ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: ದೇಶದ ವಿವಿಧೆಡೆ ಇಳಿಕೆ, ಕೇರಳದಲ್ಲಿ ಮಾತ್ರ ಭಾರಿ ಪ್ರಮಾಣದಲ್ಲಿ ಏರಿಕೆ

Last Updated 9 ಜುಲೈ 2021, 11:06 IST
ಅಕ್ಷರ ಗಾತ್ರ

ತಿರುವನಂತಪುರ: ಹೆಚ್ಚಿನ ರಾಜ್ಯಗಳಲ್ಲಿ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದ್ದರೂ ಕೇರಳದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬರುತ್ತಿದೆ. ಪ್ರತಿ ದಿನ 11,000ದಿಂದ 13,000ದ ವರೆಗೆ ಪ್ರಕರಣಗಳು ಪತ್ತೆಯಾಗುತ್ತಿವೆ.

ಕಳೆದ ಮೂರು ದಿನಗಳಲ್ಲಿ ಕೇರಳದಲ್ಲಿ ದೇಶದ ಮೂರನೇ ಒಂದರಷ್ಟು ಕೋವಿಡ್ ಪ್ರಕರಣಗಳು ವರದಿಯಾಗಿವೆ. ಜುಲೈ 6ರಂದು 14,373, ಜುಲೈ 7ರಂದು 15,600, ಜುಲೈ 8ರಂದು 13,772 ಪ್ರಕರಣಗಳು ದೃಢಪಟ್ಟಿವೆ.

ಕಳೆದ ಜನವರಿಯಲ್ಲಿಯೂ ಕೇರಳದಲ್ಲಿ ಇದೇ ರೀತಿಯ ಪರಿಸ್ಥಿತಿ ಇತ್ತು. ಆಗ ದೇಶದ ಒಟ್ಟು ಪ್ರಕರಣಗಳ ಸಂಖ್ಯೆಯಲ್ಲಿ ಶೇ 60ರಷ್ಟು ಪಾಲು ಕೇರಳದ್ದಿತ್ತು. ಕೋವಿಡ್ ಮೊದಲ ಅಲೆಯ ಸಂದರ್ಭದಲ್ಲೂ ಕೇರಳದಲ್ಲಿ ಪ್ರಕರಣಗಳ ಸಂಖ್ಯೆ ವಿಪರೀತ ಹೆಚ್ಚಿತ್ತು.

ಈವರೆಗೆ, ಕೇರಳದ 30 ಲಕ್ಷ ಮಂದಿ ಸೋಂಕಿತರಾಗಿದ್ದಾರೆ. ದೇಶದಲ್ಲೇ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ಮಹಾರಾಷ್ಟ್ರದಲ್ಲಿ ಪತ್ತೆಯಾಗಿದ್ದರೆ, ನಂತರದ ಸ್ಥಾನದಲ್ಲಿ ಕೇರಳವಿದೆ.

ಮಹಾರಾಷ್ಟ್ರದಲ್ಲಿ ಕೇರಳಕ್ಕಿಂತ ಹೆಚ್ಚು ಜನಸಂಖ್ಯೆ ಇದೆ. ಆದರೆ, ಕೇರಳದ ಜನಸಂಖ್ಯೆಗೆ ಹೋಲಿಸಿದರೆ ಅಲ್ಲಿನ ಸೋಂಕು ಪ್ರಕರಣಗಳ ಸಂಖ್ಯೆ ತೀರಾ ಹೆಚ್ಚಿದೆ. ದೇಶದ ಸರಾಸರಿ ಕೋವಿಡ್ ಪ್ರಕರಣಗಳ ಸಂಖ್ಯೆ 24,000 ಇದ್ದರೆ, ಕೇರಳದಲ್ಲಿ ಹತ್ತು ಲಕ್ಷ ಮಂದಿಗೆ 90,000ದಷ್ಟು ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.

ಕೋವಿಡ್ ಸಾಂಕ್ರಾಮಿಕದ ಆರಂಭದಿಂದಲೂ ಕೋವಿಡ್ ಪ್ರಕರಣಗಳ ಸಂಖ್ಯೆ ಕೇರಳದಲ್ಲಿ ಹೆಚ್ಚಿದೆ. ಸರಾಸರಿ ಸಾವಿನ ಪ್ರಮಾಣ ದೇಶದಲ್ಲಿ ಶೇ 1.32 ಇದ್ದರೆ ಕೇರಳದಲ್ಲಿ ಶೇ 0.47ರಷ್ಟಿದೆ. ಇದಕ್ಕೆ ಕೇರಳದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಿರುವುದೇ ಕಾರಣ ಎಂದು ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಉಲ್ಲೇಖಿಸಿದೆ.

ರಾಜ್ಯದ ಪ್ರತಿ 100 ಪರೀಕ್ಷೆಗಳಲ್ಲಿ 13 ಪಾಸಿಟಿವ್ ಬರುತ್ತಿದೆ. ಲಸಿಕೆ ನೀಡಿಕೆಯಲ್ಲಿ ಕೇರಳವು ಇತರ ರಾಜ್ಯಗಳಿಂದ ಮುಂದಿದ್ದರೂ ಅದರಿಂದ ಸೋಂಕು ತಡೆಯುವ ನಿಟ್ಟಿನಲ್ಲಿ ಹೆಚ್ಚಿನ ಪ್ರಯೋಜನವಾಗಿಲ್ಲ ಎಂದು ವರದಿ ಉಲ್ಲೇಖಿಸಿದೆ.

ಈವರೆಗೆ ಕೇರಳದ ಶೇ 45ರಷ್ಟು ಮಂದಿ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ. ಶೇ 10ರಷ್ಟು ಮಂದಿ ಲಸಿಕೆಯ ಎರಡೂ ಡೋಸ್‌ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT