ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನ ಅಡವಿಟ್ಟು ಆಸ್ಪತ್ರೆಗೆ 100 ಫ್ಯಾನ್‌ ನೀಡಿದ ದಂಪತಿ

Last Updated 28 ಏಪ್ರಿಲ್ 2021, 21:31 IST
ಅಕ್ಷರ ಗಾತ್ರ

ಚೆನ್ನೈ: ಚಿನ್ನ ಅಡವಿಟ್ಟು 100 ಫ್ಯಾನ್‌ಗಳನ್ನು ಖರೀದಿಸಿ ಸರ್ಕಾರಿ ಆಸ್ಪತ್ರೆಗೆ ದೇಣಿಗೆ ನೀಡುವ ಮೂಲಕ ದಂಪತಿಯೊಬ್ಬರು ನೆರವಿನ ಹಸ್ತ ಚಾಚಿದ್ದಾರೆ.

ಕೊಯಿಮತ್ತೂರಿನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಇಎಸ್‌ಐ ಆಸ್ಪತ್ರೆಗೆ ಫ್ಯಾನ್‌ಗಳ ಅಗತ್ಯವಿತ್ತು. ಈ ಆಸ್ಪತ್ರೆಯಲ್ಲಿನ ಹವಾನಿಯಂತ್ರಣ ವ್ಯವಸ್ಥೆಯನ್ನು ಕೋವಿಡ್‌–19 ಕಾರಣಕ್ಕೆ ಸ್ಥಗಿತಗೊಳಿಸಿದ್ದರಿಂದ ರೋಗಿಗಳಿಗೆ ಫ್ಯಾನ್‌ಗಳ ಅವಶ್ಯಕತೆ ಇತ್ತು.

‘ಸರ್ಕಾರ 300 ಫ್ಯಾನ್‌ಗಳನ್ನು ನೀಡಿತ್ತು. ಆಸ್ಪತ್ರೆಯಲ್ಲಿ 540 ರೋಗಿಗಳು ದಾಖಲಾಗಿದ್ದರು. ಹೀಗಾಗಿ ಹೆಚ್ಚುವರಿ ಫ್ಯಾನ್‌ಗಳ ಅಗತ್ಯವಿತ್ತು. ಯಾರಾದರೂ ದೇಣಿಗೆ ನೀಡಬಹುದು. ಕೋವಿಡ್‌ ನಿಯಂತ್ರಣಕ್ಕೆ ಬಂದ ಬಳಿಕ ವಾಪಸ್‌ ಪಡೆಯಬಹುದು ಎಂದು ಪ್ರಚಾರ ಮಾಡಲಾಗಿತ್ತು’ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಟಿ. ರವಿಕುಮಾರ್‌ ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ಪಡೆದ ದಂಪತಿ, ತಮ್ಮ ಬಳಿ ಇದ್ದ 2.20 ಲಕ್ಷ ಮೌಲ್ಯದ ಚಿನ್ನವನ್ನು ಅಡವಿಟ್ಟು 100 ಫ್ಯಾನ್‌ಗಳನ್ನು ಖರೀದಿಸಿ ಆಸ್ಪತ್ರೆಗೆ ದೇಣಿಗೆ ನೀಡಿದ್ದಾರೆ. ಆದರೆ, ತಮ್ಮ ಗುರುತು ಎಲ್ಲಿಯೂ ಬಹಿರಂಗಪಡಿಸಬಾರದು ಎಂದು ಈ ದಂಪತಿ ಆಸ್ಪತ್ರೆಯ ಡೀನ್‌ ಡಾ. ಎಂ. ರವೀಂದ್ರನ್‌ ಅವರಿಗೆ ಮನವಿ ಮಾಡಿದ್ದಾರೆ.

‘ದಂಪತಿ ಬಳಿ ಹಣ ಇರಲಿಲ್ಲ ಎನ್ನುವುದು ಮಾತುಕತೆ ಸಂದರ್ಭದಲ್ಲಿ ಗೊತ್ತಾಯಿತು. ಚಿನ್ನವನ್ನು ಅಡವಿಟ್ಟ ವಿಷಯವೂ ತಿಳಿಯಿತು. ಹೀಗಾಗಿ, ನಾಲ್ಕು ಅಥವಾ ಐದು ಫ್ಯಾನ್‌ಗಳನ್ನು ದೇಣಿಗೆ ನೀಡುವಂತೆ ಕೋರಿದೆ. ನಿಮ್ಮ ಸಾಮರ್ಥ್ಯವನ್ನು ಮೀರಿ ನೀಡುವುದು ಬೇಡ ಎಂದು ಮನವರಿಕೆ ಮಾಡಲು ಪ್ರಯತ್ನಿಸಿದೆ. ಆದರೆ, ದಂಪತಿ ತಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದರು’ ಎಂದು ಡಾ. ರವೀಂದ್ರನ್‌ ತಿಳಿಸಿದ್ದಾರೆ.

‘ಜಿಲ್ಲಾಧಿಕಾರಿ ಎಸ್‌. ನಾಗರಾಜನ್‌ ಅವರು ಸಹ ದಂಪತಿಯನ್ನು ಮನವೊಲಿಸಲು ಪ್ರಯತ್ನಿಸಿದರು. ಆದರೆ, ತಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಈ ದಂಪತಿ ತಿಳಿಸಿದರು’ ಎಂದು ರವೀಂದ್ರನ್ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT