ಮಂಗಳವಾರ, ಜೂನ್ 22, 2021
29 °C

ಕೋಟ್ಯಾಂತರ ಭಾರತೀಯರನ್ನು ಬಡತನದ ಕೂಪಕ್ಕೆ ತಳ್ಳಿದ ಕೋವಿಡ್‌ ಸಾಂಕ್ರಾಮಿಕ: ಅಧ್ಯಯನ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಮುಂಬೈ: ಕೋವಿಡ್–19 ಸಾಂಕ್ರಾಮಿಕದ ಪರಿಣಾಮವಾಗಿ ಕಳೆದ ವರ್ಷ ದೇಶದಲ್ಲಿ ಅಂದಾಜು 23 ಕೋಟಿ ಜನ ಬಡತನದ ಕೂಪಕ್ಕೆ ಬಿದ್ದಿದ್ದಾರೆ. ಯುವಕರು ಮತ್ತು ಮಹಿಳೆಯರು ಅತಿಹೆಚ್ಚು ತೊಂದರೆಗೆ ಒಳಗಾಗಿದ್ದಾರೆ ಎಂದು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನವೊಂದು ಹೇಳಿದೆ.

ಕೋವಿಡ್‌ನ ಎರಡನೆಯ ಅಲೆಯು ಪರಿಸ್ಥಿತಿಯನ್ನು ಇನ್ನಷ್ಟು ವಿಷಮಗೊಳಿಸಲಿದೆ ಎಂದೂ ಅಧ್ಯಯನ ವರದಿಯಲ್ಲಿ ಎಚ್ಚರಿಸಲಾಗಿದೆ. ಕಳೆದ ವರ್ಷದ ಮಾರ್ಚ್‌ನಲ್ಲಿ ಜಾರಿಗೆ ತಂದ ಕಠಿಣ ಲಾಕ್‌ಡೌನ್‌ ನಿಯಮಗಳ ಪರಿಣಾಮವಾಗಿ 10 ಕೋಟಿ ಜನರಿಗೆ ಕೆಲಸ ಇಲ್ಲದಂತಾಯಿತು. ಇವರ ಪೈಕಿ ಶೇಕಡ 15ರಷ್ಟು ಜನರಿಗೆ ವರ್ಷದ ಅಂತ್ಯದವರೆಗೂ ಕೆಲಸ ಸಿಗಲಿಲ್ಲ ಎಂದು ವರದಿ ಹೇಳಿದೆ.

ಬುಧವಾರ ಪ್ರಕಟಿಸಲಾದ ಈ ವರದಿಯ ಪ್ರಕಾರ, ಉದ್ಯೋಗ ಕಳೆದುಕೊಂಡ ಮಹಿಳೆಯರ ಪೈಕಿ ಶೇ 47ರಷ್ಟು ಜನರಿಗೆ ಲಾಕ್‌ಡೌನ್‌ ನಿರ್ಬಂಧಗಳು ತೆರವಾದ ನಂತರವೂ ಹೊಸ ಉದ್ಯೋಗ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಪ್ರತಿದಿನದ ಆದಾಯ ₹ 375ಕ್ಕಿಂತ ಕಡಿಮೆ ಇರುವವರನ್ನು ಬಡವರು ಎಂದು ಈ ವರದಿ ಹೇಳಿದೆ.

ಹಲವು ಕುಟುಂಬಗಳು ಆದಾಯ ಕೊರತೆಯನ್ನು ಎದುರಿಸಲು ಆಹಾರ ವಸ್ತುಗಳ ಮೇಲೆ ಖರ್ಚು ಕಡಿಮೆ ಮಾಡಲು ಶುರು ಮಾಡಿದವು. ಈ ಕುಟುಂಬಗಳು ಖರ್ಚು ನಿಭಾಯಿಸಲು ಸಾಲ ಕೂಡ ಮಾಡಿವೆ. ಹಿಂದಿನ ವರ್ಷದ ಲಾಕ್‌ಡೌನ್‌ ವೇಳೆ ಕೆಲಸ ಕಳೆದುಕೊಂಡ, 25 ವರ್ಷ ವಯಸ್ಸಿನೊಳಗಿನ ಪ್ರತಿ ಮೂವರ ಪೈಕಿ ಒಬ್ಬರಿಗೆ ವರ್ಷಾಂತ್ಯದ ಹೊತ್ತಿನಲ್ಲಿಯೂ ಹೊಸ ಕೆಲಸ ಹುಡುಕಿಕೊಳ್ಳಲು ಆಗಿಲ್ಲ.

‘ಎರಡು ಕಾರಣಗಳಿಂದಾಗಿ ಈಗ ಸರ್ಕಾರದ ಕಡೆಯಿಂದ ಹೆಚ್ಚುವರಿ ನೆರವಿನ ಅಗತ್ಯವಿದೆ. ಸಾಂಕ್ರಾಮಿಕದ ಮೊದಲ ವರ್ಷದಲ್ಲಿ ಆದ ನಷ್ಟಕ್ಕೆ ಪರಿಹಾರ ರೂಪದಲ್ಲಿ ಸರ್ಕಾರ ನೆರವು ನೀಡಬೇಕು. ಎರಡನೆಯ ಅಲೆಯ ಪರಿಣಾಮವನ್ನು ಅಂದಾಜಿಸಿ ಕೂಡ ನೆರವು ಒದಗಿಸಬೇಕು’ ಎಂದು ವರದಿ ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು