ಹಳೆ ಪಿಂಚಣಿ ಯೋಜನೆ ಜಾರಿ: ಕಾಂಗ್ರೆಸ್ ಭರವಸೆ

ಅಗರ್ತಲಾ: ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ, 50 ಸಾವಿರದಷ್ಟು ಉದ್ಯೋಗ ಸೃಷ್ಟಿ, ಕೃಷಿ ಕಾರ್ಮಿಕರಿಗೆ ಹೆಚ್ಚಿನ ಕೂಲಿ ಹಣ ಹಾಗೂ 150 ಯೂನಿಟ್ ಉಚಿತ ವಿದ್ಯುತ್– ಇವು ತ್ರಿಪುರಾದಲ್ಲಿ ಅಧಿಕಾರ ಹಿಡಿಯಲು ಮತದಾರರಿಗೆ ಕಾಂಗ್ರೆಸ್ ನೀಡಿರುವ ಭರವಸೆಗಳು.
ಕಾಂಗ್ರೆಸ್‌ನ ಹಿರಿಯ ಮುಖಂಡ ಹಾಗೂ ತ್ರಿಪುರಾದ ಕಾಂಗ್ರೆಸ್‌ನ ಏಕೈಕ ಶಾಸಕ ಸುದೀಪ್ ರಾಯ್ ಬರ್ಮನ್ ಅವರು ಪ್ರಣಾಳಿಕೆ ಬಿಡುಗಡೆ ವೇಳೆ ಮಾತನಾಡಿ, ‘ಉದ್ಯೋಗ ಸೃಷ್ಟಿ, ನೌಕರರ ಅಭ್ಯುದಯ, ಬಡವರು ಹಾಗೂ ಮಧ್ಯಮವರ್ಗದ ಜನರನ್ನು ಕೇಂದ್ರೀಕರಿಸಿ ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗಿದೆ’ ಎಂದರು.
‘ಬಡವರು ಹಾಗೂ ಮಧ್ಯಮ ವರ್ಗದವರ ಅಭಿವೃದ್ಧಿಗಾಗಿ 20 ಅಂಶದ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ಸರ್ಕಾರಿ ವಲಯವೂ ಸೇರಿದಂತೆ ಒಟ್ಟು 50 ಸಾವಿರ ಉದ್ಯೋಗ ಸೃಷ್ಟಿಸಲಾಗುವುದು’ ಎಂದಿದ್ದಾರೆ.
‘ತ್ರಿಪುರಾದಲ್ಲಿ ಅಧಿಕಾರಕ್ಕೆ ಬಂದರೆ, ನೌಕರಿಗೆ ಹಳೆ ಪಿಂಚಣಿ ಯೋಜನೆಯನ್ನು ಪುನಃ ಪ್ರಾರಂಭಿಸಲಾಗುವುದು. ಜೊತೆಗೆ ವರ್ಷಕ್ಕೆ ಎರಡು ಬಾರಿ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ನೀಡಲಾಗುವುದು’ ಎಂದು ಭರವಸೆ ನೀಡಿದರು.
ಕಾಂಗ್ರೆಸ್ ಹಾಗೂ ಸಿಪಿಎಂ ಚುನಾವಣಾ ಪೂರ್ಚ ಮೈತ್ರಿ ಮಾಡಿಕೊಂಡಿದ್ದು, 60 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 13 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ.
‘ಆದಿವಾಸಿಗಳ ಅಭ್ಯುದಯಕ್ಕೆ ಒತ್ತು’
* ಸಂವಿಧಾನದ 125ನೇ ತಿದ್ದುಪಡಿ ಮೂಲಕ ತ್ರಿಪುರ ಆದಿವಾಸಿ ಪ್ರದೇಶ ಸ್ವಾಯತ್ತ ಜಿಲ್ಲಾ ಮಂಡಳಿ (ಟಿಟಿಎಎಡಿಸಿ) ಅಭಿವೃದ್ಧಿಗೆ ಒತ್ತು. ಬಡ ಆದಿವಾಸಿ ಜನರ ಅಭ್ಯುದಯಕ್ಕೆ ವಿಶೇಷ ಪ್ಯಾಕೇಜ್
* ಗ್ರಾಹಕ ಬೆಲೆ ಸೂಚ್ಯಂಕದ ಅನುಗುಣವಾಗಿ ಚಹಾ ತೋಟದಲ್ಲಿನ ಕಾರ್ಮಿಕರು ಸೇರಿದಂತೆ ವಿವಿಧ ಕೃಷಿ ಕಾರ್ಮಿಕರ ಕೂಲಿ ಹಣದಲ್ಲಿ ಹೆಚ್ಚಳ
* ಅಲ್ಪಸಂಖ್ಯಾತರ ಸಾಮಾಜಿಕ–ಆರ್ಥಿಕ ಬೆಳವಣಿಗೆಗೆ ಪ್ಯಾಕೇಜ್
* ಕೆಲಸದಿಂದ ಕೈಬಿಡಲಾದ 10,323 ಶಿಕ್ಷಕರಿಗೆ ಹಾಗೂ ಎಸ್‌ಎಸ್‌ಎ ಶಿಕ್ಷಕರಿಗೆ ಉತ್ತಮ ಸಂಭಾವನೆ
* ವಿದ್ಯುತ್ ಕಳ್ಳತನಕ್ಕೆ ಕಡಿವಾಣ ಹಾಗೂ ವಿದ್ಯುತ್ ವಿತರಣೆಯಲ್ಲಿನ ನಷ್ಟಕ್ಕೆ ತಡೆ. ಜೊತೆಗೆ, 150 ಯುನಿಟ್ ಉಚಿತ ವಿದ್ಯುತ್
‘ಕಾಂಗ್ರೆಸ್ ‘ಅಂಧಕಾರ’ ನೀಡಿತು, ನಾವು ‘ಅಧಿಕಾರ’ ನೀಡಿದ್ದೇವೆ’
ಅಮಿತ್ ಶಾ ಟೀಕೆ
‘ಕಾಂಗ್ರೆಸ್ ಹಾಗೂ ಸಿಪಿಎಂ ಪಕ್ಷಗಳು ತ್ರಿಪುರಾವನ್ನು ಸುಮಾರು 50 ವರ್ಷಗಳ ಕಾಲ ಆಳಿದೆ. ಹಾಗಿದ್ದರೂ, ರಾಜ್ಯದ ಅಭಿವೃದ್ಧಿ ಆಗಿಲ್ಲ. ಕಾಂಗ್ರೆಸ್ ನಿಮಗೆ ‘ಅಂಧಕಾರ’ ನೀಡಿದೆ. ಆದರೆ, ಬಿಜೆಪಿಯು ನಿಮಗೆ ‘ಅಧಿಕಾರ’ (ಹಕ್ಕು) ನೀಡಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಹೇಳಿದ್ದಾರೆ.
ಇಲ್ಲಿ ನಡೆದ ಸಾರ್ವಜನಿಕ ರ್‍ಯಾಲಿಯಲ್ಲಿ ಮಾತನಾಡಿದ ಅವರು, ‘ರಾಜವಂಶಸ್ಥ ಪ್ರದ್ಯೋತ್ ಮಾಣಿಕ್ಯ ದೇಬಬರ್ಮಾ ಅವರ ನೇತೃತ್ವದ ಟಿಪ್ರಮೋಥಾ ಪಕ್ಷವು ಕಾಂಗ್ರೆಸ್ ಹಾಗೂ ಸಿಪಿಎಂನೊಂದಿಗೆ ‘ರಹಸ್ಯ ಹೊಂದಾಣಿಕೆ’ ಮಾಡಿಕೊಂಡಿದೆ. ಜೊತೆಗೆ, ಕ್ಷೇತ್ರ ಹೊಂದಾಣಿಕೆ ಮಾಡಿಕೊಂಡಿರುವ ಕಾಂಗ್ರೆಸ್ ಹಾಗೂ ಸಿಪಿಎಂ ಪಕ್ಷಗಳು ಎಂದಿಗೂ ಆದಿವಾಸಿಗಳನ್ನು ಗೌರವಿಸಿಲ್ಲ’ ಎಂದೂ ಆರೋಪಿಸಿದ್ದಾರೆ.
ಗಡಿಯಾಚೆಗಿನಿಂದ ಒಳನುಸುಳುವಿಕೆ, ಭಯೋತ್ಪಾದನೆ ತಡೆದ ಬಿಜೆಪಿಯ ಇಬ್ಬರು ಮುಖ್ಯಮಂತ್ರಿಗಳು ಕಳೆದ ಐದು ವರ್ಷಗಳಲ್ಲಿ ತ್ರಿಪುರಾ ರಕ್ಷಣೆಗೆ ಬದ್ಧತೆ ತೋರಿದ್ದಾರೆ
ಅಮಿತ್ ಶಾ, ಕೇಂದ್ರ ಗೃಹ ಸಚಿವ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.