ಭಾನುವಾರ, ನವೆಂಬರ್ 1, 2020
19 °C

ಮರುಸೋಂಕು ಪ್ರಕರಣಗಳ ಅಧ್ಯಯನ ಆರಂಭಿಸಿದ ಐಸಿಎಂಆರ್

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಕೊರೊನಾವೈರಸ್ ಸೋಂಕಿನಿಂದ ಚೇತರಿಸಿಕೊಂಡಿರುವ ಕೆಲವರಲ್ಲಿ ಮತ್ತೆ ಸೋಂಕು ವರದಿಯಾಗುತ್ತಿರುವುದು ಬೆಳಕಿಗೆ ಬರುತ್ತಿದೆ. ಈ ಕುರಿತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ವಿಸ್ತೃತ ಅಧ್ಯಯನ ಆರಂಭಿಸಿದೆ.

‘ಮರುಸೋಂಕು ಪ್ರಕರಣಗಳನ್ನು ನಾವು ಅಧ್ಯಯನ ಮಾಡುತ್ತಿದ್ದೇವೆ. ಸೋಂಕಿನಿಂದ ಗುಣಮುಖರಾದ 110 ದಿನಗಳವರೆಗೆ ದೇಹದಲ್ಲಿ ಪ್ರತಿಕಾಯಗಳು ಪ್ರಬಲವಾಗಿರುತ್ತವೆ. ಆದರೂ ನಾವು 100 ದಿನಗಳ ಗಡುವು ಇರಿಸಿಕೊಂಡು ಅಧ್ಯಯನಕ್ಕೆ ಮುಂದಾಗಿದ್ದೇವೆ. ಮುಂಬೈನ 2 ಮತ್ತು ಅಹಮದಾಬಾದ್‌ನ ಒಂದು ಪ್ರಕರಣವನ್ನು ಮರುಸೋಂಕು ಎಂದು ದೃಢೀಕರಿಸಲಾಗಿದೆ’ ಎಂದು ಐಸಿಎಂಅರ್ ಪ್ರಧಾನ ನಿರ್ದೇಶಕ ಡಾ.ಬಲರಾಂ ಭಾರ್ಗವ ಹೇಳಿದ್ದಾರೆ.

ಕೋವಿಡ್-19 ರೋಗಿಗಳಲ್ಲಿ ಮರುಸೋಂಕು ಕಾಣಿಸಿಕೊಳ್ಳಬಹುದು ಎಂದು ಸೋಂಕು ರೋಗಗಳಿಗೆ ಸಂಬಂಧಿಸಿದ ಲ್ಯಾನ್ಸೆಟ್ ನಿಯತಕಾಲಿಕೆ ವರದಿ ಮಾಡಿತ್ತು. ಮರು ಸೋಂಕು ಕಾಣಿಸಿಕೊಂಡವರಲ್ಲಿ ರೋಗ ತೀವ್ರತೆಯೂ ಹೆಚ್ಚಾಗಿರುತ್ತದೆ ಎಂದು ವರದಿ ಅಭಿಪ್ರಾಯಪಟ್ಟಿದೆ.

‘ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್-19ರ 24 ಮರುಸೋಂಕು ಪ್ರಕರಣಗಳನ್ನು ದಾಖಲಿಸಿದೆ. ಮೂರು ಮರುಸೋಂಕು ಪ್ರಕರಣಗಳನ್ನು ಗುರುತಿಸಿ, ರೋಗಿಗಳೊಂದಿಗೆ ನಾವು ಫೋನ್‌ನಲ್ಲಿ ಮಾತನಾಡಿದ್ದೇವೆ. ಅವರ ದೇಹಸ್ಥಿತಿಯ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸುತ್ತೇವೆ’ ಎಂದು ಡಾ.ಬಲರಾಂ ತಿಳಿಸಿದ್ದಾರೆ.

‘ಕೋವಿಡ್-19 ರೋಗ ತರುವ ಸಾರ್ವ್ ಕೊವ್-2 ವೈರಾಣುಗಳು ರೂಪಾಂತರಗೊಂಡಿರುವುದು ಬೆಳಕಿಗೆ ಬಂದಿದೆ. ಆದರೆ ಅದರ ಇಂಥ ವೈರಾಣುಗಳು ಸ್ವಭಾವದಲ್ಲಿ ಹೆಚ್ಚೇನೂ ವ್ಯತ್ಯಾಸ ಗೋಚರಿಸಿಲ್ಲ. ಇದೀಗ ಕೊರೊನಾವೈರಸ್‌ ತಡೆಯಲು ಸಿದ್ಧಪಡಿಸುತ್ತಿರುವ ಲಸಿಕೆಯು ಇಂಥ ರೂಪಾಂತರಿತ ವೈರಾಣುಗಳನ್ನೂ ನಿಗ್ರಹಿಸಬಲ್ಲದು’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು