ಮಂಗಳವಾರ, ಜೂನ್ 28, 2022
26 °C

ವೈದ್ಯಕೀಯ ವ್ಯವಸ್ಥೆ ಮೇಲೆ ಭಾರಿ ಒತ್ತಡ, ಮುಂಚೂಣಿ ಕಾರ್ಯಕರ್ತರಿಗೆ ಸಂಕಷ್ಟ: ವರದಿ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದಲ್ಲಿ ಕೋವಿಡ್–19 ಬಿಕ್ಕಟ್ಟಿನ ಪರಿಣಾಮ ವೈದ್ಯರು, ಮುಂಚೂಣಿ ಕಾರ್ಯಕರ್ತರ ಮೇಲೆ ಒತ್ತಡ ಸೃಷ್ಟಿಯಾಗಿದೆ. ಸಾಂಕ್ರಾಮಿಕದ ಉಲ್ಬಣವು ಅವರ ಜೀವಭಯಕ್ಕೂ ಕಾರಣವಾಗಿದೆ.

ಕಡಿಮೆ ವೇತನ, ಇಡೀ ದಿನದ ಪಾಳಿಗಳು, ಸಿಬ್ಬಂದಿ ಕೊರತೆಯಿಂದ ಇಡೀ ಆರೋಗ್ಯ ರಕ್ಷಣಾ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ ಎಂದು ‘ಎಎಫ್‌ಪಿ’ ಸುದ್ದಿಸಂಸ್ಥೆ ವರದಿ ಮಾಡಿದೆ.

ದೇಶದಲ್ಲಿ ಏಪ್ರಿಲ್ ಬಳಿಕ ಈವರೆಗೆ ಕನಿಷ್ಠ 1,65,000 ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಇತ್ತೀಚಿನ ತಿಂಗಳುಗಳಲ್ಲಿ ದೇಶದಲ್ಲಿ ಕೋವಿಡ್ ಪರಿಸ್ಥಿತಿ ಉಲ್ಬಣಿಸಿದ್ದು, ಪ್ರತಿ ದಿನ 3,000ಕ್ಕೂ ಹೆಚ್ಚು ಮಂದಿ ಸಾವಿಗೀಡಾಗುತ್ತಿದ್ದಾರೆ. ಆರೋಗ್ಯ ವ್ಯವಸ್ಥೆ ಮೇಲೆ ವಿಪರೀತ ಒತ್ತಡ ಉಂಟಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಓದಿ: 

‘ನಾವು ಅತಿಯಾಗಿ ಕೆಲಸ ಮಾಡುತ್ತಿದ್ದೇವೆ ಮತ್ತು ಒತ್ತಡಕ್ಕೆ ಒಳಗಾಗಿದ್ದೇವೆ. ತುಂಬಾ ಭಯಭೀತರಾಗಿದ್ದೇವೆ’ ಎಂದು ದೆಹಲಿಯ ಡಾ. ರಾಧಾ ಜೈನ್ ಹೇಳಿದ್ದಾರೆ.

ಕೋವಿಡ್‌ನಿಂದಾಗಿ ದೇಶದಲ್ಲಿ 1,200ಕ್ಕೂ ಹೆಚ್ಚು ವೈದ್ಯರು ಮೃತಪಟ್ಟಿದ್ದಾರೆ. ಕಳೆದ ಎರಡು ತಿಂಗಳ ಅವಧಿಯಲ್ಲೇ 500ಕ್ಕೂ ಹೆಚ್ಚು ವೈದ್ಯರು ಅಸುನೀಗಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘಟನೆ ಹೇಳಿದೆ.

ಪರಿಸ್ಥಿತಿ ಎಷ್ಟು ಭೀಕರವಾಗಿದೆ ಎಂಬುದನ್ನು ತಿಳಿಯಲು ದೆಹಲಿಯ ಹೊರವಲಯದಲ್ಲಿ ಕೆಲಸ ಮಾಡುತ್ತಿರುವ ವೈದ್ಯರಾದ ದೀಪೇಂದ್ರ ಗಾರ್ಗ್ ಅವರ ಉದಾಹರಣೆಯೇ ಸಾಕು. ಅವರ ಪತ್ನಿ ಅನುಭಾ ಅವರಿಗೆ ಏಪ್ರಿಲ್‌ನಲ್ಲಿ ಕೋವಿಡ್ ಸೋಂಕು ತಗುಲಿತ್ತು. ಅವರೂ ವೈದ್ಯೆಯಾಗಿದ್ದು, ಮನೆಯಲ್ಲೇ ಚಿಕಿತ್ಸೆ ಪಡೆಯಲು ಆರಂಭಿಸಿದ್ದರು. ಆದರೆ ಕೆಲವೇ ದಿನಗಳಲ್ಲಿ ಅವರ ಆರೋಗ್ಯ ತೀರಾ ಹದಗೆಟ್ಟಿತ್ತು. ಇತರರಂತೆಯೇ ಆಸ್ಪತ್ರೆಯಲ್ಲಿ ಬೆಡ್ ಸಿಗಲು ಪರದಾಡಬೇಕಾಯಿತು. ಹಲವೆಡೆ ಅಲೆದಾಡಿ ಕೊನೆಗೆ ಮನೆಯಿಂದ 200 ಕಿಲೋ ಮೀಟರ್ ದೂರದಲ್ಲಿರುವ ಆಸ್ಪತ್ರೆಯಲ್ಲಿ ಬೆಡ್ ಲಭಿಸಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟರು.

ಓದಿ: 

‘ನಾವು ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುವವರು. ವೈರಸ್‌ಗೆ ನಮ್ಮನ್ನು ಒಡ್ಡಿಕೊಂಡಿರುತ್ತೇವೆ. ಆದರೂ ಈ ವೃತ್ತಿ ಆಯ್ದುಕೊಂಡಿರುವುದರಿಂದ ಇಂಥ ಪರಿಸ್ಥಿತಿಯಲ್ಲಿಯೂ ಇಡೀ ದಿನ ಕಾರ್ಯನಿರ್ವಹಿಸುತ್ತಿದ್ದೇವೆ. ನಮಗೆ ಬೇರೆ ಆಯ್ಕೆಗಳಿಲ್ಲ’ ಎಂದು ಗಾರ್ಗ್ ಹೇಳಿದ್ದಾರೆ.

ಸಾಂಕ್ರಾಮಿಕವು ಭಾರತದ ಆರೋಗ್ಯ ವ್ಯವಸ್ಥೆಯಲ್ಲಿನ, ವಿಶೇಷವಾಗಿ ಸರ್ಕಾರಿ ಆಸ್ಪತ್ರೆಗಳ ದೌರ್ಬಲ್ಯಗಳನ್ನು ಬಹಿರಂಗಪಡಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸರ್ಕಾರವು ಜಿಡಿಪಿಯ ಶೇ 2ಕ್ಕಿಂತಲೂ ಕಡಿಮೆ ಮೊತ್ತವನ್ನು ಆರೋಗ್ಯ ರಕ್ಷಣಾ ವ್ಯವಸ್ಥೆಗೆ ವ್ಯಯಿಸುತ್ತಿದೆ. ಇದು ವಿಶ್ವದಲ್ಲೇ ಕಡಿಮೆ ಎಂದೂ ಉಲ್ಲೇಖಿಸಲಾಗಿದೆ.

ಓದಿ: 

ವಿಶ್ವಬ್ಯಾಂಕ್ ವರದಿ ಪ್ರಕಾರ, ದೇಶದಲ್ಲಿ 2017ರ ವೇಳೆಗೆ ಪ್ರತಿ ಸಾವಿರ ಮಂದಿಗೆ ವೈದ್ಯರ ಸಂಖ್ಯೆ ಕೇವಲ 0.8ರಷ್ಟಿತ್ತು. ಇದು ಇರಾಕ್‌ನ ಪರಿಸ್ಥಿತಿಗೆ ಸಮನಾಗಿ ಇದೆ. ಕೋವಿಡ್‌ನಿಂದಾಗಿ ವಿಪರೀತ ಸಂಕಷ್ಟಕ್ಕೀಡಾಗಿದ್ದ ಬ್ರೆಜಿಲ್‌ ಮತ್ತು ಅಮೆರಿಕಗಳಲ್ಲಿ ಪ್ರತಿ ಸಾವಿರ ಮಂದಿಗೆ ಕ್ರಮವಾಗಿ 2.2 ಮತ್ತು 2.6ರಷ್ಟು ವೈದ್ಯರಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಭಾರತಕ್ಕೆ ಹೆಚ್ಚುವರಿಯಾಗಿ 6 ಲಕ್ಷಕ್ಕೂ ಹೆಚ್ಚು ವೈದ್ಯರು ಮತ್ತು 20 ಲಕ್ಷ ದಾದಿಯರ ಅಗತ್ಯವಿದೆ ಎಂದು ಅಮೆರಿಕ ಮೂಲದ ‘ಸೆಂಟರ್ ಫಾರ್ ಡಿಸೀಸ್ ಡೈನಾಮಿಕ್ಸ್’ ಸಂಸ್ಥೆ ಅಭಿಪ್ರಾಯಪಟ್ಟಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು