ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 India Update: 25 ಲಕ್ಷ ದಾಟಿದ ಕೋವಿಡ್ ಸೋಂಕಿತರು

Last Updated 14 ಆಗಸ್ಟ್ 2020, 22:26 IST
ಅಕ್ಷರ ಗಾತ್ರ
ADVERTISEMENT
""
""
""

ನವದೆಹಲಿ: ದೇಶದಲ್ಲಿನ ಕೋವಿಡ್‌ ಪ್ರಕರಣಗಳ ಸಂಖ್ಯೆ ಶುಕ್ರವಾರ ರಾತ್ರಿ 9.30ರ ವೇಳೆಗೆ 25.15 ಲಕ್ಷ ಆಗಿದೆ. ಅದೇ ರೀತಿ ಕೋವಿಡ್‌ನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ 17.98 ಲಕ್ಷ ಆಗಿದೆ.

ಪ್ರತಿದಿನ ಪತ್ತೆಯಾಗುವ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಹಾಗೂ ಕೋವಿಡ್‌ನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲೂ ನಿರಂತರ ಏರಿಕೆ ಇದೆ. ಗುಣಮುಖರಾಗುವವರ ಸಂಖ್ಯೆಯಲ್ಲಿನ ಏರಿಕೆ ಆಶಾದಾಯಕವಾಗಿದೆ. ಗುಣಮುಖರ ಸಂಖ್ಯೆಯಲ್ಲಿ ಏರಿಕೆ ಆದಷ್ಟೂ, ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತದೆ.ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 25 ಲಕ್ಷ ದಾಟಿದ್ದರೂ, ಅದರಲ್ಲಿ ಶೇ 71ರಷ್ಟು ರೋಗಿಗಳು ಗುಣಮುಖರಾಗಿದ್ದಾರೆ. ಆದರೆ, ಇದೇ ಅವಧಿಯಲ್ಲಿ ಪ್ರತಿದಿನ ಪತ್ತೆಯಾಗುತ್ತಿರುವ ಹೊಸ ಪ್ರಕರಣಗಳ ಸಂಖ್ಯೆಯಲ್ಲಿಯೂ ನಿರಂತರ ಏರಿಕೆ ಇದೆ.

ಆಗಸ್ಟ್ ಮೊದಲ ವಾರದಲ್ಲಿ ಪ್ರತಿದಿನ ಪತ್ತೆಯಾದ ಹೊಸ ಪ್ರಕರಣಗಳ ಸಂಖ್ಯೆ ಸರಾಸರಿ 55 ಸಾವಿರದಷ್ಟು ಇತ್ತು. ಆದರೆ ಹಿಂದಿನ ಎಂಟು ದಿನಗಳಲ್ಲಿ ಪ್ರತಿದಿನ ಪತ್ತೆಯಾಗುತ್ತಿರುವ ಹೊಸ ಪ್ರಕರಣಗಳ ಸರಾಸರಿ ಸಂಖ್ಯೆ 62,500. ಅಲ್ಲದೆ, ಹೊಸ ಪ್ರಕರಣಗಳ ಏರಿಕೆಯು, ಗುಣಮುಖರಾಗುತ್ತಿರುವವರ ಸಂಖ್ಯೆಗಿಂತ ಹೆಚ್ಚು.

ದೇಶದಲ್ಲಿ ಈಗ ಇರುವ ಸಕ್ರಿಯ ಪ್ರಕರಣಗಳ ಸಂಖ್ಯೆ 6.71 ಲಕ್ಷಕ್ಕೂ ಹೆಚ್ಚು. ಇದು ಒಟ್ಟು ಪ್ರಕರಣಗಳಲ್ಲಿ ಶೇ 27.02ರಷ್ಟು. ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲೂ ನಿರಂತರ ಏರಿಕೆ ಇದೆ.

ಆಗಸ್ಟ್ 13ರಂದು ದೇಶದಲ್ಲಿ ಒಂದೇ ದಿನ 8,48,728 ಕೊರೊನಾ ಪರೀಕ್ಷೆ ನಡೆಸಲಾಗಿದೆ. ದಿನವೊಂದರಲ್ಲಿ ನಡೆಸಲಾದ ಗರಿಷ್ಠ ಸಂಖ್ಯೆ ಪರೀಕ್ಷೆ ಇದಾಗಿದೆ. ಈವರೆಗೆ 2.76 ಕೋಟಿ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.

ಕೋವಿಡ್‌–19 ಸೋಂಕಿಗೆ ತುತ್ತಾಗಿ ಗುಣಮುಖರಾದವರ ಪ್ರಮಾಣ ದೇಶದಲ್ಲಿ ಶೇ 70.77ರಷ್ಟಿದ್ದು ಸಾವಿನ ಪ್ರಮಾಣ ಶೇ 1.96ಕ್ಕೆಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿತ್ತು.

ದಕ್ಷಿಣದ ರಾಜ್ಯಗಳಲ್ಲಿ ಹೆಚ್ಚು ಪ್ರಕರಣ

ಉತ್ತರ ಭಾರತದಲ್ಲಿ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬಂದ ರೀತಿ ಕಾಣುತ್ತದೆ. ಆದರೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಸೋಂಕು ಇನ್ನೂ ವ್ಯಾಪಕವಾಗಿ ಹರಡುತ್ತಿದೆ

ದೆಹಲಿಯಲ್ಲಿ ಪ್ರತಿದಿನ ಪತ್ತೆಯಾಗುತ್ತಿರುವ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದೆ. ಆಗಸ್ಟ್ 10ರಿಂದ ಆಗಸ್ಟ್ 13ರವರೆಗೆ ದೆಹಲಿಯಲ್ಲಿ 3,326 ಹೊಸ ಪ್ರಕರಣಗಳಷ್ಟೇ ಪತ್ತೆಯಾಗಿವೆ. ಒಟ್ಟು ಪ್ರಕರಣಗಳಲ್ಲಿ ಗುಣಮುಖರಾದವರ ಪ್ರಮಾಣ ಶೇ 90ರಷ್ಟು ಇದೆ. 11,366 ಸಕ್ರಿಯ ಪ್ರಕರಣಗಳಷ್ಟೇ ಇವೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ದೆಹಲಿಯಲ್ಲಿ ಮಾತ್ರವೇ ಪ್ರತಿದಿನ ಪತ್ತೆಯಾಗುತ್ತಿರುವ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯತ್ತ ಸಾಗುತ್ತಿದೆ.

ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಪ್ರತಿದಿನ ಪತ್ತೆಯಾಗುತ್ತಿರುವ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ತಮಿಳುನಾಡು, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ‌ ಹೆಚ್ಚು ಇದೆ. ಮಹಾರಾಷ್ಟ್ರದಲ್ಲೂ ಪ್ರತಿದಿನ ಪತ್ತೆಯಾಗುತ್ತಿರುವ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ.

ಮಹಾರಾಷ್ಟ್ರದಲ್ಲಿ 1.51 ಲಕ್ಷ, ಕರ್ನಾಟಕದಲ್ಲಿ 79,109, ಆಂಧ್ರಪ್ರದೇಶದಲ್ಲಿ 89,902 ಮತ್ತು ತಮಿಳುನಾಡಿನಲ್ಲಿ 53,713 ಸಕ್ರಿಯ ಪ್ರಕರಣಗಳು ಇವೆ. ದೇಶದಲ್ಲಿರುವ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಅರ್ಧದಷ್ಟು ಸಕ್ರಿಯ ಪ್ರಕರಣಗಳು ಈ ರಾಜ್ಯಗಳಲ್ಲೇ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT