ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮ್ಯಾನ್ಮಾರ್‌: ಬಂಧಿತ ನಾಯಕರ ಬಿಡುಗಡೆಗೆ ಭಾರತ ಒತ್ತಾಯ

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆ
Last Updated 1 ಮೇ 2021, 8:22 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ:‘ಬಂಧಿತ ರಾಜಕೀಯ ನಾಯಕರನ್ನು ಮ್ಯಾನ್ಮಾರ್‌ ಸೇನೆ ಕೂಡಲೇ ಬಿಡುಗಡೆ ಮಾಡಬೇಕು. ದೇಶದಲ್ಲಿ ಹಿಂಸಾಚಾರವನ್ನು ಅಂತ್ಯಗೊಳಿಸಬೇಕು ಎಂಬುದು ಭಾರತದ ಒತ್ತಾಯವಾಗಿದೆ. ಈ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ’ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿಯಾಗಿರುವ ಟಿ.ಎಸ್‌ ತಿರುಮೂರ್ತಿ ಹೇಳಿದರು.

‘ಮ್ಯಾನ್ಮಾರ್‌ ಕುರಿತಾಗಿ ಆಸಿಯಾನ್‌ ಪ್ರಸ್ತಾಪಿಸಿರುವ ಐದು ಅಂಶಗಳನ್ನು ಭಾರತ ಸ್ವಾಗತಿಸುತ್ತದೆ. ವಿಶ್ವಸಂಸ್ಥೆ ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಹ ಆಸಿಯಾನ್‌ನ ನಿರ್ಧಾರಗಳನ್ನು ಬೆಂಬಲಿಸಬೇಕು’ ಎಂದು ಅವರು ತಿಳಿಸಿದರು.

ಮ್ಯಾನ್ಮಾರ್‌ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 15 ಸದಸ್ಯ ರಾಷ್ಟ್ರಗಳು ನಡೆಸಿದ ಖಾಸಗಿ ಸಭೆಯಲ್ಲಿ ಭಾರತ ತನ್ನ ನಿಲುವನ್ನು ವ್ಯಕ್ತಪಡಿಸಿದೆ.

‘ಮ್ಯಾನ್ಮಾರ್‌ನಲ್ಲಿ ಹಿಂಸಾಚಾರವನ್ನು ನಿಲ್ಲಿಸಬೇಕು. ಜನರ ಹಿತಾಸಕ್ತಿಗಾಗಿ ಎಲ್ಲಾ ಪಕ್ಷಗಳು ರಚನಾತ್ಮಕ ಸಂವಾದವನ್ನು ನಡೆಸಿ, ಪರಿಹಾರವನ್ನು ಕಂಡುಕೊಳ್ಳಬೇಕು’ ಎಂದುಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ (ಆಸಿಯಾನ್‌) ಇತ್ತೀಚೆಗೆ ನಡೆಸಿದ್ದ ಶೃಂಗಸಭೆಯಲ್ಲಿ ಒತ್ತಾಯಿಸಿತ್ತು.

‘ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟದ (ಆಸಿಯಾನ್‌) ಉಪಕ್ರಮ ಮತ್ತು ಐದು ಅಂಶಗಳ ಒಮ್ಮತವನ್ನು ಭಾರತ ಸ್ವಾಗತಿಸಿದೆ’ ಎಂದು ಟಿ.ಎಸ್‌ ತಿರುಮೂರ್ತಿ ಅವರು ಟ್ವೀಟ್‌ ಮಾಡಿದ್ದಾರೆ.

ಮ್ಯಾನ್ಮಾರ್‌ನಲ್ಲಿ ಫೆಬ್ರುವರಿ 1 ರಂದು ಸೇನಾ ದಂಗೆ ನಂತರ, ನಾಯಕಿ ಆಂಗ್ ಸಾನ್ ಸೂಕಿ ಸೇರಿದಂತೆ ಇತರೆ ರಾಜಕೀಯ ನಾಯಕರನ್ನು ಬಂಧಿಸಲಾಗಿದೆ. ಅಲ್ಲದೆ, ಸೇನಾ ದಂಗೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದವರನ್ನು ಕೂಡ ಬಂಧಿಸಲಾಗಿದೆ. ಈ ವೇಳೆ ನಡೆದ ಹಿಂಸಾಚಾರದಲ್ಲಿ ನೂರಾರು ಮಂದಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT