ಬುಧವಾರ, ಅಕ್ಟೋಬರ್ 28, 2020
20 °C
ಕೇಂದ್ರ ಶಿಕ್ಷಣ ಸಚಿವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಕಾರರು

ಜೆಇಇ, ನೀಟ್ ಮುಂದೂಡಲು ಕಾಂಗ್ರೆಸ್ ಒತ್ತಾಯ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ/ಚಂಡೀಗಡ (ಪಿಟಿಐ): ಜೆಇಇ ಮತ್ತು ನೀಟ್ ಪರೀಕ್ಷೆಯನ್ನು ಮುಂದೂಡಲು ಒತ್ತಾಯಿಸಿ ಕಾಂಗ್ರೆಸ್ ಪಕ್ಷ ಮತ್ತು ಪಕ್ಷದ ಯುವ ಘಟಕಗಳು ಶುಕ್ರವಾರ ದೆಹಲಿ, ಹರಿಯಾಣ, ಪಂಜಾಬ್, ರಾಜಸ್ಥಾನ ಸೇರಿದಂತೆ ದೇಶದ ವಿವಿಧೆಡೆ ಪ್ರತಿಭಟನೆ ನಡೆಸಿದವು.

ಹರಿಯಾಣದ ವಿವಿಧೆಡೆ ಪ್ರತಿಭಟನೆ ನಡೆದಿದ್ದು ಕಾರ್ಯಕರ್ತರು ಭಿವಾನಿಯಲ್ಲಿ ಕೇಂದ್ರ ಶಿಕ್ಷಣ ಸಚಿವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಕೋವಿಡ್ ಸ್ಥಿತಿಯಲ್ಲೂ ಪರೀಕ್ಷೆ ನಡೆಸುವ ಆತುರ ಏಕೆ ಎಂದು ಪ್ರಶ್ನಿಸಿದರು. ರಾಜಸ್ಥಾನದಲ್ಲಿ ನಡೆದ ಪ್ರತಿಭಟನೆಯ ನೇತೃತ್ವವನ್ನು ಸಾರಿಗೆ ಸಚಿವ ಪ್ರತಾಪ್ ಸಿಂಗ್ ಕಚಾರಿಯವಸ್ ವಹಿಸಿದ್ದು, ವಿವಿಧ ಮುಖಂಡರು ಭಾಗವಹಿಸಿದ್ದರು.  ಲಕ್ಷಾಂತರ ಮಂದಿ ಯುವಕರ ಆರೋಗ್ಯವನ್ನು ಬದಿಗೊತ್ತಿ ಕೇಂದ್ರ ಪರೀಕ್ಷೆಯನ್ನು ನಡೆಸುವ ಹಟ ತೊಟ್ಟಂತಿದೆ. ಕೂಡಲೇ ಪರೀಕ್ಷೆಯನ್ನು ಮುಂದೂಡಬೇಕು ಎಂದು ಒತ್ತಾಯಿಸಿದರು.

‘ವಿದ್ಯಾರ್ಥಿಗಳ ಜೊತೆಗೂ ಚರ್ಚಿಸಿ’

ಜೆಇಇ ಮತ್ತು ನೀಟ್ ಪರೀಕ್ಷೆಗಳನ್ನು ನಡೆಸುವ ನಿರ್ಧಾರ ಕುರಿತಂತೆ ವಿದ್ಯಾರ್ಥಿಗಳ ಜೊತೆಗೂ ಚರ್ಚಿಸಿ ಸಹಮತಕ್ಕೆ ಬರಬೇಕು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮುಖಂಡ ರಾಹುಲ್ ಗಾಂಧಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಈ ಕುರಿತು ಅವರು ಪ್ರತ್ಯೇಕವಾಗಿ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷ ಸೇರಿ ವಿವಿಧ ಪಕ್ಷಗಳು ಕೋವಿಡ್ ಸ್ಥಿತಿ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ಮುಂದೂಡಲು ಆಗ್ರಹಪಡಿಸಿವೆ. ಆದರೆ, ವಿರೋಧದ ನಡುವೆಯೂ ನಿಗದಿಯಂತೆ ಪರೀಕ್ಷೆಗಳು ನಡೆಯಲಿವೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಪರೀಕ್ಷೆ ಮುಂದೂಡಲು ಒತ್ತಾಯಿಸಿ ಕಾಂಗ್ರೆಸ್ ದಿನಪೂರ್ತಿ ಅಭಿಯಾನ ನಡೆಸಿತು. ಇದರ ಅಂಗವಾಗಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ವಿದ್ಯಾರ್ಥಿಗಳನ್ನು ಬೆಂಬಲಿಸುವ ವಿಡಿಯೊ ಹಂಚಿಕೊಂಡಿದ್ದಾರೆ.

‘ನೀವು ಪ್ರಮುಖ ಬೇಡಿಕೆ ಕುರಿತಂತೆ ಹೋರಾಟ ನಡೆಸುತ್ತಿದ್ದೀರಿ. ಇದು, ನಿಮಗಷ್ಟೇ ಅಲ್ಲ, ನಿಮ್ಮ ಕುಟುಂಬದ ದೃಷ್ಟಿಯಿಂದಲೂ ಮುಖ್ಯವಾದುದು’ ಎಂದು ಸೋನಿಯಾಗಾಂಧಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು