿವೆ. ನಿರುದ್ಯೋಗ ಸಮಸ್ಯೆ ಕಾಡುತ್ತಿದೆ ಎಂದರು. ತಪ್ಪು ಆರ್ಥಿಕ ನೀತಿಗಳಿಂದ, ರಾಜ್ಯ ಮತ್ತು ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದ ಈ ನಗರ ಈ ಸ್ಥಿತಿ ತಲುಪಿದೆ ಎಂದರು.

ಎಸ್‌ಪಿ, ಬಿಎಸ್‌ಪಿ ವಿರುದ್ಧ ವಾಗ್ದಾಳಿ: ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಮತ್ತು ಎಸ್‌ಪಿ ಅಧ್ಯಕ್ಷ ಅಖಿಲೇಶ್‌ ಯಾದವ್‌ ಅವರ ವಿರುದ್ಧಪ್ರಿಯಾಂಕಾಇದೇ ಮೊದಲ ಬಾರಿಗೆ ವಾಗ್ದಾಳಿ ನಡೆಸಿದ್ದಾರೆ. ಈ ಇಬ್ಬರು ನಾಯಕರು ಬಿಜೆಪಿಯ ನಾಯಕರು ಮಾತನಾಡುವ ರೀತಿಯಲ್ಲೇ ಮಾತನಾಡುತ್ತಿದ್ದಾರೆ. ಅವರು ಕೂಡಾ ಧರ್ಮ ಮತ್ತು ಜಾತಿ ಆಧಾರಿತ ರಾಜಕೀಯದಲ್ಲಿ ತೊಡಗಿದ್ದಾರೆ. ಹಾಥರಸ್‌ನಲ್ಲಿ ದಲಿತ ಬಾಲಕಿಯ ಮೇಲೆ ಅತ್ಯಾಚಾರ ನಡೆದಾಗ ಮತ್ತು ಸಿಎಎ ಹೋರಾಟಗಾರರನ್ನು ಪೊಲೀಸರು ಗುಂಡಿಕ್ಕಿ ಕೊಂದಾಗಅಖಿಲೇಶ್‌ ಎಲ್ಲಿದ್ದರು. ಸಂತ್ರಸ್ತರ ಕುಟುಂಬಗಳನ್ನು ಅವರು ಭೇಟಿ ಮಾಡಿದ್ದಾರಾ? ಈಗೇಕೆ ಜನರ ಬಳಿ ಹೋಗುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಕೃಷ್ಣ ಜನ್ಮಭೂಮಿ ಮುನ್ನೆಲೆಗೆ

ಲಖನೌ: ‘ಅಯೋಧ್ಯೆ, ಕಾಶಿಯಲ್ಲಿ ಭವ್ಯ ಮಂದಿರ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ, ಮಥುರಾದಲ್ಲೂ ತಯಾರಿ ನಡೆಯತ್ತಿದೆ’ ಎಂಬುದಾಗಿ ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಮತ್ತು ಬಿಜೆಪಿ ಮುಖಂಡ ಕೇಶವ ಪ್ರಸಾದ್ ಮೌರ್ಯ ಅವರು ನೀಡಿದ್ದ ಹೇಳಿಕೆಯು ಚುನಾವಣೆ ನಡೆಯಲಿರುವ ಉತ್ತರ ಪ್ರದೇಶದಲ್ಲಿ ರಾಜಕೀಯ ಬಿಸಿಯೇರಿಸಿದೆ. ಮೌರ್ಯ ಹೇಳಿಕೆ ಬಗ್ಗೆ ನಿಲುವು ಸ್ಪಷ್ಟಪಡಿಸಬೇಕು ಎಂದು ಪ್ರತಿಪಕ್ಷಗಳು ಬಿಜೆಪಿಯನ್ನು ಒತ್ತಾಯಿಸಿವೆ.

‘ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ವಾಸನೆ ಬಿಜೆಪಿಗೆ ಸಿಕ್ಕಿದೆ. ಹೀಗಾಗಿ ಮಥುರಾದಲ್ಲಿ ಮಂದಿರ ನಿರ್ಮಾಣದಕೊನೆಯ ಅಸ್ತ್ರ ಪ್ರಯೋಗಿಸಿದೆ. ಆದರೆ ಬಿಜೆಪಿಯ ಈ ಆಟದ ಅರಿವು ರಾಜ್ಯದ ಜನರಿಗೆ ಇದೆ’ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.

‘ಇದು ಬಿಜೆಪಿಯ ಚುನಾವಣಾ ತಂತ್ರಗಾರಿಕೆ ಎಂಬುದು ನಮಗೆ ಗೊತ್ತಿದೆ. ಬಿಜೆಪಿಯವರು ಹೆಣೆದಿರುವ ಬಲೆಗೆ ನಾವು ಬೀಳುವುದಿಲ್ಲ. ಈ ವಿಚಾರವು ಕೋರ್ಟ್‌ಗೆ ತಲುಪಿದ್ದು, ತೀರ್ಪಿಗಾಗಿ ನಾವೆಲ್ಲರೂ ಕಾಯಬೇಕು’ ಎಂದು ಸಮಾಜವಾದಿ ಪಕ್ಷದ ಹಿರಿಯ ಮುಖಂಡರೊಬ್ಬರು ಮೌರ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.

‘ತಾವು ಶ್ರೀಕೃಷ್ಣನ ಭಕ್ತ ಎಂದು ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಸದಾ ಹೇಳುತ್ತಾರೆ. ಮಥುರಾದಲ್ಲಿ ಶ್ರೀಕೃಷ್ಣನ ಮಂದಿರ ಬೇಕೇ, ಬೇಡವೇ ಎಂದು ಅವರು ಬಹಿರಂಗಪಡಿಸಬೇಕು’ ಎಂದುಎಎಪಿ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಒತ್ತಾಯಿಸಿದ್ದಾರೆ.

‘ಮಥುರಾವು ಬಿಜೆಪಿ ಪಾಲಿಗೆ ರಾಜಕೀಯ ವಿಷಯವಲ್ಲ.ಅಯೋಧ್ಯೆ, ಕಾಶಿ, ಮಥುರಾಗಳು ಹಿಂದೂಗಳ ನಂಬಿಕೆಯ ವಿಚಾರಗಳು’ ಎಂದು ಮೌರ್ಯ ಹೇಳಿದ್ದರು.

ಮುಂಬರುವ ಚುನಾವಣೆಯಲ್ಲಿ ‘ಹಿಂದುತ್ವ’ವು ಪಕ್ಷದ ಪ್ರಮುಖ ವಿಷಯ ಎಂಬ ಸುಳಿವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೇರಿದಂತೆ ಹಲವು ಬಿಜೆಪಿ ನಾಯಕರು ನೀಡಿದ್ದರು. ವಿರೋಧ ಪಕ್ಷಗಳನ್ನು ಮುಸ್ಲಿಂ ಪರ ನಿಲುವಿನ ಪಕ್ಷಗಳು ಎಂದು ಬಿಂಬಿಸಲು ಯೋಗಿ ಅವರು ಸಾರ್ವಜನಿಕ ಸಮಾರಂಭಗಳಲ್ಲಿ ಯತ್ನಿಸಿದ್ದರು.

* ನಾಲ್ಕೂವರೆ ವರ್ಷ ಕಾಶಿ, ಮಥುರಾ ಬಗ್ಗೆ ತಲೆಕೆಡಿಸಿಕೊಳ್ಳದ ಬಿಜೆಪಿಯು ಚುನಾವಣೆ ಹೊಸ್ತಿಲಲ್ಲಿ ಈ ವಿಚಾರಗಳನ್ನು ಪ್ರಸ್ತಾಪಿಸಿದೆ. ಇದು ಧರ್ಮದ ಆಧಾರದಲ್ಲಿ ಜನರನ್ನು ವಿಭಜಿಸುವ ಯತ್ನ.

–ಸಂಜಯ್ ಸಿಂಗ್,ಎಎಪಿ ರಾಜ್ಯಸಭಾ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT