ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ವರಿತ ವಿಚಾರಣೆ, ಶೀಘ್ರ ಇತ್ಯರ್ಥ ಖಾತರಿಪಡಿಸಿ: ಸುಪ್ರೀಂ

Last Updated 1 ಏಪ್ರಿಲ್ 2023, 13:58 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿನ ಜೈಲುಗಳಲ್ಲಿ ಅವುಗಳ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿಚಾರಣಾಧೀನ ಕೈದಿಗಳನ್ನು ಇರಿಸಲಾಗಿದೆ. ಅವರ ಸ್ಥಿತಿಯೂ ದಿಗಿಲು ಹುಟ್ಟಿಸುವಂತಿದೆ. ಹೀಗಾಗಿ, ಎಲ್ಲ ನ್ಯಾಯಾಲಯಗಳು ವಿಚಾರಣೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ, ಪ್ರಕರಣಗಳನ್ನು ಇತ್ಯರ್ಥಗೊಳಿಸುವುದನ್ನು ಖಾತರಿಪಡಿಸಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಒಂದು ವೇಳೆ ನ್ಯಾಯಾಲಯಗಳು ನಿಗದಿತ ಅವಧಿಯೊಳಗೆ ವಿಚಾರಣೆಯನ್ನು ಪೂರ್ಣಗೊಳಿಸದೇ ಇದ್ದಲ್ಲಿ, ವ್ಯಕ್ತಿಗೆ ಆಗಬಹುದಾದ ಹಾನಿ, ಅನ್ಯಾಯ ಅಳತೆಗೂ ಮೀರಿದ್ದಾಗಿರುತ್ತದೆ ಎಂದು ನ್ಯಾಯಮೂರ್ತಿಗಳಾದ ರವೀಂದ್ರ ಭಟ್‌ ಹಾಗೂ ದೀಪಂಕರ್ ದತ್ತ ಅವರಿದ್ದ ನ್ಯಾಯಪೀಠ ಹೇಳಿದೆ.

ಎನ್‌ಡಿಪಿಎಸ್‌ ಕಾಯ್ದೆಯಡಿ ದಾಖಲಾದ ಪ್ರಕರಣದ ಆರೋಪಿಯೊಬ್ಬರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಪೀಠ ನಡೆಸಿತು. ಅರ್ಜಿದಾರ ಏಳು ವರ್ಷ ಹಾಗೂ ನಾಲ್ಕು ತಿಂಗಳುಗಳಿಂದ ಕಸ್ಟಡಿಯಲ್ಲಿದ್ದಾರೆ. ಹೀಗಾಗಿ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ನ್ಯಾಯಪೀಠ ಆದೇಶಿಸಿತು.

‘ಆರೋಪಿಯು ಒಂದು ವೇಳೆ ಆರ್ಥಿಕವಾಗಿ ದುರ್ಬಲ ಸ್ತರಕ್ಕೆ ಸೇರಿದ್ದಲ್ಲಿ, ಕಾರಾಗೃಹವಾಸದಿಂದ ಆತನಿಗೆ ಆಗುವ ಹಾನಿ ಅಗಾಧವಾಗಿರುತ್ತದೆ. ಆರೋಪಿಯು ತಕ್ಷಣಕ್ಕೆ ಜೀವನೋಪಾಯ ಕಳೆದುಕೊಳ್ಳುತ್ತಾನೆ. ಹಲವು ಪ್ರಕರಣಗಳಲ್ಲಿ, ಆರೋಪಿಗಳ ಕುಟುಂಬಗಳು ಚದುರಿಹೋಗುತ್ತವೆ. ಕೌಟುಂಬಿಕ ಬಾಂಧವ್ಯ ಛಿದ್ರಗೊಳ್ಳುವ ಜೊತೆಗೆ ಸಮಾಜದಿಂದ ಬೇರ್ಪಡುತ್ತವೆ’ ಎಂದು ನ್ಯಾಯಪೀಠ ಹೇಳಿದೆ.

‘ಇಂಥ ಸಂಗತಿಗಳ ಬಗ್ಗೆ ನ್ಯಾಯಾಲಯಗಳು ಹೆಚ್ಚು ಸಂವೇದನಾಶೀಲವಾಗಿರಬೇಕು. ಅದರಲ್ಲೂ, ಕಠಿಣ ನಿಯಮಗಳನ್ನು ಒಳಗೊಂಡಿರುವ ಕಾಯ್ದೆಗಳಡಿ ದಾಖಲಾದ ಪ್ರಕರಣಗಳ ವಿಚಾರಣೆಗೆ ವೇಗ ನೀಡಿ, ಅವುಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು' ಎಂದು ಹೇಳಿದೆ.

‘ಆರೋಪಿಗೆ ಜಾಮೀನು ನೀಡಲು ಕೆಲ ಕಾಯ್ದೆಗಳು ಕಠಿಣ ನಿಬಂಧನೆಗಳನ್ನು ಹೊಂದಿವೆ. ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಇದು ಅಗತ್ಯವೂ ಹೌದು. ಆದರೆ, ನಿಗದಿತ ಸಮಯದೊಳಗೆ ವಿಚಾರಣೆ ಮುಗಿಯದಿದ್ದಾಗ ಆರೋಪಿಗೆ ಆಗುವ ಹಾನಿ ಅಗಾಧವಾದುದು’ ಎಂದೂ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT