ವಾರಾಣಸಿ:ಜ್ಞಾನವಾಪಿ ಮಸೀದಿಯೊಳಗೆ ಇದೆ ಎನ್ನಲಾದ ಶಿವಲಿಂಗವನ್ನು ಕಾರ್ಬನ್ ಡೇಟಿಂಗ್ ಪರೀಕ್ಷೆಗೆ ಒಳಪಡಿಸಬೇಕು ಎಂದು ಕೋರಿ ಸಲ್ಲಿಸಲಾದ ಮನವಿಯ ಕುರಿತು ಇಲ್ಲಿನ ಜಿಲ್ಲಾ ನ್ಯಾಯಾಲಯವು ಇದೇ 14ರಂದು ತನ್ನ ತೀರ್ಪನ್ನು ಪ್ರಕಟಿಸಲಿದೆ.
ಮೇ 16ರಂದು ಜ್ಞಾನವಾಪಿ ಮಸೀದಿಯ ಆವರಣದೊಳಗೆ ವಿಡಿಯೊ ಸಮೀಕ್ಷೆ ನಡೆಸಲಾಗಿತ್ತು. ‘ವಝೂಖಾನ’ ಕೊಳದಲ್ಲಿ ಶಿವಲಿಂಗದ ಆಕೃತಿ ಪತ್ತೆಯಾಗಿದೆ ಎಂದು ಆಗ ಹೇಳಲಾಗಿತ್ತು. ಆ ಆಕೃತಿಯನ್ನು ಕಾರ್ಬನ್ ಡೇಟಿಂಗ್‌ಗೆ ಒಳಪಡಿಸಬೇಕು ಎಂದು ಜ್ಞಾನವಾಪಿ– ಶೃಂಗಾರ ಗೌರಿ ಮೊಕದ್ದಮೆಯ ಹಿಂದೂ ಪರ ಅರ್ಜಿದಾರರು ಅರ್ಜಿ ಸಲ್ಲಿಸಿದ್ದರು.
ವಿಡಿಯೊ ಸಮೀಕ್ಷೆಯಲ್ಲಿ ಕಂಡುಬಂದಿರುವ ಆಕೃತಿಯು ಕಾರಂಜಿ ಎಂದು ಮಸೀದಿ ಆಡಳಿತವು ಲಿಖಿತ ಹೇಳಿಕೆ ನೀಡಿತ್ತು.
ಇದಕ್ಕೆ ಸಂಬಂಧಿಸಿದ ಅರ್ಜಿಯ ಮೇಲಿನ ವಾದಗಳು ಮಂಗಳವಾರ ಪೂರ್ಣಗೊಂಡಿದ್ದು, ನ್ಯಾಯಾಲಯವು ಇದೇ 14ರಂದು ತೀರ್ಪು ಪ್ರಕಟಿಸಲಿದೆ ಎಂದು ಜಿಲ್ಲಾ ಸರ್ಕಾರಿ ವಕೀಲ ಮಹೇಂದ್ರ ಪ್ರತಾಪ್ ಪಾಂಡೆ ತಿಳಿಸಿದ್ದಾರೆ.
ಮುಸ್ಲಿಂ ಪರ ವಾದ ಮಂಡಿಸಿದ ವಕೀಲ ಮುಮ್ತಾಜ್ ಅಹ್ಮದ್ ಅವರು ‘ಯಾವುದೇ ವಸ್ತುವಿನ ಕಾರ್ಬನ್ ಡೇಟಿಂಗ್ ಮಾಡಲು ಸಾಧ್ಯವಿಲ್ಲ. ಕಾರ್ಬನ್ ಡೇಟಿಂಗ್ ಹೆಸರಿನಲ್ಲಿ ವಸ್ತು ಹಾನಿಗೊಳಗಾದರೆ, ಅದು ಸುಪ್ರೀಂ ಕೋರ್ಟ್‌ನ ಆದೇಶವನ್ನು ಧಿಕ್ಕರಿಸಿದಂತೆ ಆಗುತ್ತದೆ’ ಎಂದೂ ನ್ಯಾಯಾಲಯದ ಗಮನಕ್ಕೆ ತಂದಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.