ಗುರುವಾರ , ಮೇ 19, 2022
20 °C
ಸಚಿವರ ಜೊತೆ ಪ್ರಧಾನಿ ಸಂವಾದ

ಸಣ್ಣ ನಿರ್ಲಕ್ಷ್ಯವೂ ಕೋವಿಡ್‌ ವಿರುದ್ಧದ ಹೋರಾಟ ದುರ್ಬಲಗೊಳಿಸಬಲ್ಲದು: ಮೋದಿ ಕಳವಳ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಕೋವಿಡ್‌–19 ಪಿಡುಗು ಇನ್ನೂ ಅಂತ್ಯವಾಗಿಲ್ಲ. ಆದರೆ, ಜನರು ಕೋವಿಡ್‌ ಮಾರ್ಗಸೂಚಿ ಪಾಲಿಸುತ್ತಿಲ್ಲ. ಒಂದು ಸಣ್ಣ ನಿರ್ಲಕ್ಷ್ಯವೂ ಸಹ ಈ ಪಿಡುಗಿನ ವಿರುದ್ಧದ ನಮ್ಮ ಹೋರಾಟವನ್ನು ದುರ್ಬಲಗೊಳಿಸಬಲ್ಲದು’ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಕಳವಳ ವ್ಯಕ್ತಪಡಿಸಿದರು.

ಸಚಿವರೊಂದಿಗೆ ಸಂವಾದ ನಡೆಸಿದ ಅವರು, ‘ಜನರು ಈ ಪಿಡುಗು ಅಂತ್ಯವಾಗಿದೆ ಎಂದೇ ಭಾವಿಸಿದಂತಿದೆ. ಸಂದಣಿ ಹೆಚ್ಚುತ್ತಿದೆ. ಯಾವುದೇ ಕಾರಣಕ್ಕೂ ಮೈಮರೆಯುವಂತಿಲ್ಲ’ ಎಂದು ಪುನರುಚ್ಚರಿಸಿದರು.

‘ಕಳೆದ ಕೆಲವು ದಿನಗಳಿಗೆ ಹೋಲಿಸಿದರೆ ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಕಡಿಮೆಯಾಗುತ್ತಿವೆ. ಈ ಕಾರಣ ಮುಂದಿಟ್ಟುಕೊಂಡು ಜನರು ಗುಂಪುಗೂಡುವುದನ್ನು ಬಿಡಬೇಕು. ಅನೇಕ ದೇಶಗಳಲ್ಲಿ ಮತ್ತೆ ಸೋಂಕು ಹೆಚ್ಚುತ್ತಿದ್ದು, ಇದು ವೈರಸ್‌ ರೂಪಾಂತರಗೊಳ್ಳುತ್ತಿರುವುದನ್ನು ತೋರಿಸುತ್ತದೆ’ ಎಂದೂ ಎಚ್ಚರಿಸಿದರು.

‘ಕೋವಿಡ್‌–19 ಪಿಡುಗಿನ ವಿರುದ್ಧ ಭಾರತ ತನ್ನೆಲ್ಲಾ ಶಕ್ತಿಯಿಂದ ಹೋರಾಡುತ್ತಿದೆ. ಲಸಿಕೆ ನೀಡುವುದನ್ನು, ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ’ ಎಂದರು.

‘ನೂತನ ಸಚಿವರು ಮಾಜಿ ಮಂತ್ರಿಗಳ ಅನುಭವದಿಂದ ಕಲಿಯಬೇಕು. ಅವರ ಮಾರ್ಗದರ್ಶನದಲ್ಲಿ ಉತ್ತಮ ಮಾಡಿ’ ಎಂದೂ ಕಿವಿಮಾತು ಹೇಳಿದರು.

ಎರಡು ಪಾಳಿಯಲ್ಲಿ ಕರ್ತವ್ಯ: ರೈಲ್ವೆ ಸಚಿವ ವೈಷ್ಣವ್‌ ಸೂಚನೆ
ನವದೆಹಲಿ:
ಎಲ್ಲ ಅಧಿಕಾರಿಗಳು ಎರಡು ಪಾಳಿಗಳಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂದು ನೂತನ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಗುರುವಾರ ಆದೇಶಿಸಿದ್ದಾರೆ.

ಈ ಸಂಬಂಧ ಸಚಿವರ ಕಚೇರಿ ಆದೇಶ ಹೊರಡಿಸಿದೆ. ‘ಬೆಳಿಗ್ಗೆ 7ರಿಂದ ಮಧ್ಯಾಹ್ನ 4ರವರೆಗೆ ಹಾಗೂ ಮಧ್ಯಾಹ್ನ 3ರಿಂದ ರಾತ್ರಿ 12ರ ವರೆಗೆ ಎರಡು ಪಾಳಿಗಳಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಎಲ್ಲ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂಬುದಾಗಿ ಸಚಿವರು ನಿರ್ದೇಶನ ನೀಡಿದ್ದಾರೆ’ ಎಂದು ಆದೇಶದಲ್ಲಿ ಹೇಳಲಾಗಿದೆ.

ಮಾಜಿ ಐಎಎಸ್‌ ಅಧಿಕಾರಿಯೂ ಅಗಿರುವ ವೈಷ್ಣವ್‌ ಅವರು ಜನರಲ್‌ ಎಲೆಕ್ಟ್ರಿಕಲ್ಸ್, ಸೀಮೆನ್ಸ್‌ ಸೇರಿದಂತೆ ಜಾಗತಿಕ ಕಂಪನಿಗಳ ಸಿಬ್ಬಂದಿಗಾಗಿ ನಾಯಕತ್ವ ತರಬೇತಿ ಶಿಬಿರಗಳನ್ನು ನಡೆಸಿ, ಮಾರ್ಗದರ್ಶನ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು