ಗುರುವಾರ , ಅಕ್ಟೋಬರ್ 21, 2021
29 °C

ಕೋವಿಶೀಲ್ಡ್‌ ಅಮಾನ್ಯ: ಬ್ರಿಟನ್‌ಗೆ ಭಾರತ ಎಚ್ಚರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಶೀಲ್ಡ್‌ ಲಸಿಕೆ ಹಾಕಿಸಿಕೊಂಡ ಭಾರತೀಯರು ಬ್ರಿಟನ್‌ಗೆ ಹೋದಾಗ 10 ದಿನಗಳ ಕಡ್ಡಾಯ ಪ್ರತ್ಯೇಕವಾಸ ನಿಯಮ ಕೈಬಿಡದಿದ್ದರೆ ಅದಕ್ಕೆ ತಿರುಗೇಟು ನೀಡುವಂತಹ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ ಶೃಂಗ್ಲಾ ಮಂಗಳವಾರ ಹೇಳಿದ್ದಾರೆ. ಇದು ತಾರತಮ್ಯದಿಂದ ಕೂಡಿದ ನಿಯಮ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರು ಬ್ರಿಟಿಷ್‌ ವಿದೇಶಾಂಗ ಕಾರ್ಯದರ್ಶಿ ಎಲಿಜಬೆತ್‌ ಟ್ರಸ್‌ ಅವರ ಜತೆಗೂ ಈ ವಿಷಯ ಪ್ರಸ್ತಾಪಿಸಿದ್ದಾರೆ. ಇವರಿಬ್ಬರೂ ನ್ಯೂಯಾರ್ಕ್‌ನಲ್ಲಿ ಭೇಟಿಯಾಗಿದ್ದಾರೆ. 

ಪುಣೆಯ ಸೀರಂ ಇನ್ಸ್‌ಟಿಟ್ಯೂಟ್‌ ಆಫ್‌ ಇಂಡಿಯಾ ತಯಾರಿಸಿದ ಕೋವಿಶೀಲ್ಡ್‌ನ ಲಸಿಕೆಯ ಎರಡೂ ಡೋಸ್‌ ಪಡೆದುಕೊಂಡಿದ್ದರೂ ಅಂಥವರನ್ನು ಲಸಿಕೆ ಹಾಕಿಸಿಕೊಳ್ಳದವರು ಎಂದೇ ಪರಿಗಣಿಸುವ ನಿಯಮವನ್ನು ಬ್ರಿಟನ್‌ ರೂಪಿಸಿದೆ. ವಿದೇಶಿ ಪ್ರವಾಸಿಗರಿಗೆ ಸಂಬಂಧಿಸಿದ ಹೊಸ ನಿಯಮಗಳು ಅಕ್ಟೋಬರ್‌ 4ರಿಂದ ಜಾರಿಗೆ ಬರಲಿವೆ. ಲಸಿಕೆಯ ನಿಯಮವನ್ನು ಅದರೊಳಗೆ ಸರಿಪಡಿಸಬೇಕು ಎಂದು ಭಾರತ ಒತ್ತಾಯಿಸಿದೆ. 

ಸಮಸ್ಯೆ ಪರಿಹರಿಸುವ ಭರವಸೆಯನ್ನು ಬ್ರಿಟನ್‌ ನೀಡಿದೆ ಎಂದು ಶೃಂಗ್ಲಾ ಅವರು ಹೇಳಿದ್ದಾರೆ. ‘ಲಸಿಕೆ ಪ್ರಮಾಣಪತ್ರಗಳಿಗೆ ಪರಸ್ಪರ ಮಾನ್ಯತೆ ನೀಡಿಕೆಯ ಬಗ್ಗೆ ಕೆಲವು ದೇಶಗಳ ಜತೆ ಚರ್ಚಿಸಲಾಗುತ್ತಿದೆ. ಇದುಹೇಗಾಗುತ್ತದೆ ಎಂಬುದನ್ನು ನೋಡಬೇಕಿದೆ. ಯಾವುದೇ ದೇಶದ ನಿಯಮವು ನಮಗೆ ತೃಪ್ತಿ ನೀಡಿಲ್ಲ ಎಂದಾದರೆ ಅದಕ್ಕೆ ತಿರುಗೇಟು ನೀಡುವಂತಹ ನಿಯಮ ರೂಪಿಸುವ ಹಕ್ಕು ಭಾರತಕ್ಕೆ ಇದೆ’ ಎಂದು ಹೇಳಿದರು. 

ಕೋವಿಶೀಲ್ಡ್‌ ಲಸಿಕೆಯು ಬ್ರಿಟನ್‌ ಪರವಾನಗಿ ನೀಡಿ, ಭಾರತದಲ್ಲಿ ತಯಾರಾಗುತ್ತಿರುವ ಉತ್ಪನ್ನವಾಗಿದೆ. ಬ್ರಿಟನ್‌ ಸರ್ಕಾರದ ವಿನಂತಿ ಮೇರೆಗೆ ಆ ದೇಶಕ್ಕೆ ಲಸಿಕೆಯ 50 ಲಕ್ಷ ಡೋಸ್‌ಗಳನ್ನು ಕಳುಹಿಸಲಾಗಿದೆ. ಈ ಲಸಿಕೆಯನ್ನು ಅಲ್ಲಿನ ರಾಷ್ಟ್ರೀಯ ಆರೋಗ್ಯ ವ್ಯವಸ್ಥೆಯ ಅಡಿಯಲ್ಲಿ ಜನರಿಗೆ ಹಾಕಲಾಗುತ್ತಿದೆ. ಹಾಗಿರುವಾಗ, ಭಾರತೀಯರು ಕೋವಿಶೀಲ್ಡ್‌ ಲಸಿಕೆ ಹಾಕಿಕೊಂಡಿರುವುದಕ್ಕೆ ಮಾನ್ಯತೆ ಇಲ್ಲ ಎಂಬುದು ತಾರತಮ್ಯವಾಗುತ್ತದೆ. ಭಾರತದಿಂದ ಬ್ರಿಟನ್‌ಗೆ ಹೋಗುವ ಪ್ರವಾಸಿಗರ ಮೇಲೆ ಅದು ಪರಿಣಾಮ ಉಂಟು ಮಾಡುತ್ತದೆ ಎಂದು ಶೃಂಗ್ಲಾ ವಿವರಿಸಿದ್ದಾರೆ. 

ಬ್ರಿಟನ್‌ ಅನುಮೋದನೆ ನೀಡಿರುವ ಲಸಿಕೆಗಳ ಪಟ್ಟಿಯಲ್ಲಿ ಭಾರತದಲ್ಲಿ ತಯಾರಾದ ಲಸಿಕೆಗಳು ಸೇರಿಲ್ಲ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು