ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಕ್ಕೆ ಅಡ್ಡಹಾದಿಯ ರಾಜಕೀಯ ಅಗತ್ಯವಿಲ್ಲ: ನರೇಂದ್ರ ಮೋದಿ

₹ 75 ಸಾವಿರ ಕೋಟಿ ಮೊತ್ತದ ವಿವಿಧ ಯೋಜನೆಗಳಿಗೆ ಪ್ರಧಾನಿ ಚಾಲನೆ
Last Updated 11 ಡಿಸೆಂಬರ್ 2022, 11:45 IST
ಅಕ್ಷರ ಗಾತ್ರ

ನಾಗಪುರ: ‘ದೇಶಕ್ಕೆ ಸುಸ್ಥಿರ ಅಭಿವೃದ್ಧಿ ಅಗತ್ಯವಿದೆಯೇ ಹೊರತು ಅಡ್ಡಹಾದಿಯ ರಾಜಕೀಯವಲ್ಲ. ಕೆಲವು ಪಕ್ಷಗಳು ದೇಶದ ಆರ್ಥಿಕತೆಯನ್ನು ನಾಶಮಾಡಲು ಯತ್ನಿಸುತ್ತಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಆರೋಪಿಸಿದರು.

₹ 75 ಸಾವಿರ ಕೋಟಿ ಮೊತ್ತದ ವಿವಿಧ ಯೋಜನೆಗಳಿಗೆ ಇಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ‘ಅಭಿವೃದ್ಧಿಯ ಕಡೆಗೆನಾವು ಸಂಕುಚಿತವಾಗಿ ಮುನ್ನಡೆದರೆ ಸೀಮಿತ ಅವಕಾಶಗಳು ಮಾತ್ರವೇ ಒದಗಿ ಬರುತ್ತವೆ. ಕಳೆದ ಎಂಟು ವರ್ಷಗಳಲ್ಲಿ ಈ ಮನೋಭಾವವನ್ನು ಬದಲಾಯಿಸಿರುವ ನಾವು ಎಲ್ಲರ ನಂಬಿಕೆ, ಬೆಂಬಲ ಮತ್ತು ಪ್ರಯತ್ನಗಳ ಜೊತೆ ಮುಂದುವರಿದಿದ್ದೇವೆ’ ಎಂದರು.

‘ನಾಗಪುರದಲ್ಲಿ ಚಾಲನೆ ನೀಡಿರುವ ಯೋಜನೆಗಳು ಅಭಿವೃದ್ಧಿಗೆ ಸಮಗ್ರತಾ ದೃಷ್ಟಿಯನ್ನು ನೀಡಿವೆ. ಹುಸಿ ಭರವಸೆಗಳನ್ನು ನೀಡಿ ಅಧಿಕಾರಕ್ಕೇರಿ ತೆರಿಗೆದಾರರನ್ನು ದೋಚುವ ರಾಜಕಾರಣಿಗಳ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು’ ಎಂದೂ ಅವರು ಕಿವಿಮಾತು ಹೇಳಿದರು.

‘ಸುಸ್ಥಿರ ಅಭಿವೃದ್ಧಿಯ ಕಡೆಗೆ ಗಮನಹರಿಸಲು ಎಲ್ಲಾ ರಾಜಕಾರಣಿಗಳಲ್ಲಿ ಮನವಿ ಮಾಡುತ್ತೇನೆ. ಇದರಿಂದ ಚುನಾವಣೆಗಳಲ್ಲಿ ಗೆಲ್ಲಬಹುದು’ ಎಂದೂ ಮೋದಿ ಪ್ರತಿಪಾದಿಸಿದರು.

‘ಈ ಹಿಂದೆ ಮತಬ್ಯಾಂಕ್‌ ರಾಜಕಾರಣ ಮತ್ತು ಭ್ರಷ್ಟಾಚಾರದಿಂದಾಗಿ ತೆರಿಗೆದಾರರ ಹಣ ವ್ಯರ್ಥವಾಗುತ್ತಿತ್ತು. ಈಗ ನಮ್ಮ ಸರ್ಕಾರವು ಮುಂದಿನ ಭವಿಷ್ಯವನ್ನು ಉಜ್ವಲಗೊಳಿಸುವ ದೃಷ್ಟಿಯಿಂದ ಸುಸ್ಥಿರ ಮತ್ತು ಆಧುನಿಕ ಮೂಲಸೌಕರ್ಯ ಅಭಿವೃದ್ಧಿಯತ್ತ ಗಮನ ಕೇಂದ್ರೀಕರಿಸಿದೆ’ ಎಂದೂ ತಿಳಿಸಿದರು.

ಬಾಂದ್ರಾ ಜಿಲ್ಲೆಯ ಗೋಸಿಖುರ್ದ್ ಅಣೆಕಟ್ಟೆ ಯೋಜನೆಯು ಮೂರು ದಶಕಗಳಿಂದ ವಿಳಂಬವಾಗಿರುವುದನ್ನು ಉದಾಹರಿಸಿ, ಮಹಾರಾಷ್ಟ್ರದಲ್ಲಿ ಡಬಲ್‌ ಎಂಜಿನ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈ ಯೋಜನೆಯು ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ ಎಂದರು.

ಚಾಲನೆ ದೊರೆತ ಯೋಜನೆಗಳು

*ನಾಗಪುರ–ಮುಂಬೈ ಸಮೃದ್ಧಿ ಎಕ್ಸ್‌ಪ್ರೆಸ್‌ ಹೆದ್ದಾರಿಯ ಮೊದಲ ಹಂತ ಉದ್ಘಾಟನೆ (ಈ ಹೆದ್ದಾರಿಯು ನಾಗಪುರದಿಂದ ಶಿರಡಿಗೆ ಸಂಪರ್ಕ ಕಲ್ಪಿಸುತ್ತಿದೆ)

* ನಾಗಪುರ– ಬಿಲಾಸ್‌ಪುರ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ

*ನಾಗಪುರ ಮೆಟ್ರೊ ರೈಲು ಯೋಜನೆಯ ಮೊದಲ ಹಂತ ಉದ್ಘಾಟನೆ

*ನಾಗಪುರ ಏಮ್ಸ್ ಘಟಕ ಉದ್ಘಾಟನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT