ಶುಕ್ರವಾರ, ಮಾರ್ಚ್ 5, 2021
24 °C
ಮಹಾರಾಷ್ಟ್ರದಲ್ಲಿ ಹಲವು ನಿರ್ಬಂಧ: ಕಾರ್ಯಕ್ರಮ ರದ್ದುಗೊಳಿಸಿದ ರಾಜಕೀಯ ನಾಯಕರು

ಕೋವಿಡ್ ತಡೆಗೆ ಇನ್ನಷ್ಟು ಬಿಗಿ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಸರ್ಕಾರವು ಹೊಸದಾಗಿ ಕೆಲವು ನಿರ್ಬಂಧಗಳನ್ನು ಜಾರಿ ಮಾಡಿದೆ. ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.

ಭಾನುವಾರ ಒಂದೇ ದಿನ ರಾಜ್ಯದಲ್ಲಿ 6,971 ಹೊಸ ಸೋಂಕಿತರು ಪತ್ತೆಯಾಗಿದ್ದು, ಒಟ್ಟು ಸಂಖ್ಯೆ 21 ಲಕ್ಷಕ್ಕೆ ತಲುಪಿದೆ. ಎಲ್ಲ ರೀತಿಯ ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಭಾನುವಾರ ಆದೇಶಿಸಿದ್ದರು.

ಕಾರ್ಯಕ್ರಮ ರದ್ದು: ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ತಮ್ಮ ಎಲ್ಲ ಪೂರ್ವ ನಿಗದಿತ ಸಾರ್ವಜನಿಕ ಕಾರ್ಯಕ್ರಮಗಳನ್ನು ಸೋಮವಾರ ರದ್ದುಗೊಳಿಸಿದ್ದಾರೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯ ಮನವಿ ಮೇರೆಗೆ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸುತ್ತಿರುವುದಾಗಿ ಪವಾರ್ ಟ್ವೀಟ್ ಮಾಡಿದ್ದಾರೆ.

ನಾಗ್ಪುರದಲ್ಲಿ ಹಲವು ನಿರ್ಬಂಧ: ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ನಾಗ್ಪುರ ಜಿಲ್ಲೆಯಲ್ಲಿ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಸಚಿವ ನಿತಿನ್ ರಾವುತ್  ತಿಳಿಸಿದ್ದಾರೆ. ಶಾಲೆಗಳು, ಕಾಲೇಜುಗಳು, ಕೋಚಿಂಗ್ ಕೇಂದ್ರಗಳು ಮಾರ್ಚ್ 7ರವರೆಗೆ ಮುಚ್ಚಲಿವೆ.

ಇಬ್ಬರ ಬಂಧನ: ಕೋವಿಡ್ ನಿಯಮಾವಳಿಯನ್ನು ಉಲ್ಲಂಘಿಸಿದ ಆರೋಪದ ಮೇಲೆ ಮುಂಬೈನ ಚೆಂಬೂರ್ ಪ್ರದೇಶದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. 150ಕ್ಕಿಂತ ಹೆಚ್ಚು ಜನರು ಸೇರಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಜಿಮ್ಖಾನಾ ಕಾರ್ಯದರ್ಶಿ ಹಾಗೂ ಸಹಾಯಕನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಎರಡು ದಿನಗಳ ಅವಧಿಯಲ್ಲಿ ಪಾಲ್ಘರ್ ಜಿಲ್ಲೆಯಲ್ಲಿ ಮಾಸ್ಕ್ ಧರಿಸದ 189 ಜನರಿಂದ ₹36,000 ವಸೂಲಿ ಮಾಡಲಾಗಿದೆ.

ಅಮಿತ್ ಶಾ ಪರಿಶೀಲನೆ: ಕೆಲವು ರಾಜ್ಯಗಳಲ್ಲಿ ಪ್ರಕರಣಗಳು ಏರಿಕೆಯಾದ ಕಾರಣ ದೇಶದ ಕೋವಿಡ್ ಪರಿಸ್ಥಿತಿಯನ್ನು ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ ಪರಿಶೀಲಿಸಿದರು. ಆರೋಗ್ಯ ಸಚಿವ ಹರ್ಷವರ್ಧನ್, ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಮತ್ತು ಎರಡೂ ಸಚಿವಾಲಯಗಳ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು.

ಲಸಿಕಾ ಕಾರ್ಯಕ್ರಮ ಮತ್ತು ವೈರಸ್ ಹರಡುವುದನ್ನು ತಡೆಯಲು ತೆಗೆದುಕೊಂಡ ಕ್ರಮಗಳನ್ನು ಪರಾಮರ್ಶಿಸಲಾಯಿತು. ಪ್ರಕರಣ ಹೆಚ್ಚಿರುವ ರಾಜ್ಯಗಳಿಗೆ ನೀಡಬಹುದಾದ ಸಂಭಾವ್ಯ ಸಹಾಯವನ್ನೂ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಹಾರಾಷ್ಟ್ರ, ಕೇರಳ, ಪಂಜಾಬ್, ಛತ್ತೀಸಗಡ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ.

ಕೊರೊನಿಲ್ ಬಗ್ಗೆ ಸುಳ್ಳು ಹೇಳಿಕೆ: ಐಎಂಎ ಕಿಡಿ

ನವದೆಹಲಿ: ಪತಂಜಲಿ ಸಂಸ್ಥೆಯ ಕೊರೊನಿಲ್ ಮಾತ್ರೆಗಳಿಗೆ ವಿಶ್ವಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಪ್ರಮಾಣಪತ್ರ ಸಿಕ್ಕಿದೆ ಎಂಬ ಸುಳ್ಳು ಹೇಳಿಕೆಗೆ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸೋಮವಾರ ಆಘಾತ ವ್ಯಕ್ತಪಡಿಸಿದೆ. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಆರೋಗ್ಯ ಸಚಿವ ಹರ್ಷವರ್ಧನ್ ಅವರಿಗೆ ಬೇಡಿಕೆ ಇಟ್ಟಿದೆ. ಹರ್ಷವರ್ಧನ್ ಸಮ್ಮುಖದಲ್ಲಿ ಔಷಧವನ್ನು ಬಿಡುಗಡೆ ಮಾಡಲಾಗಿತ್ತು.

‘ವಿಶ್ವ ಆರೋಗ್ಯ ಸಂಸ್ಥೆಯ ಪ್ರಮಾಣೀಕರಣ ಯೋಜನೆಯ ಪ್ರಕಾರ, ಕೋವಿಡ್ ಚಿಕಿತ್ಸೆಯನ್ನು ಬೆಂಬಲಿಸುವ ಔಷಧವಾಗಿ ಕೊರೊನಿಲ್ ಮಾತ್ರೆ ಆಯುಷ್ ಸಚಿವಾಲಯದಿಂದ ಪ್ರಮಾಣೀಕರಣ ಪಡೆದಿದೆ’ ಎಂದು ಯೋಗ ಗುರು ರಾಮದೇವ್ ಅವರ ಪತಂಜಲಿ ಆಯುರ್ವೇದ ಸಂಸ್ಥೆಯು ಫೆಬ್ರುವರಿ 19ರಂದು ಹೇಳಿತ್ತು. ‘ಇದು ಕೋವಿಡ್ ವಿರುದ್ಧ ಹೋರಾಡುವ, ಪುರಾವೆ ಆಧರಿತ ಔಷಧವಾಗಿದೆ’ ಎಂದು ಹೇಳಿಕೊಂಡಿತ್ತು. 

ಜಾಗತಿಕ ಆರೋಗ್ಯ ಸಂಸ್ಥೆಯು ಕೋವಿಡ್ ಚಿಕಿತ್ಸೆಗೆ ಯಾವುದೇ ಸಾಂಪ್ರದಾಯಿಕ ಔಷಧಗಳ ಪರಿಣಾಮಕಾರಿತ್ವವನ್ನು ಪರಿಶೀಲಿಸಿಲ್ಲ ಅಥವಾ ಪ್ರಮಾಣೀಕರಿಸಿಲ್ಲ ಎಂದ ಹಿನ್ನೆಲೆಯಲ್ಲಿ ವೈದ್ಯಕೀಯ ಸಂಘವು ಸ್ಪಷ್ಟನೆ ಕೇಳಿದೆ.

‘ದೇಶದ ಆರೋಗ್ಯ ಸಚಿವರಾಗಿ ಇಂತಹ ಸುಳ್ಳು ಕಟ್ಟುಕಥೆಯ ಅವೈಜ್ಞಾನಿಕ ಉತ್ಪನ್ನವನ್ನು ಇಡೀ ದೇಶದ ಜನರಿಗೆ ಬಿಡುಗಡೆ ಮಾಡುವುದು ಎಷ್ಟು ಸಮಂಜಸ’ ಎಂದು ಸೋಮವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಭಾರತೀಯ ವೈದ್ಯಕೀಯ ಸಂಘ ಪ್ರಶ್ನಿಸಿದೆ. ಕೊರೊನಾ ತಡೆ ಉತ್ಪನ್ನವನ್ನು ಮಾನವನ ಮೇಲೆ ಪ್ರಯೋಗಿಸಿದ ಸಮಯ ಹಾಗೂ ವಿವರಗಳನ್ನು ನೀಡುವಂತೆ ಸಂಘ ಕೇಳಿದೆ.

ಪತಂಜಲಿಯ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರು ಟ್ವೀಟ್ ಮಾಡಿ, ಗೊಂದಲ ಬಗೆಹರಿಸುವ ಯತ್ನ ಮಾಡಿದ್ದಾರೆ. ‘ಕೊರೊನಿಲ್‌ಗೆ ಸಿಒಪಿಪಿ ಪ್ರಮಾಣಪತ್ರವನ್ನು ಭಾರತ ಸರ್ಕಾರದ ಡಿಸಿಜಿಐ ನೀಡಿದೆ. ವಿಶ್ವ ಆರೋಗ್ಯ ಸಂಸ್ಥೆಯು ಯಾವುದೇ ಔಷಧಿಗಳನ್ನು ಅನುಮೋದಿಸುವುದಿಲ್ಲ ಅಥವಾ ತಿರಸ್ಕರಿಸುವುದಿಲ್ಲ ಎಂಬುದು ಸ್ಪಷ್ಟ. ಪ್ರಪಂಚದಾದ್ಯಂತದ ಜನರಿಗೆ ಉತ್ತಮ ಹಾಗೂ ಆರೋಗ್ಯಕರ ಭವಿಷ್ಯವನ್ನು ನಿರ್ಮಿಸಲು ಡಬ್ಲ್ಯುಎಚ್‌ಒ ಕಾರ್ಯನಿರ್ವಹಿಸುತ್ತಿದೆ’ ಎಂದು ಅವರು ಹೇಳಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು