ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಲಸಿಕೆ ಅಭಿಯಾನ ಶೀಘ್ರ: ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿಕೆ

ಆರೋಗ್ಯ ಸಿಬ್ಬಂದಿಗೆ ಮೊದಲ ಒಂದು ಕೋಟಿ ಲಸಿಕೆ
Last Updated 4 ಡಿಸೆಂಬರ್ 2020, 22:45 IST
ಅಕ್ಷರ ಗಾತ್ರ

ನವದೆಹಲಿ: ಸುಮಾರು 3 ಕೋಟಿ ಜನರಿಗೆ ಲಸಿಕೆ ನೀಡುವ ಮೂಲಕ ಕೋವಿಡ್ ಲಸಿಕಾ ಅಭಿಯಾನಕ್ಕೆ ಭಾರತ ಚಾಲನೆ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಶುಕ್ರವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಅವರು ಮಾತನಾಡಿದರು.

‘ವೈದ್ಯರು, ನರ್ಸ್‌ಗಳು ಸೇರಿದಂತೆ ಸರ್ಕಾರಿ ಹಾಗೂ ಖಾಸಗಿ ವಲಯದ ಆರೋಗ್ಯ ಸಿಬ್ಬಂದಿಗೆ ಮೊದಲ ಒಂದು ಕೋಟಿ ಲಸಿಕೆ ಮೀಸಲು. ಉಳಿದ ಎರಡು ಕೋಟಿ ಲಸಿಕೆಯನ್ನು ಕೋವಿಡ್‌ ಯೋಧರಾದ ಪೊಲೀಸರು, ಅರೆ ಸೇನಾ ಪಡೆಯ
ಸಿಬ್ಬಂದಿ ಮತ್ತು ರಕ್ಷಣಾ ಪಡೆಯ ಸಿಬ್ಬಂದಿಗೆ ನೀಡಲಾಗುವುದು. ಗಂಭೀರ ಅನಾರೋಗ್ಯ ಹೊಂದಿರುವ ವೃದ್ಧರಿಗೂ ಮೊದಲ ಹಂತದಲ್ಲಿಯೇ ಆದ್ಯತೆ ದೊರೆಯಲಿದೆ’ ಎಂದು ಮೋದಿ ಹೇಳಿದ್ದಾರೆ.

‘ಲಸಿಕೆಯ ದರ ಎಷ್ಟು ಎಂಬ ಬಗ್ಗೆ ಚಿಂತೆ ಬೇಡ. ಸಾರ್ವಜನಿಕ ಆರೋಗ್ಯವೇ ಸರ್ಕಾರದ ಆದ್ಯತೆ. ರಾಜ್ಯಗಳನ್ನೂ ಈ ಕಾರ್ಯದಲ್ಲಿ ಸಂಪೂರ್ಣ ತೊಡಗಿಸಿಕೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.

‘ಎಂಟು ಕಂಪನಿಯ ಲಸಿಕೆಗಳು ದೇಶದಲ್ಲಿ ತಯಾರಾಗಲಿವೆ. ಭಾರತದ ಮೂರು ಲಸಿಕೆಗಳು ಮನುಷ್ಯರ ಮೇಲೆ ಪ್ರಯೋಗ ಆಗುತ್ತಿವೆ. ವಿಜ್ಞಾನಿಗಳ ಒಪ್ಪಿಗೆ ಸಿಕ್ಕ ತಕ್ಷಣ ಲಸಿಕೆ ಕಾರ್ಯಕ್ರಮ ಶುರುವಾಗಲಿದೆ. ಲಸಿಕೆಗಳು ಯಶಸ್ವಿಯಾಗುವ ಬಗ್ಗೆ ವಿಜ್ಞಾನಿಗಳು ಭರವಸೆ ವ್ಯಕ್ತಪಡಿಸಿದ್ದಾರೆ’ ಎಂದರು.

ಕಾಂಗ್ರೆಸ್ ಮುಖಂಡರಾದ ಅಧಿರ್ ರಂಜನ್ ಚೌಧರಿ, ಗುಲಾಂ ನಬಿ ಆಜಾದ್, ಎನ್‌ಸಿಪಿಯ ಶರದ್ ಪವಾರ್, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮೊದಲಾದವರು ವರ್ಚುವಲ್ ಸಭೆಯಲ್ಲಿ ಭಾಗಿಯಾಗಿದ್ದರು. ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ಪ್ರಲ್ಹಾದ್ ಜೋಷಿ, ಹರ್ಷವರ್ಧನ್ ಇದ್ದರು.

ಪ್ರಧಾನಿ ಹೇಳಿದ್ದು...

* ಲಸಿಕೆ ಕಾರ್ಯಕ್ರಮ, ಲಸಿಕೆ ದಾಸ್ತಾನು ಮೊದಲಾದ ಮಾಹಿತಿಯನ್ನು ನೀಡುವ ‘ಕೊ–ವಿನ್’ ಹೆಸರಿನ ಸಾಫ್ಟ್‌ವೇರ್ ಸಿದ್ಧವಾಗುತ್ತಿದೆ. ರಾಜ್ಯಗಳ ಪ್ರತಿನಿಧಿಗಳನ್ನೂ ಒಳಗೊಂಡ ‘ರಾಷ್ಟ್ರೀಯ ತಜ್ಞರ ತಂಡ’ವು ಅಭಿಯಾನವನ್ನು ಮುನ್ನಡೆಸಲಿದೆ

* ಭವಿಷ್ಯದಲ್ಲಿ ಕೋವಿಡ್ ಯಾವ ಸ್ವರೂಪ ತಾಳುವುದೋ ತಿಳಿದಿಲ್ಲ. ಮಾಸ್ಕ್ ಧರಿಸುವಿಕೆ, ಅಂತರ ಕಾಯ್ದುಕೊಳ್ಳವಿಕೆಯೇ ನಮ್ಮ ದೊಡ್ಡ ಅಸ್ತ್ರಗಳು

* ಲಸಿಕೆ ಲಭ್ಯವಾಗುವ ಅಂತಿಮ ಘಟ್ಟದಲ್ಲಿ ದೇಶ ಇದ್ದು, ಚಿಕ್ಕ ಅಜಾಗರೂಕತೆಯೂ ಹಾನಿ ತಂದೊಡ್ಡಬಲ್ಲದು. ಸೋಂಕು ತಡೆಗೆ ಜನರ ಸಹಕಾರ ಅತಿಮುಖ್ಯ

* ಸಾಮೂಹಿಕ ಲಸಿಕಾ ಕಾರ್ಯಕ್ರಮದ ಬಗ್ಗೆ ರಾಜಕೀಯ ಪಕ್ಷಗಳು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಿ, ವದಂತಿಗಳಿಂದ ಅವರನ್ನು ರಕ್ಷಿಸಬೇಕು

* ಲಸಿಕೆ ವಿತರಣೆಗಾಗಿ ಕೇಂದ್ರವು ರಾಜ್ಯಗಳೊಂದಿಗೆ ಒಟ್ಟಾಗಿ ಕಾರ್ಯನಿರ್ವಹಿಸಲಿದೆ

160 ಕೋಟಿ ಡೋಸ್‌ ಖರೀದಿ ಸಾಧ್ಯತೆ

ಭಾರತವು ಕೋವಿಡ್‌–19 ಲಸಿಕೆಯನ್ನು ಅತ್ಯಂತ ಹೆಚ್ಚು ಖರೀದಿಸಲಿರುವ ದೇಶ ಎಂದು ತಜ್ಞರು ಹೇಳಿದ್ದಾರೆ. 160 ಕೋಟಿ ಡೋಸ್‌ ಲಸಿಕೆಯನ್ನು ಭಾರತ ಖರೀದಿಸಬಹುದು. 80 ಕೋಟಿ ಜನರಿಗೆ ನೀಡಲು ಇಷ್ಟು ಲಸಿಕೆ ಬೇಕಾಗುತ್ತದೆ. ದೇಶದ ಶೇ 60ರಷ್ಟು ಜನಸಂಖ್ಯೆಗೆ ಕೋವಿಡ್‌ ಲಸಿಕೆ ನೀಡಿದರೆ ‘ಗುಂಪು ರೋಗನಿರೋಧಕತೆ’ ಬೆಳೆಸಿಕೊಳ್ಳಲು ಸಾಕಾಗುತ್ತದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಆಕ್ಸ್‌ಫರ್ಡ್‌ ಯುನಿವರ್ಸಿಟಿ–ಆಸ್ಟ್ರಾ ಜೆನೆಕಾ ಲಸಿಕೆಯ 50 ಕೋಟಿ ಡೋಸ್‌, ಅಮೆರಿಕದ ನೊವಾವ್ಯಾಕ್ಸ್‌ ಕಂಪನಿಯ ಲಸಿಕೆಯ ನೂರು ಕೋಟಿ ಡೋಸ್‌ ಮತ್ತು ರಷ್ಯಾದ ಸ್ಪುಟ್ನಿಕ್‌–ವಿ ಲಸಿಕೆಯ 10 ಕೋಟಿ ಡೋಸ್‌ಗಳನ್ನು ಭಾರತ ಖರೀದಿಸಿದೆ ಎಂದು ಅಮೆರಿಕದ ಡ್ಯೂಕ್‌ ಯುನಿವರ್ಸಿಟಿ ಗ್ಲೋಬಲ್‌ ಹೆಲ್ತ್‌ ಇನ್ನೋವೇಷನ್‌ ಸೆಂಟರ್‌ ಹೇಳಿದೆ.

ಲಸಿಕೆಗೆ ಸಂಬಂಧಿಸಿದ ಮಾಹಿತಿಯನ್ನು ಪ್ರತಿ ಎರಡು ವಾರಗಳಿಗೆ ಒಮ್ಮೆ ಪರಿಷ್ಕರಿಸಲಾಗುತ್ತಿದೆ. ನವೆಂಬರ್‌ 30ರ ಮಾಹಿತಿಯ ಪ್ರಕಾರ ಭಾರತವು 160 ಕೋಟಿ ಡೋಸ್‌ ಖರೀದಿಯನ್ನು ಖಚಿತಪಡಿಸಿದೆ. ಭಾರತವು ಮೂರು ಕಂಪನಿಗಳ ಲಸಿಕೆಗಳನ್ನು ಖರೀದಿಸಿದ್ದರೆ ಅಮೆರಿಕ ಮತ್ತು ಐರೋಪ್ಯ ಒಕ್ಕೂಟವು ಆರು ಕಂಪನಿಗಳ ಲಸಿಕೆಗಳನ್ನು ಖರೀದಿಸಿವೆ.

ಕೋವಿಡ್‌ನಿಂದ ಅತಿ ಹೆಚ್ಚು ತೊಂದರೆಗೆ ಒಳಗಾಗಿರುವ ಅಮೆರಿಕವು ಸುಮಾರು ನೂರು ಕೋಟಿ ಡೋಸ್‌ಗಳನ್ನು ಖರೀದಿಸಿದೆ.

ಲಸಿಕೆ ತಯಾರಿ ಸೌಲಭ್ಯ ಹೊಂದಿರುವ ಭಾರತ ಮತ್ತು ಬ್ರೆಜಿಲ್‌ನಂತಹ ದೇಶಗಳು ಲಸಿಕೆಯ ಹೆಚ್ಚು ಡೋಸ್‌ಗಳ ಖರೀದಿಗೆ ಚೌಕಾಸಿ ಮಾಡುವಲ್ಲಿ ಯಶಸ್ವಿಯಾಗಿವೆ. ತಯಾರಿಕೆ ಒಪ್ಪಂದದ ಭಾಗವಾಗಿ ಈ ದೇಶಗಳು ಲಸಿಕೆಯನ್ನು ಖರೀದಿಸಿವೆ ಎಂದು ವಿಶ್ಲೇಷಣೆಯಲ್ಲಿ ಹೇಳಲಾಗಿದೆ.

***

ಕೋವಿಡ್ ಲಸಿಕೆಯ ದರ ಕೈಗೆಟುಕುವ ರೀತಿಯಲ್ಲಿ ಇರಬೇಕು. ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಉಚಿತವಾಗಿ ನೀಡುವುದನ್ನು ಸರ್ಕಾರ ಪರಿಗಣಿಸಬೇಕು

-ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ

***

ಕೊರೊನಾ ವೈರಸ್‌ಗೆ ಲಸಿಕೆ ಸಿಗುವ ದಿನಗಳು ದೂರವಿಲ್ಲ. ಮುಂದಿನ ಕೆಲವೇ ವಾರಗಳಲ್ಲಿ ಲಸಿಕೆಯು ಬಳಕೆಗೆ ಲಭ್ಯವಾಗಲಿದೆ

-ನರೇಂದ್ರ ಮೋದಿ, ಪ್ರಧಾನಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT